ಪರಮೇಶ್ವರ್ ಗೆ ಐಟಿ ಶಾಕ್! ಕೇಂದ್ರದ ವಿರುದ್ಧ ಕೈ ನಾಯಕರ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ಅವರ ಮನೆ ಹಾಗೂ ಕಾಲೇಜುಗಳ ಮೇಲೆ ಐಟಿ ದಾಳಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್, ‘ನನ್ನದು ತಪ್ಪಿದ್ದರೆ ದಾಳಿ ಮಾಡಲಿ’ ಎಂದು ಹೇಳಿದ್ದಾರೆ.

ಪರಮೇಶ್ವರ್ ಅವರ ತುಮಕೂರಿನಲ್ಲಿರುವ ಸಿದ್ಧಾರ್ಥ್ ಇಂಜಿನಿಯರಿಂಗ್ ಕಾಲೇಜು, ನೆಲಮಂಗಲದಲ್ಲಿರುವ ಮೆಡಿಕಲ್ ಕಾಲೇಜು, ಸದಾಶಿವನಗರದಲ್ಲಿರು ಮನೆ ಮೇಲೆ ಬೆಂಗಳೂರು ಆದಾಯ ತೆರಿಗೆ ವಿಭಾಗದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಸಿದ್ಧಾರ್ಥ ಕಾಲೇಜಿನ ಮೇಲೆ ಆದಾಯ ತೆರಿಗೆ ಇಲಾಖೆಯ 10ಕ್ಕೂ ಹೆಚ್ಚು ಸಿಬ್ಬಂದಿ ತಂಡ ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಕೋಲಾರದ ಮಾಜಿ ಸಂಸದ ಆರ್.ಎಲ್ ಜಾಲಪ್ಪ ಅವರ ಜಾಲಪ್ಪ ಕಾಲೇಜು ಮೇಲೂ ಐಟಿ ದಾಳಿ ನಡೆದಿದೆ. ಗುರುವಾರ ಬೆಳಗ್ಗೆಯೇ ಇಬ್ಬರು ನಾಯಕರಿಗೆ ಆದಾಯ ತೆರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡುವಾಗ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಟೀಕಿಸಿದ್ದು, ‘ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳಲಾಗುತ್ತಿದೆ. ಇದು ಸುಳ್ಳು ಸರ್ಕಾರದಲ್ಲಿ ಬೇಕಾದಷ್ಟು ಹಣ ಇದೆ. ಹಣ ಇಲ್ಲದಿರುವುದು ನಿಜವೇ ಆದರೆ ಶ್ವೇತಪತ್ರ ಹೊರಡಿಸಲಿ’ ಎಂದು ಆಗ್ರಹಿಸಿದರು.

ಐಟಿ ದಾಳಿ ಕುರಿತು ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.

ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರುಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದೆ. ಕೇಂದ್ರ ಸರ್ಕಾರ ಎಲ್ಲ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇನ್ನು ರಾಜ್ಯದಲ್ಲಿ ಸದನದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿ. ಈ ವಿಚಾರವಾಗಿ ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಡುತ್ತೇವೆ.

  • ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಖಂಡನೀಯ, ಜನರು ಎಲ್ಲವನ್ನು ನೋಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದು ಉತ್ತಮ ಬೆಳವಣಿಗೆಯಲ್ಲ.

  • ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ದೇಶದಲ್ಲಿ ವಿರೋಧ ಪಕ್ಷಗಳು ಇರಬಾರದು ಎಂಬುದು ಬಿಜೆಪಿಯ ಉದ್ದೇಶ. ಹೀಗಾಗಿ ವಿರೋಧ್ಯ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಐಟಿ ದಾಳಿ ಮಾಡಲಾಗುತ್ತಿದೆ.

  • ಪೆಚ್.ಕೆ ಪಾಟೀಲ್, ಮಾಜಿ ಸಚಿವ

Leave a Reply