ರಾಜ್ಯ ರಾಜಕಾರಣದ ಅಖಾಡಕ್ಕೆ B.L ಸಂತೋಷ್ ಎಂಟ್ರಿ..! CMಗೆ ಢವಢವ..!?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳು ಕೆಲಸ ಮಾಡ್ತಿರೋದು ಈಗ ಬಹಿರಂಗ ಸತ್ಯ. ರಾಜ್ಯ ರಾಜಕಾರಣದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿರ್ಧಾರಕ್ಕೆ ಸಡ್ಡು ಹೊಡೆದು ಯಾವುದೇ ನಿರ್ಧಾರ ಹೊರಬಿತ್ತು ಎಂದರೆ ಅದರಲ್ಲಿ BJP ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರ ನಿರ್ಧಾರ ಅನ್ನೋದರಲ್ಲಿ ಎರಡನೇ ಮಾತಿಲ್ಲ. ಪರಿಸ್ಥಿತಿ ಹೀಗಿರುವಾಗ ಸಂತೋಷ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸೂಚನೆ ಬಿಎಸ್ ವೈ ನಿದ್ದೆ ಕೆಡಿಸಿದೆ.

ಕಾರಣ, ಈಗಾಗಲೇ ಸ್ಪೀಕರ್ ಆಯ್ಕೆಯಿಂದ ಹಿಡಿದು, ಮೂವರು ಡಿಸಿಎಂ ನೇಮಕ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ, ಬಿಜೆಪಿಯಿಂದ ಯಡಿಯೂರಪ್ಪ ಉಚ್ಛಾಟನೆ ಮಾಡಿದ್ದ ಭಾನುಪ್ರಕಾಶ್ ಹಾಗೂ ನಿರ್ಮಲ್ ಕುಮಾರ್ ಸುರಾನಾ ರಾಜ್ಯ ಉಪಾಧ್ಯಕ್ಷರಾಗಿ ಮರು ನೇಮಕ. ಬಿಬಿಎಂಪಿ ಮೇಯರ್ ಆಗಿ ಯಡಿಯೂರಪ್ಪ ಆಯ್ಕೆ ಮಾಡಿದ್ದ ಎಲ್ಲಾ ಆಕಾಂಕ್ಷಿಗಳನ್ನು ಪಕ್ಕಕ್ಕಿಟ್ಟು ಸಂಘ ಪರಿವಾರದ ಗೌತಮ್ ಕುಮಾರ್ ಜೈನ್ ಆಯ್ಕೆ… ಹೀಗೆ ಸಾಲು ಇಲ್ಲಿ ನಿರ್ಧಾರ BJP ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರದ್ದು.

ಇಷ್ಟು ದಿನ ಯಾರಿಗೂ ತಿಳಿಯದಂತೆ ರಾಜಕೀಯ ದಾಳ ಉರುಳಿಸುತ್ತಿದ್ದ ಬಿ.ಎಲ್ ಸಂತೋಷ್ ಇದೀಗ ನೇರವಾಗಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ದೋಸ್ತಿ ಸರ್ಕಾರ ಉರುಳಿಸಲು ಅಹಕಾರ ಕೊಟ್ಟ ಅನರ್ಹ ಶಾಸಕರು ಬಿಎಸ್ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ರಾಜಕಾರಣ ಮಾಡಲು ಬಿಜೆಪಿಯತ್ತ ಮುಖ ಮಾಡಿದವರು. ಆದ್ರೀಗ ಕಾನೂನು ಹೋರಾಟಕ್ಕೆ ಬಿಜೆಪಿಯಲ್ಲಿ ಸಂಪೂರ್ಣ ಸಪೋರ್ಟ್ ಸಿಗ್ತಿಲ್ಲ ಅನ್ನೋ ಟೆನ್ಷನ್‌ ನಡುವೆ ಬಿ.ಎಸ್ ಯಡಿಯೂರಪ್ಪ ಧೈರ್ಯ ತುಂಬುವ ಕೆಲಸ ಮಾಡಿದ್ರು. ಆದ್ರೀಗ ಬಿ.ಎಸ್ ಯಡಿಯೂರಪ್ಪ ನಡೆಸಿದ ಆಪರೇಷನ್ ಕಮಲದ ಕುಡಿಗಳನ್ನು ಸಂತೋಷ್ ಬುಟ್ಟಿಗೆ ಹಾಕಿಕೊಳ್ಳಲು ತಯಾರಿ ನಡೆಸಿದ್ದಾರೆ. ಬೈ ಎಲೆಕ್ಷನ್​, ಕಾನೂನು ಹೋರಾಟದ ಜೊತೆಗೆ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಗಳಲ್ಲಿ ಮೂಲ ಬಿಜೆಪಿಗರ ವಿರೋಧದ ಸಂಕಷ್ಟಕ್ಕೆ ಸಿಲುಕಿರುವ ಅನರ್ಹ ಶಾಸಕರ ಜೊತೆಗೆ ಸಭೆ ನಡೆಸಿದ್ದಾರೆ. ಅನರ್ಹ ಶಾಸಕರಾದ ಮುನಿರತ್ನ, ಭೈರತಿ ಬಸವರಾಜು, ಎಸ್​​.ಟಿ ಸೋಮಶೇಖರ್​ ಜೊತೆ ಗೌಪ್ಯ ಸಭೆ ನಡೆಸಿದ್ದು, ಮುಂದಿನ ರಾಜಕೀಯ ದಾರಿ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸ್ವತಃ ಬಿ.ಎಲ್ ಸಂತೋಷ್ ಅವರೇ ನೇರವಾಗಿ ಅನರ್ಹ ಶಾಸಕರನ್ನು ಕರೆಸಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್​ ಜೊತೆ 20 ನಿಮಿಷ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಸಭೆಯಲ್ಲಿ‌ ಅನರ್ಹ ಶಾಸಕರಿಗೆ ಸಂತೋಷ್ ಒಂದು ಪ್ರಶ್ನೆ ಕೇಳಿದ್ದು, ನೀವು ಬಿಜೆಪಿ ಪಕ್ಷಕ್ಕೆ ಸೇರುವ ಉದ್ದೇಶದಿಂದ ರಾಜೀನಾಮೆ ಕೊಟ್ಟಿದ್ದೀರೋ ಅಥವಾ ಬಿ.ಎಸ್ ಯಡಿಯೂರಪ್ಪ ಅವರನ್ನು ನೋಡಿಕೊಂಡು ರಾಜೀನಾಮೆ ಕೊಟ್ಟಿದ್ದೀರೋ ಎನ್ನುವ ಮೂಲಕ ಅನರ್ಹ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಇದು ಬಿ.ಎಸ್ ಯಡಿಯೂರಪ್ಪ ಬಣಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅನರ್ಹ ಶಾಸಕರ ಜೊತೆ ಗೌಪ್ತ ಸಭೆ ನಡೆಸಿದ ಬಳಿಕ ಇಂದು RSS ಕಚೇರಿ ಕೇಶವಕೃಪಾದಲ್ಲಿ ಬೆಂಗಳೂರಿನ ಸಚಿವರು ಹಾಗು ಬಿಜೆಪಿ ಶಾಸಕರ ಜೊತೆ ಆಂತರಿಕ ಸಭೆ ನಡೆಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ RSS ಕಚೇರಿಯಲ್ಲಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ್, ಸಚಿವರಾದ ಆರ್. ಅಶೋಕ್, ಸುರೇಶ್ ಕುಮಾರ್, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಸೇರಿದಂತೆ ಬೆಂಗಳೂರಿನ ಬಿಜೆಪಿ ಶಾಸಕರುಗಳು ಭಾಗಿಯಾಗಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, RSS ಮುಖಂಡರಾದ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿ ಚರ್ಚೆ ನಡೆಸಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಹಿಡಿತ ಸಾಧಿಸಿದ್ದ ಬಿ.ಎಲ್ ಸಂತೋಷ್ ಇದೀಗ ನೇರವಾಗಿ ಸರ್ಕಾರದಲ್ಲಿ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಅನರ್ಹ ಶಾಸಕರು ಎಲ್ಲ ಅನರ್ಹ ಶಾಸಕರ ಜೊತೆ ಸಭೆ ನಡೆಸಿ ಅಂತಿಮ ನಿರ್ಧಾರ ತಿಳಿಸುತ್ತೇವೆ. ನಮಗೆ ನಮ್ಮ ಭವಿಷ್ಯ ಮುಖ್ಯ ಎನ್ನುವ ಮಾತನ್ನಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿ ಪಕ್ಷಕ್ಕೆ ನಿಷ್ಠರಾಗುವ ನಿರ್ಧಾರ ಹೊರ ಬಿದ್ದರೆ ಅನರ್ಹ ಶಾಸಕತ ಸ್ಪರ್ಧೆಗೆ ಅಡ್ಡಿಯಾಗಿರುವ ಸ್ಥಳೀಯ ಬಿಜೆಪಿ ನಾಯಕರನ್ನು ಸಂಘ ಸಮಾಧಾನ ಮಾಡಲಿದೆ. ಒಂದು ವೇಳೆ ಬಿ.ಎಸ್ ಯಡಿಯೂರಪ್ಪ ಅವರಿಗೆ ನಿಷ್ಠೆ ತೋರಿಸುವ ನಿರ್ಧಾರ ಪ್ರಕಟಿಸಿದರೆ ಬೈ ಎಲೆಕ್ಷನ್ ಟಿಕೆಟ್ ವಿಚಾರದಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿ ನಾಯಕರಾದ ಕೆ.ಆರ್ ಪುರಂ ಕ್ಷೇತ್ರದಲ್ಲಿ ನಂದೀಶ್ ರೆಡ್ಡಿ, ರಾಜರಾಜೇಶ್ವರಿ ನಗರದ ಮುನಿರಾಜುಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅನರ್ಹ ಶಾಸಕರ ನಿರ್ಧಾರ ಏನು ಅನ್ನೋದು ಸದ್ಯಕ್ಕೆ ಗುಟ್ಟಾಗಿ ಉಳಿದುಕೊಂಡಿದೆ. ಉಪಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಗೆಲ್ಲಿಸಿಕೊಂಡು ಸರ್ಕಾರ ಸುಭದ್ರ ಮಾಡಿಕೊಳ್ಳುವ ಚಿಂತನೆಯಲ್ಲಿ ಇದ್ದ ಬಿ.ಎಸ್ ಯಡಿಯೂರಪ್ಪಗೆ ಬಿ.ಎಲ್ ಸಂತೋಷ್ ಹೊಸ ಟೆನ್ಷನ್ ಕೊಟ್ಟಿದ್ದಾರೆ. ಒಂದು ವೇಳೆ ಬಿಜೆಪಿಯನ್ನು ನಂಬಿ ಅನರ್ಹ ಶಾಸಕರು ಬಿ.ಎಲ್ ಸಂತೋಷ್ ಬೆಂಬಲಿಸಿದರೆ ಉಪಚುನಾವಣೆ ಬಳಿಕ ಸಿಎಂ ಸ್ಥಾನವನ್ನು ಯಡಿಯೂರಪ್ಪ ಬಿಟ್ಟುಕೊಡಬೇಕಾಗುತ್ತದೆ ಅನ್ನೋ‌ ಮಾತುಗಳು ಕೇಳಿ ಬರುತ್ತಿವೆ.

ಒಂದು ವೇಳೆ ಅನರ್ಹ‌ ಶಾಸಕರು ಬಿ.ಎಸ್ ಯಡಿಯೂರಪ್ಪ ಬೆಂಬಲಕ್ಕೆ‌ ನಿಂತರೆ ಉಪಚುನಾವಣೆಯಲ್ಲಿ ಟಿಕೆಟ್ ಸಿಗುವುದೇ ಅನುಮಾನ ಎನ್ನಲಾಗ್ತಿದೆ. ಒಟ್ಟಾರೆ‌ ಏನೇ ಆದರೂ ತಮ್ಮ ಬುಡಕ್ಕೆ ಅಪಾಯ ಬರುತ್ತದೆ ಎಂಬುದು ಯಡಿಯೂರಪ್ಪ ಅವರ ತಲೆ ಬಿಸಿ ಹೆಚ್ಚಿಸಿದೆ.

Leave a Reply