ಅತ್ತ ರೈತ ಸಂಘಟನೆ, ಇತ್ತ ಜೆಡಿಎಸ್… ಅಧಿವೇಶನದ ಹೊತ್ತಲ್ಲಿ ಬಿಜೆಪಿಗೆ ಪ್ರತಿಭಟನೆ ಬಿಸಿ!

ಡಿಜಿಟಲ್ ಕನ್ನಡ ಟೀಮ್:

ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎರಡು ಪ್ರತಿಭಟನೆಯ ಬಿಸಿ ಅನುಭವಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ.

ರಾಜ್ಯ ಹಾಗೂ ರೈತ ಸರ್ಕಾರಗಳು ರೈತರ ವಿಚಾರವಾಗಿ ನಿರ್ಲಕ್ಷತನ ತೋರುತ್ತಿದೆ ಎಂದು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇದರ ಜತೆಗೆ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಕೂಡ ಪ್ರತಿಭಟನೆ ನಡೆಸಿದೆ.

ಜೆಪಿ ಭವನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹೇಳಿಕೆ ನೀಡಿದ್ದು, ‘ರಾಜ್ಯದಲ್ಲಿ ಪ್ರವಾಹದಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ರೈತರ ಬದುಕು ನಾಷವಾಗಿದೆ. ಆದರೆ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಈಪ್ರವಾಹ ಪೀಡಿತ ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ’ ಎಂದರು.

ಇನ್ನು ರೈತ ಸಂಘಟನೆಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಿಷ್ಟು..,

‘ಕೃಷ್ಣಾ ಜಲಾಶಯ ಎತ್ತರ ಆಗಬೇಕು, ಮಹದಾಯಿ ಯೋಜನೆ ಕೈಗೆತ್ತಿಕೊಳ್ಳಬೇಕು. ಮೇಕೆದಾಟು ಆಣೆಕಟ್ಟು ನಿರ್ಮಾಣ ಯೋಜನೆ ಸೇರಿದಂತೆ ರಾಜ್ಯದಲ್ಲಿ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮೌನ ವಹಿಸಿವೆ. ಈ ಯೋಜನೆಗಳ ಬಗ್ಗೆ ಆಸಕ್ತಿವಹಿಸಲು ನಿಮಗಿರುವ ಸಮಸ್ಯೆ ಏನು?

ರೈತರ ಬಗ್ಗೆ ಕಾಳಜಿ ಇಲ್ಲದಿದ್ದರೆ ಯಡಿಯೂರಪ್ಪನವರೇ ನೀವು ಭಾಷಣ, ಪ್ರಮಾಣವಚನದ ಸಂದರ್ಭಗಳಲ್ಲಿ ರೈತರ ಶಾಲನ್ನು ಬಳಸಬೇಡಿ. ರಾಷ್ಟ್ರಧ್ವಜಕ್ಕೆ ಎಷ್ಟು ಬೆಲೆ ಇದೆಯೋ ನಮ್ಮ ರೈತರ ಹಸಿರು ಶಾಲಿಗೂ ಅಷ್ಟೇ ಬೆಲೆ ಇದೆ. ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ನಾಯಕರುಗಳಿಗೂ ನಮ್ಮ ಶಾಲು ಬೇಕಾಗಿದೆ. ಸಿಕ್ಕಸಿಕ್ಕವರೆಲ್ಲ ನಮ್ಮ ಶಾಲು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಮಾಧ್ಯಮಗಳ ನಿರ್ಬಂಧ ಹೇರಿರುವುದು ಸರಿಯಲ್ಲ. ಹಳ್ಳಿಗಳಲ್ಲಿರುವ ರೈತರಿಗೆ ರಾಜ್ಯದ ಮಾಹಿತಿಗಳನ್ನು ತಲುಪಿಸುವುದೇ ಮಾಧ್ಯಮಗಳು. ಹೀಗಾಗಿ ಅವರ ಮೇಲೆ ನಿರ್ಬಂಧ ಹೇರುವುದು ಎಷ್ಟು ಸರಿ?

ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವೈಫಲ್ಯವಾಗಿದೆ. ಸರ್ಕಾರ ಕೊಟ್ಟ ತಾತ್ಕಾಲಿಕ ಹಣ ಇನ್ನು ರೈತರಿಗೆ ತಲುಪಿಲ್ಲ. ಮನೆ ಕಳೆದುಕೊಂಡವರಿಗೆ ಮನೆ ಇಲ್ಲ. ನೀರು ಶೇಖರಣೆ ವಿಚಾರದಲ್ಲಿ ನಾವು ತೀರಾ ಹಿಂದುಳಿದಿದ್ದೇವೆ. ಕಾವೇರಿ ನೀರು ಮಂಡಳಿ ಮಾದರಿಯಲ್ಲಿ ಕೃಷ್ಣಾ ನೀರು ಮಂಡಳಿ ಸ್ಥಾಪಿಸಿದ್ದರೆ ಪ್ರವಾಹ ಪರಿಸ್ಥಿತಿ ಬರುತ್ತಿರಲಿಲ್ಲ. ನಾಯಕರುಗಳು ನೀಡಿರುವ ಸುಳ್ಳು ಹೇಳಿಕೆಗಳಿಗೆ ಸ್ಪಷ್ಟನೆ ಬೇಕಿದೆ.’

Leave a Reply