‘ನನ್ನ ದಾರಿ ನನ್ನದು’: ಸಿದ್ದರಾಮಯ್ಯ ಗುಡುಗು..!?

ಡಿಜಿಟಲ್ ಕನ್ನಡ ಟೀಮ್:

ಪಕ್ಷದಲ್ಲಿ ಮೂಲ ಕಾಂಗ್ರೆಸ್ ನಾಯಕರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಕೂಗು ಜೋರಾಗಿ ಕೇಳಿಬಂದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಹೆಚ್.ಕೆ ಪಾಟೀಲ್ ಅವರನ್ನು ಆಯ್ಕೆ ಮಾಡಲು ಚಿಂತಿಸುತ್ತಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರೋ ಮಾಜಿ ಸಿಎಂ ಸಿದ್ದರಾಮಯ್ಯ, ‘ವಿರೋಧ ಪಕ್ಷದ ನಾಯಕ ಸ್ಥಾನ ಸಿಗದಿದ್ದರೆ ನನ್ನ ದಾರಿ ನನಗೆ’ ಎಂದು ಗುಡುಗಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಮೈತ್ರಿ ಸರ್ಕಾರ ಬೀಳಿಸಲು ಕುತಂತ್ರ ನಡೆಸಿರುವ ಆರೋಪ ಕೇಳಿಬರುವುದರ ಜತೆಗೆ ಮೂಲ ಕಾಂಗ್ರೆಸ್ ನಾಯಕರನ್ನು ಕಡೆಗಣಿಸುತ್ತಿರುವ ಆರೋಪ ಪ್ರಬಲವಾಗಿದೆ. ಈ ಆರೋಪಿಗಳಿಂದ ಸಿದ್ದರಾಮಯ್ಯ, ಪಕ್ಷದಲ್ಲಿ ಶಿಸ್ತು ಬಯಸುವ ಸೋನಿಯಾ ಗಾಂಧಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದಾಗ ಸಿದ್ದರಾಮಯ್ಯ ವಾಕ್ಚಾತುರ್ಯಕ್ಕೆ ಮನಸೋತಿದ್ರು. ಹಾಗಾಗಿ ಸಿದ್ದರಾಮಯ್ಯ ಹೇಳಿದ್ದು ಅಂತಿಮ ಫರ್ಮಾನು ಎನ್ನುವಂತೆ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಬೆಳೆದುಕೊಂಡ್ರು. ಮೂಲ ಕಾಂಗ್ರೆಸ್ಸಿಗ ಅಲ್ಲದಿದ್ದರೂ ಮುಖ್ಯಮಂತ್ರಿ ಪದವಿಗೆ ಏರಿದ್ರು. ಆ ಬಳಿಕ ಮೂಲ ಕಾಂಗ್ರೆಸ್ ನಾಯಕರಿಗಿಂತ ಹೆಚ್ಚು ಪ್ರಬಲವಾಗಿ ಬೆಳೆದರು. ಅದನ್ನೇ ಗುಂಗಿನಲ್ಲಿ ಹಿರಿಯ ನಾಯಕರ ಕಡೆಗಣನೆ ಸಿದ್ದರಾಮಯ್ಯ ಅವರ ಈ ಪರಿಸ್ಥಿತಿಗೆ ಕಾರಣ.

ಸೋನಿಯಾ ಅವರ ನಿರ್ಧಾರದ ಮೇಲೆ ಮೈತ್ರಿ ಸರ್ಕಾರ ರಚನೆ ಆಗಿತ್ತು. ಆದರೆ ಜೆಡಿಎಸ್ ಮೇಲಿನ ಹಳೇ ಕೋಪದಿಂದ ಸಿದ್ದರಾಮಯ್ಯ ಮೈತ್ರಿ ಸರ್ಕಾರ ಬೀಳಿಸಿದ್ರು ಅನ್ನೋ ಆರೋಪ ಸೋನಿಯಾ ಅವರ ನೆಮ್ಮದಿ ಕೆಡಿಸಿತು. ಹೀಗಾಗಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ತಂತ್ರದ ಮೂಲಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ದೂರವಿಡಲು ನಿರ್ಧರಿಸಲಾಗಿದೆ. ಇದ್ರಿಂದ ಸಿದ್ದರಾಮಯ್ಯ ಕಣ್ಣು ಕೆಂಪಾಗಿದೆ.

ಈಗಾಗಲೇ ದೆಹಲಿಯಲ್ಲಿ ಸೋನಿಯಾ ಗಾಂಧಿ ಭೇಟಿಗೆ ಯತ್ನಿಸಿದ್ದ ಸಿದ್ದರಾಮಯ್ಯ ಭೇಟಿ ಸಾಧ್ಯವಾಗದೆ ವಾಪಸ್ಸಾಗಿದ್ರು. ಆ ಬಳಿಕ ಶಾಸಕಾಂಗ ಪಕ್ಷದ ನಾಯಕ ನಾನೇ, ಹಾಗಾಗಿ ವಿರೋಧ ಪಕ್ಷದ ನಾಯಕನನ್ನಾಗಿ ನನ್ನನ್ನೇ ಮಾಡುತ್ತಾರೆ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಆದರೂ ಹೈಕಮಾಂಡ್ ಮಾತ್ರ ಸ್ಥಳೀಯ ನಾಯಕ ಮನಸ್ಥಿತಿ ಅರಿಯುವ ಉದ್ದೇಶದಿಂದ ಮಧುಸೂದನ್ ಮಿಸ್ತ್ರಿ ಅವರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಆಗಿದ್ದರೂ ಮಧುಸೂದನ್ ಅವರನ್ನು ಕಳುಹಿಸಿದ್ದು ಸಿದ್ದರಾಮಯ್ಯ ಪರವಾಗಿ ಕೆಲಸ ಮಾಡಬಾರದು ಅನ್ನೋ ಕಾರಣಕ್ಕೆ ಅನ್ನೋ ಮಾತುಗಳು ಕೇಳಿ ಬಂದಿದೆ. ಮಧುಸೂದನ್ ಮೀಸ್ತ್ರಿ ಆಗಮನಕ್ಕೆ ಸಿಡಿಮಿಡಿ ಆಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯಕ್ಕೆ ಮಧುಸೂದನ್ ಮಿಸ್ತ್ರಿ ಬರುತ್ತಿರುವ ಬಗ್ಗೆ ನನಗೇನು ಮಾಹಿತಿ ಇಲ್ಲ ಎಂದು ಅಸಮಾಧಾನ ಹೊರ ಹಾಕಿದ್ರು. ಮಿಸ್ತ್ರಿ ಅಭಿಪ್ರಾಯ ಸಂಗ್ರಹದ ಬಳಿಕ ನಿವಾಸದಲ್ಲೇ ಸಭೆ ನಡೆಸಿದ್ದ ಸಿದ್ದರಾಮಯ್ಯ, ವಿರೋಧ ಪಕ್ಷದ ಸ್ಥಾನ ಪಡೆಯಲು ಏನು ಬೇಕೋ ಅದೆಲ್ಲವನ್ನೂ ಮಾಡಿದ್ರು. ಬೆಂಬಲಿಗರ ಸಿಹಿ ಸಂಗ್ರಹ ಮಾಡಿ ಹೈಕಮಾಂಡ್‌ಗೆ ತಲುಪಿಸುವ ಕೆಲಸ ಮಾಡಿದ್ರು.

ಇಂದು ದೆಹಲಿಯಲ್ಲಿ ಮಾತನಾಡಿದ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ವಿರೋಧ ಪಕ್ಷದ ನಾಯಕನ ಆಯ್ಕೆ ಇಂದು ಅಂತಿಮ ಆಗಲಿದೆ ಎಂದರು. ಕೊನೆಯ ಕಸರತ್ತು ಎನ್ನುವ ಹಾಗೆ ವೇಣುಗೋಪಾಲ್ ಕೂಡ ಸೋನಿಯಾ ಗಾಂಧಿ ಮೇಲೆ ಒತ್ತಡ ಹೇರುವ ಕೆಲಸವನ್ನು ಮಾಡಿದ್ರು. ಆದರೂ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಸಲೀಸಾಗಿ ಮಣೆ ಹಾಕದೆ ವಿಳಂಬ ಮಾಡುತ್ತಿದೆ.

ನಾಳೆಯಿಂದ ಬಿಜೆಪಿ‌ ಸರ್ಕಾರದ ಮೊದಲ ಅಧಿವೇಶನ ಆರಂಭವಾಗ್ತಿದೆ. ನಾನು ಸದನದಲ್ಲಿ ಭಾಗಿಯಾಗುವುದು ಹೇಗೆ..? ಕೇವಲ ಶಾಸಕಾಂಗ ಪಕ್ಷದ ನಾಯಕನಾಗಿ ಕೆಲಸ ಮಾಡುವಾಗ ಗೊಂದಲ ಉಂಟಾಗುವುದಿಲ್ಲವೇ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ನಡೆದುಕೊಳ್ಳುತ್ತಿರುವ ರೀತಿಯಿಂದ ಮನಸ್ಸಿಗೆ ಬೇಸರವಾಗಿದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಇನ್ನು ಕಾಂಗ್ರೆಸ್ ಹೈಕಮಾಂಡ್ ಏನಾದರೂ ಹಠಕ್ಕೆ ಬಿದ್ದು ನನಗೆ ವಿರೋಧ ಪಕ್ಷದ ನಾಯನ ಸ್ಥಾನವನ್ನು ಕೊಡದೇ ಹೋದರೆ ನನ್ನ ದಾರಿ ನನ್ನದು ಎನ್ನುವ ಮಾತನ್ನೂ ಹೇಳಿದ್ದಾರೆ ಎನ್ನಲಾಗ್ತಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟು ಹೊರ ಹೋಗುವ ಸೂಚನೆ ಸಿಗ್ತಿದ್ದ ಹಾಗೆ ದೆಹಲಿಯಲ್ಲಿ ಲೆಕ್ಕಾಚಾರ ಶುರುವಾಗಿದ್ದು, ಯಾರನ್ನು ವಿರೋಧ ಪಕ್ಷದ ನಾಯಕರಾಗಿ ಮಾಡಬೇಕು. ಯಾರನ್ನು ಮಾಡಿದ್ರೆ ಪಕ್ಷಕ್ಕೆ ಭವಿಷ್ಯದಲ್ಲಿ ಎಲ್ಲಾ ರೀತಿಯಲ್ಲಿ ಸಹಕಾರಿ‌ ಆಗಲಿದೆ ಎನ್ನುವ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗ್ತಿದೆ. ಒಂದು ವೇಳೆ ಸಿದ್ದರಾಮಯ್ಯನನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ರೆ ಹಿರಿಯ ಕಾಂಗ್ರೆಸ್ ನಾಯಕರ ನಡೆ ಏನಾಗಲಿದೆ..? ವಿರೋಧ ಪಕ್ಷದ ನಾಯಕನನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡದಿದ್ರೆ ಆಗುವ ನಷ್ಟ ಏನು ಎನ್ನುವ ಬಗ್ಗೆ‌ ಚರ್ಚೆ ನಡೆಸಿದ್ದಾರೆ. ಯಾರನ್ನೇ ಆಯ್ಕೆ‌ ಮಾಡಿದರೂ ಅಸಮಾಧಾನ ಭುಗಿಲೇಳುವ ಸಾಧ್ಯತೆ ಹೆಚ್ಚಾಗಿರುವ ಕಾರಣ, ವಿರೋಧ ಪಕ್ಷದ ನಾಯಕನ‌ ಆಯ್ಕೆಯನ್ನು ತಾತ್ಕಾಲಿವಾಗಿ ಮುಂದೂಡಿಕೆ ಮಾಡುವ ಬಗ್ಗೆಯೂ ಸಮಾಲೋಚನೆ ನಡೆಯುತ್ತಿದೆ‌.

Leave a Reply