ಜಿಎಸ್ಟಿಯಲ್ಲಿ ಭಾರಿ ಪ್ರಮಾಣದ ಮಾರ್ಪಾಡಿಗೆ ಕೇಂದ್ರ ಆದೇಶ! 2 ವರ್ಷಗಳ ನಂತರ ಈ ನಿರ್ಧಾರ ಯಾಕೆ?

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ಏಕರೂಪ ತೆರಿಗೆ ವ್ಯವಸ್ಥೆಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದು ಎರಡು ವರ್ಷಗಳೇ ಕಳೆದಿವೆ. ಆದರೆ ಈಗ ಕೇಂದ್ರ ಸರ್ಕಾರ ಪ್ರಸ್ತುತ ಜಿಎಸ್ಟಿಯಲ್ಲಿ ಭಾರಿ ಪ್ರಮಾಣದ ಮಾರ್ಪಾಡು ಮಾಡಲು ಆದೇಶ ನೀಡಿದೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗಳ ಜತೆ ಸಭೆ ನಡೆಸಲಿದ್ದು, ಇದಕ್ಕೂ ಮುನ್ನ ಗುರುವಾರ ಜಿಎಸ್ಟಿ ಸಂಗ್ರಹಣೆ ಏರಿಕೆ ಮತ್ತು ಆಡಳಿತಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ 12 ಸದಸ್ಯರ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ. ಈ ಸಮಿತಿ ಪ್ರಸ್ತುತ ಜಿಎಸ್ಟಿ ವ್ಯವಸ್ಯನ್ನು ಪರಿಶೀಲಿಸಲಿದ್ದು, ಭಾರಿ ಪ್ರಮಾಣದ ಬದಲಾವಣೆ ತರುವ ಸಾಧ್ಯತೆ ಇದೆ.

ಸದ್ಯದ ನಿರೀಕ್ಷೆ ಪ್ರಕಾರ ಜಿಎಸ್ಟಿಯಲ್ಲಿ ಪ್ರಸ್ತುತ ಸ್ಲ್ಯಾಬ್ ಗಳಲ್ಲಿ ಬದಲಾವಣೆ, ತೆರಿಗೆ ಸೋರಿಕೆ ತಡೆಗೆ ಕ್ರಮ, ತೆರಿಗೆ ಸಂಗ್ರಹ ಏರಿಕೆ ವಿಚಾರವಾಗಿ ಕೇಲವು ಬದಲಾವಣೆಗಳನ್ನು ತರಲಾಗುವುದು. 2017ರ ಜುಲೈನಲ್ಲಿ ಜಿಎಸ್ಟಿ ಪದ್ಧತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು. ಜಿಎಸ್ಟಿ ಜಾರಿಯನ್ನು ತಮ್ಮ ಸರ್ಕಾರದ ದೊಡ್ಡ ಸಾಧನೆಗಳ ಪಟ್ಟಿಯಲ್ಲಿ ಎನ್ಡಿಎ ಸರ್ಕಾರ ಸೇರಿಸಿಕೊಂಡಿತ್ತು. ಆದರೆ ಈಗ ಇದರಲ್ಲಿ ಮಹತ್ವದ ಬದಲಾವಣೆಗೆ ಚಿಂತಿಸುತ್ತಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ.

ಕಳೆದ ಕೆಲವು ತಿಂಗಳುಗಳಿಂದ ಜಿಎಸ್ಟಿ ಮೂಲಕ ತೆರಿಗೆ ಸಂಗ್ರಹ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇ.13ರಷ್ಟು ತೆರಿಗೆ ಸಂಗ್ರಹ ಏರಿಕೆಯಾಗುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ಕೇವಲ ಶೇ.5ರಷ್ಟು ಮಾತ್ರ ಏರಿಕೆ ಕಂಡಿದೆ. ಇನ್ನು ಎರಡು ತಿಂಗಳ ಅವಧಿಯಲ್ಲಿ ಜಿಎಸ್ಟಿ ಮೂಲಕ ಸಂಗ್ರಹವಾದ ತೆರಿಗೆ ಆದಾಯ 1 ಲಕ್ಷ ಕೋಟಿಯ ಒಳಗಿದೆ. ಸುಮಾರು 50 ಸಾವಿರ ಕೋಟಿಯಷ್ಟು ಸೋರಿಕೆಯಾಗಿರುವುದನ್ನು ಸರ್ಕಾರ ಪತ್ತೆಹಚ್ಚಿದ್ದು, ಇದನ್ನು ತಡೆಯಲು ಹಣಕಾಸು ಸಮಿತಿಯು ಜಿಎಸ್ಟಿ ಸ್ಲ್ಯಾಬ್ ಗಳಲ್ಲಿ ಪರಿಶೀಲನೆ ನಡೆಸಲು ಸಲಹೆ ನೀಡಿದೆ. ಹೀಗಾಗಿ ಕೇಂದ್ರ ಸರ್ಕಾರ ಜಿಎಸ್ಟಿಯಲ್ಲಿ ವ್ಯವಸ್ಥಿತ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

Leave a Reply