ಜಾಗತಿಕ ಆರ್ಥಿಕ ಕುಸಿತ ಭಾರತದಂತ ದೇಶಗಳನ್ನು ಹೆಚ್ಚು ಕಾಡಲಿದೆ: ಐಎಂಎಫ್ ಎಚ್ಚರಿಕೆ!

ಡಿಜಿಟಲ್ ಕನ್ನಡ ಟೀಮ್:

ಸದ್ಯದ ಜಾಗತಿಕ ಆರ್ಥಿಕ ಕುಸಿತ ಭಾರತದಂತಹ ರಾಷ್ಟ್ರಗಳ ಆರ್ಥಿಕತೆ ಮೇಲೆ ದೊಡ್ಡ ಹೊಡೆತಗಳನ್ನೇ ನೀಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎಚ್ಚರಿಕೆ ನೀಡಿದೆ.

ಈ ವಿಚಾರವಾಗಿ ಐಎಂಎಫ್ ನ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಾಲಿನಾ ಜಾರ್ಜೆವಾ ಅವರು ಮಾತನಾಡಿದ್ದು, ‘ಪ್ರಸಕ್ತ ಸಾಲಿನಲ್ಲಿ ಜಾಗತಿಕ ಆರ್ಥಿಕತೆ ಬಿಕ್ಕಟ್ಟು ಎದುರಿಸಿದ ಪರಿಣಾಮ ಈ ವರ್ಷ ಆರ್ಥಿಕ ಬೆಳವಣಿಗೆಯಲ್ಲಿ ಶೇ.90ರಷ್ಟು ಕುಸಿತ ಕಂಡಿದೆ. ಇದು ಭಾರತದಂತಹ ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.

ಆರ್ಥಿಕ ಸಮರವೇ ಪ್ರಸ್ತುತ ಜಾಗತೀಕ ಆರ್ಥಿಕ ಕುಸಿತಕ್ಕೆ ಕಾರಣವಾಗಿದ್ದು, ಇದರಿಂದ ಪ್ರತಿಯೊಬ್ಬರಿಗೂ ನಷ್ಟವಾಗಿದೆ. ಮುಂದಿನ ವರ್ಷ ಅಂತ್ಯಕ್ಕೆ ಸುಮಾರು 700 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಉತ್ಪಾದನೆಯಲ್ಲಿ ಕುಂಠಿತವಾಗಲಿದೆ. ಇದು ವಿಶ್ವದ ಜಿಡಿಪಿಯ ಶೇ.0.8ರಷ್ಟಾಗಿದೆ.

ಭಾರತ, ಬ್ರೆಜಿಲ್ ನಂತಹ ಆರ್ಥಿಕವಾಗಿ ಮುನ್ನುಗ್ಗುತ್ತಿರುವ ದೇಶಗಳಿಗೆ ಇದು ದೊಡ್ಡ ಹೊಡೆತ ನೀಡಲಿದೆ. ಅಮೆರಿಕ, ಜರ್ಮನಿಯಲ್ಲಿ ಐತಿಹಾಸಿಕ ದಾಖಲೆ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ವಿವರಿಸಿದ್ದಾರೆ.

ಇನ್ನು ಭಾರತದ ಆರ್ಥಿಕ ಪ್ರಗತಿಯ ಬಗ್ಗೆ ಐಎಂಎಫ್ ತನ್ನ ಅಂದಾಜಿನಲ್ಲಿ ಶೇ. 0.3ರಷ್ಟು ಕಡಿತ ಮಾಡಿದೆ. ಇನ್ನು ಮಂಗಳವಾರ ಆರ್ಬಿಐ ತನ್ನ ವರದಿಯಲ್ಲಿ ಕಳೆದ ಕೆಲವು ತ್ರೈಮಾಸಿಕ ಅವಧಿಗಳಲ್ಲಿ ಕುಸಿತ ಕಂಡಿದ್ದು, ಮುಂದೆ ಇವುಗಳನ್ನು ನಿಭಾಯಿಸಲಿದೆಯಾದರೂ ಕೆಲವು ದಿನಗಳ ಕಾಲ ಇಂತಹ ಆರ್ಥಿಕ ಸಂಕಷ್ಟ ಎದುರಿಸಬೇಕಿದೆ ಎಂದು ಹೇಳಿದೆ.

ಒಟ್ಟಿನಲ್ಲಿ ಆರ್ಬಿಐ ಹಾಗೂ ಐಎಂಎಫ್ ಪ್ರಕಾರ ಪ್ರಸ್ತುತ ಆರ್ಥಿಕ ಸಮಸ್ಯೆ ಇನ್ನು ಕೆಲವು ದಿನಗಳ ಕಾಲ ಮುಂದುವರಿಯಲಿದ್ದು, ಹೆಚ್ಚಿನ ಪರಿಣಾಮ ಬೀರಲಿದೆ ಎಂದೇ ಹೇಳುತ್ತಿವೆ.

Leave a Reply