ಕೇಂದ್ರದ ಕೈ ಸೇರಿತು ಸ್ವಿಸ್ ಖಾತೆ ಮಾಹಿತಿ! ಮುಂದೇನು?

ಡಿಜಿಟಲ್ ಕನ್ನಡ ಟೀಮ್:

ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರದ ಹೋರಾಟಕ್ಕೆ ಹೊಸ ಬಲ ಬಂದಿದ್ದು, 31 ಲಕ್ಷ ಭಾರತೀಯ ಖಾತೆಗಳ ಮಾಹಿತಿಯನ್ನು ಸ್ವಿಸ್ ಸರ್ಕಾರ ಭಾರತಕ್ಕೆ ನೀಡಿದೆ.

ಪ್ರಧಾನಿ ಹುದ್ದೆಗೆ ಬರುವ ಮುನ್ನ ನೂರು ಕೋಟಿ ಭಾರತೀಯರಿಗೆ ನರೇಂದ್ರ ಮೋದಿ ಸ್ವಿಸ್ ಖಾತೆಯಲ್ಲಿ ಬಚ್ಚಿಟ್ಟಿರುವ ಹಣವನ್ನು ವಾಪಸ್ ತರುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಕಳೆದ ಐದುವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ಕಪ್ಪುಹಣದ ವಿರುದ್ಧ ಹೋರಾಟದ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ. ಈಗ ಆ ಮಾತುಗಳು ನಿಜವಾಗುವ ನಿರೀಕ್ಷೆ ಮೂಡಿದೆ.

ಕಪ್ಪು ಹಣ ದೇಶಕ್ಕೆ ಹಿಂದಿರುಗಿಸುವ ಕೇಂದ್ರ ಸರ್ಕಾರದ ನಿರಂತರ ಹೋರಾಟದಲ್ಲಿ ಇದು ಮಹತ್ವದ ಮೈಲುಗಲ್ಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ನೀಡಲಾಗಿರುವ ಪಟ್ಟಿಯಲ್ಲಿ ರಾಜಕಾರಣಿಗಳು, ವ್ಯವಹಾರಸ್ಥರು ಸೇರಿದಂತೆ ಹಲವಾರು ಗಣ್ಯರ ಹೆಸರು ಇದೆ ಎನ್ನಲಾಗುತ್ತಿದೆ.

ಇದೇ ಮೊದಲ ಬಾರಿಗೆ ಎಇಒಐ ಜಾಗತಿಕ ಮಾನದಂಡಗಳ ಚೌಕಟ್ಟಿನೊಳಗೆ ಸ್ವಿಜರ್ಲೆಂಡ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ಮೂಲಕ ಖಾತೆದಾರರ ಮಾಹಿತಿ ಭಾರತದೊಂದಿಗೆ ವಿನಿಮಯ ಮಾಡಿಕೊಂಡಿದೆ. ಇದಲ್ಲದೆ, 75 ದೇಶಗಳಲ್ಲಿ ಭಾರತೀಯರು ಖಾತೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

2016ರಲ್ಲಿ ಸ್ವಿಸ್ ಸರ್ಕಾರ ಮತ್ತು ಭಾರತ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತಾದರೂ ಅದು 2019ರಿಂದ ಜಾರಿಗೆ ಬಂದಿದೆ. ಮೂಲಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಸ್ವಿಸ್ ಖಾತೆ ಹಣ ಶೇ.50ರಷ್ಟು ಕಡಿಮೆ ಆಗಿದ್ದು, ಅನೇಕರು ತಮ್ಮ ಖಾತೆಯನ್ನೇ ಮುಚ್ಚಿದ್ದಾರೆ. ಸದ್ಯ ಅವರ ಮಾಹಿತಿ ಕೂಡ ಇದ್ದು ತನಿಖೆಗೆ ಈ ಮಾಹಿತಿ ಸಹಕಾರಿಯಾಗುವ ನಿರೀಕ್ಷೆ ಇದೆ.

Leave a Reply