ಸ್ವಪಕ್ಷೀಯರ ಬಂಡಾಯ, ಅನರ್ಹರ ಬೆದರಿಕೆ, ಸಂಘದ ಅಸಹಕಾರ! ಹೈರಾಣಾದ ಸಿಎಂ ಬಿಎಸ್ ವೈ!

ಡಿಜಿಟಲ್ ಕನ್ನಡ ಟೀಮ್:

ನಮಗೆ ನಿಗಮ ಮಂಡಳಿ ಬೇಡ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬೇಕು ಅಂತಾ ಸ್ಥಳೀಯ ಬಿಜೆಪಿ ನಾಯಕರು, ನಮ್ಮ ರಾಜಕೀಯ ಭವಿಷ್ಯ ಹಾಳು ಮಾಡಿದರೆ ನಿಮ್ಮನ್ನು ಬಿಡುವುದಿಲ್ಲ ಎಂಬ ಅನರ್ಹರ ಬೆದರಿಕೆ, ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ ಸಂಘ ಪರಿವಾರದ ಅಸಹಕಾರದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಿತಿ ಕತ್ತರಿ ಮಧ್ಯೆ ಸಿಕ್ಕ ಅಡಕೆಯಂತಾಗಿದೆ.

ಹೌದು, ಕಾಂಗ್ರೆಸ್, ಜೆಡಿಎಸ್‌ನಿಂದ ಆಪರೇಷನ್ ಕಮಲ ಮಾಡಿದ್ದ ಸಿಎಂ ಯಡಿಯೂರಪ್ಪ, ತಮ್ಮ ಇಚ್ಛೆಗೆ ಪೂರಕವಾಗಿ ರಾಜೀನಾಮೆ ಕೊಟ್ಟವರನ್ನು ಮತ್ತೆ ಮರು ಆಯ್ಕೆ ಮಾಡಿಸಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದೀಗ ರಾಜೀನಾಮೆ ಕೊಟ್ಟು ಬಿಜೆಪಿ ಸೇರಲು ತುದಿಗಾಲಿನಲ್ಲಿ ನಿಂತಿರುವ ಬಹುತೇಕ ಎಲ್ಲರ ಕ್ಷೇತಗಳಲ್ಲೂ ಬಂಡಾಯ ಸ್ಪರ್ಧೆ ಎದುರಾಗಿದೆ. ಇದೇ ಕಾರಣಕ್ಕೆ ಸಿಎಂ ಯಡಿಯೂರಪ್ಪ ಬಂಡಾಯ ಶಮನ ಮಾಡುವ ಉದ್ದೇಶದಿಂದ ಹೊಸಕೋಟೆ, ಕೆ.ಆರ್ ಪುರಂ, ಕಾಗವಾಡ, ಹಿರೇಕೆರೂರು ಕ್ಷೇತ್ರದ ಹಾಲಿ ಬಿಜೆಪಿ‌ ನಾಯಕರಿಗೆ ನಿಗಮ ಮಂಡಳಿ‌ ಅಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನ ಮಾಡಲು ಯತ್ನಿಸಿದ್ರು.

ಆದ್ರೆ‌ ಯಡಿಯೂರಪ್ಪ ಯೋಜನೆಗೆ‌ ಸೂಕ್ತ ಫಲ‌ ಸಿಕ್ಕಿಲ್ಲ. ನೇಮಕವಾಗಿರುವ ಮಾಜಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ಅಧ್ಯಕ್ಷ ಹುದ್ದೆ ತಿರಸ್ಕರಿಸುವ ಮುನ್ಸೂಚನೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಮಾತೃ ಸಂಸ್ಥೆ ಆರೆಸ್ಸೆಸ್ ಕೂಡ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ ಎನ್ನುವ ಮಾಹಿತುಗಳು‌ ಯಡಿಯೂರಪ್ಪ ಆಪ್ತರ ವಲಯದಲ್ಲಿ ಚರ್ಚೆಯಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ, ಹೊಸಕೋಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆದರೆ ಎಂಟಿಬಿ ನಾಗರಾಜ್‌ಗೆ ಬಿಜೆಪಿ ಟಿಕೆಟ್ ಕೊಡುವ ಉದ್ದೇಶದಿಂದ ಶರತ್ ಬಚ್ಚೇಗೌಡ ಅವರನ್ನು ಗೃಹ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಸಿಎಂ ಆದೇಶ ಮಾಡಿದ್ರು. ಆದ್ರೆ ನೇರವಾಗಿ ಹುದ್ದೆ ತಿರಸ್ಕರಿಸಿದ ಶರತ್ ಬಚ್ಚೇಗೌಡ ಹೊಸಕೋಟೆಯಲ್ಲಿ ನಾನು ಉಪಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ನಾನು ಸರ್ಕಾರ ಕೊಟ್ಟಿರುವ ಹುದ್ದೆಯನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಶರತ್ ಬಚ್ಚೇಗೌಡ ನಿರ್ಧಾರದ ಬೆನ್ನಲ್ಲೇ ಎಲ್ಲಾ ನಾಯಕರು ತಮ್ಮ ನಿರ್ಧಾರ ಪ್ರಕಟ ಮಾಡ್ತಿದ್ದಾರೆ. ಅನರ್ಹ ಶಾಸಕ ಶ್ರೀಮಂತ ಪಾಟೀಲ್​ಗೆ ಟಿಕೆಟ್ ಕೊಡೋದಕ್ಕೆ ವಿರೋಧ ಮಾಡಿದ್ದ ರಾಜು ಕಾಗೆಗೆ ಬೆಳಗಾವಿ ಕಾಡಾ ಅಧ್ಯಕ್ಷ ಸ್ಥಾನ ನೀಡಿ ಆದೇಶ ಮಾಡಲಾಗಿತ್ತು. ಆದ್ರೆ ಮುಖ್ಯಮಂತ್ರಿ ಕೊಟ್ಟ ಆಫರ್ ತಿರಸ್ಕರಿಸಿರುವ ರಾಜು ಕಾಗೆ ನನಗೆ ಯಾವ ನಿಗಮವೂ ಬೇಡ ಎಂದಿದ್ದಾರೆ. ಮಾಜಿ ಶಾಸಕನಾಗಿರುವ ರಾಜು ಕಾಗೆ, ಬಿಜೆಪಿ ಟಿಕೆಟ್ ನನಗೇ ಕೊಡಬೇಕು, ಒಂದು ವೇಳೆ ಟಿಕೆಟ್ ಕೊಡದಿದ್ದರೆ ಪಕ್ಷೇತರ ಅಥವಾ ಕಾಂಗ್ರೆಸ್​ನಿಂದ ಸ್ಪರ್ಧಿಸುವುದಾಗಿ ಈ ಹಿಂದೆ ಹೇಳಿಕೆ ನೀಡಿದ್ದದ್ದರು.

ಇತ್ತ ರಾಯಚೂರಿನ ಮಸ್ಕಿ ಮತಕ್ಷೇತ್ರದಲ್ಲಿ ಕೇವಲ 212 ಮತಗಳಿಂದ ಸೋಲುಂಡಿದ್ದ ಬಸನಗೌಡ ತುರವಿಹಾಳ, ಈ ಬಾರೀ ಪ್ರತಾಪಗೌಡ ಪಾಟೀಲ್ ವಿರುದ್ಧ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಆದ್ರೆ ಬಿಜೆಪಿ ಪ್ರತಾಪ್‌ಗೌಡಗೆ ಟಿಕೆಟ್ ಕೊಡುವ ಆಲೋಚನೆಯಲ್ಲಿದೆ. ಹಾಗಾಗಿ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನ ಮಾಡುವ ಕೆಲಸಕ್ಕೆ ಸಿಎಂ ಮುಂದಾಗಿದ್ದರು. ಆದರೆ ಕಾಡಾ ಅದ್ರೆ ಬಸನಗೌಡ ತುರವಿಹಾಳ ಮಾತ್ರ ಹುದ್ದೆ ವಹಿಸಿಕೊಳ್ಳಲು ತಯಾರಿಲ್ಲ. ಇಂದು ಬೆಂಬಲರ ಸಭೆ ಕರೆದಿದ್ದು, ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲು ಬಸನಗೌಡ ತುರವಿಹಾಳ ನಿರ್ಧರಿಸಿದ್ದಾರೆ. ಬಸನಗೌಡ ತುರವಿಹಾಳ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ನಿಷ್ಠಾವಂತರ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಪ್ರಭಾವಿಗಳಿಗೆ ಅಧಿಕಾರದ ಆಸೆ ಸರಿ ಅಲ್ಲ. ಟಿಕೆಟ್ ತಪ್ಪಿಸುವ ಉದ್ದೇಶದಿಂದಲೇ ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದೆಲ್ಲದರ ನಡುವೆ ನಿಗಮ ಮಂಡಳಿ ಸ್ಥಾನ ಸ್ವೀಕಾರ ಮಾಡುವ ಬಗ್ಗೆ ಮಾಜಿ ಶಾಸಕ ಯು.ಬಿ. ಬಣಕಾರ್ ಅಪಸ್ವರ ಎತ್ತಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ನಾನೊಬ್ಬನೇ ಹೋಗಿ ಅಧ್ಯಕ್ಷ ಸ್ಥಾನ ಸ್ವೀಕರಿಸಲು ಸಾಧ್ಯವಿಲ್ಲ. ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿರೋದು ಕ್ಷೇತ್ರದ ಜನತೆಗೆ ಇಷ್ಟವಿಲ್ಲ. ಚುನಾವಣೆಗೆ ನಿಲ್ಲುವಂತೆ ನನಗೆ ಒತ್ತಾಯ ಮಾಡುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ನಿಗಮ ಮಂಡಳಿ ಸ್ಥಾನ ಬೇಡ ಎಂದು ಪರೋಕ್ಷವಾಗಿ ಸಂದೇಶ ರವಾನೆ ಮಾಡಿದ್ದಾರೆ.

ಇವಿಷ್ಟೂ ಉಪಚುನಾವಣೆಯ ಟಿಕೆಟ್ ವಿಚಾರ. ಇನ್ನು ಸದ್ಯ ಸಿಎಂ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿರೋ ಮತ್ತೊಂದು ವಿಚಾರ, ಅಧಿವೇಶನದ ಸಂದರ್ಭದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರೋದು. ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗಳನ್ನು ಸದನದಿಂದ ದೂರ ಇಟ್ಟಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಅಧಿವೇಶನದ ದೃಶ್ಯ ಸೆರೆ ಹಿಡಿಯುವಂತಿಲ್ಲ ಎಂಬ ಆದೇಶ ಹೊರಡಿಸಿದ್ದಾರೆ‌ ಈ ವಿಚಾರ ತಿಳಿದ ಕೂಡಲೇ ಸಿಎಂ ಯಡಿಯೂರಪ್ಪ, ಆದೇಶ ವಾಪಸ್ ಪಡೆಯುವಂತೆ ಮನವೊಲಿಕೆಗೆ ಯತ್ನ ಮಾಡಿದ್ದಾರೆ. ಆದರೆ ಸ್ಪೀಕರ್ ಕಾಗೇರಿ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣಕ್ಕೆ ಸಿಎಂ ಯಡಿಯೂರಪ್ಪ ಬೇಸರಗೊಂಡಿದ್ದಾರೆ. ಸ್ಪೀಕರ್ ಅವರ ಆದೇಶದ ಹಿಂದೆ ಯಡಿಯೂರಪ್ಪ ಅವರಿಗೆ ಮುಖಭಂಗವಾಗುವಂತೆ ಮಾಡಲು ಆರೆಸ್ಸೆಸ್ ಪ್ರಭಾವಿಗಳ ಯೋಜನೆ ಎಂಬ ಮಾತು ಕೇಳಿಬರುತ್ತಿದೆ.

ಯಡಿಯೂರಪ್ಪ ಕೈಗೊಳ್ಳುವ ನಿರ್ಧಾರಗಳು ಉಲ್ಟಾ ಹೊಡೆಯುತ್ತಿವೆ. ಇನ್ನೊಂದೆಡೆ ಪಕ್ಷದಲ್ಲಿ ಯಡಿಯೂರಪ್ಪ ಏನಾದ್ರೂ ನಿರ್ಧಾರ ಕೈಗೊಂಡ್ರೆ ನಳೀನ್ ಕುಮಾರ್ ಕಟೀಲ್ ತಡೆಗೋಡೆಯಾಗಿ ನಿಲ್ತಾರೆ. ಇನ್ನು ಸರ್ಕಾರ ವರ್ಸಸ್ ಮಾಧ್ಯಮ ಆಗೋದು ಬೇಡ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವರಿಕೆ ಮಾಡಿದರೂ ಸಿಎಂ ಮಾತಿಗೆ ಮಾನ್ಯತೆ ಸಿಕ್ಕಿಲ್ಲ. ಇನ್ನು ಬಿಜೆಪಿ ಹೈಕಮಾಂಡ್ ನಾಯಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಿದ್ಧರಿಲ್ಲ. ಈ ಎಲ್ಲ ಅಂಶಗಳು ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರೂ ಅವರಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ. ಬದಲಿಗೆ ಬಿಜೆಪಿ ನಾಯಕ ಯತ್ನಾಳ್ ಅವರು ಹೇಳುತ್ತಿರುವಂತೆ ಯಡಿಯೂರಪ್ಪನವರ ವಿರುದ್ಧ ಪಿತೂರಿ ನಡೆಯುತ್ತಿದೆ ಎಂಬುದಕ್ಕೆ ಈ ಬೆಳವಣಿಗೆಗಳು ಪುಷ್ಠಿ ನೀಡುತ್ತಿವೆ.

Leave a Reply