ಮಾಜಿ ಡಿಸಿಎಂ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ

ಡಿಜಿಟಲ್ ಕನ್ನಡ ಟೀಮ್:

ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ನಿವಾಸ ಹಾಗೂ ಕಾಲೇಜಿನ ಮೇಲೆ ಆದಾಯ ತೆರಿಗೆ ದಾಳಿ ನಡೆದ ಬೆನ್ನಲ್ಲೇ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಎರಡು ದಿನಗಳಿಂದ ಆದಾಯ ತೆರಿಗೆ ಅಧಿಕಾರಿಗಳು ಪರಮೇಶ್ವರ್ ಅವರ ನಿವಾಸದಲ್ಲಿ ತನಿಖೆ ನಡೆಸುತ್ತಿದ್ದು, ಈ ವಿಚಾರಣೆ ಶನಿವಾರ ಬೆಳಗ್ಗಿನ ಜಾವ ಅಂತ್ಯಗೊಂಡಿತ್ತು. ತನಿಖೆ ಅಂತ್ಯದವರೆಗೂ ಪರಮೇಶ್ವರ್ ಅವರ ನಿವಾಸದಲ್ಲೇ ವಿಚಾರಣೆಗೆ ಹಾಜರಾಗಿದ್ದರು.

ವಿಚಾರಣೆ ಮುಕ್ತಾಯದ ನಂತರ ಮನೆಗೆ ತೆರಳಿದ್ದ ರಮೇಶ್ ನಂತರ ನಾಪತ್ತೆಯಾಗಿದ್ದರು ಎಂಬ ವರದಿ ಬಂದಿತ್ತು. ಪೊಲೀಸರ ಕರೆಗೆ ಉತ್ತರಿಸಿದ್ದ ರಮೇಶ್ ತಾವು ಬೆಂಗಳೂರು ವಿವಿ ಆವರಣದಲ್ಲಿ ಇರುವುದಾಗಿ ಮಾಹಿತಿ ನೀಡಿದ್ದರು. ಆದರೆ ನಂತರ ತಮ್ಮ ಆಪ್ತ ಸ್ನೇಹಿತರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಹೇಳಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ರಮೇಶ್ ಅವರನ್ನು ಪೊಲೀಸರು ಹುಡುಕಾಟ ನಡೆಸಿದ ಸಂದರ್ಭದಲ್ಲಿ ಬೆಂಗಳೂರು ವಿವಿ ಬಳಿ ಇರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಮೈದಾನದ ಬಳಿ ಇರುವ ಮರಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸ್ನೇಹಿತರಿಗೆ ಕರೆ ಮಾಡಿದ್ದ ಸಂದರ್ಭದಲ್ಲಿ, ‘ನಾನು ಬಡವ. ನನ್ನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ಅದಿಕಾರಿಗಳು ನನಗೆ ಬಹಳ ಪ್ರಶ್ನೆ ಕೇಳ್ತಾರೆ. ಅವರ ತನಿಖೆ ಎದುರಿಸಲು ನನ್ನಿಂದ ಸಾಧ್ಯವಿಲ್ಲ. ಸದ್ಯ ನಾನು ಬೆಂಗಳೂರು ವಿವಿಯಲ್ಲಿದ್ದೇನೆ’ ಎಂದು ಹೇಳಿದ್ದಾರೆ.

ರಮೇಶ್ ಅವರು ಅನೇಕ ವರ್ಷಗಳಿಂದ ಕೆಪಿಸಿಸಿಯಲ್ಲಿ ಟೈಪಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದವರು, ನಂತರ ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾದಾಗ ಅವರ ಆಪ್ತ ಸಹಾಯಕರಾಗಿ ನೇಮಕಗೊಂಡಿದ್ದರು. ಸಾವು ಇಡೀ ಪ್ರಕರಣಕ್ಕೆ ದೊಡ್ಡ ತಿರುವು ಪಡೆದಿದೆ. ರಮೇಶ್ ಅವರ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್, ‘ರಮೇಶ್ ಬಹಳ ಒಳ್ಳೆಯ ಹುಡುಗ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದ ಸಮಯದಿಂದ ನಾನು ಆತನನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದೆ. ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ. ಆತ ಈ ರೀತಿ ಮಾಡಿಕೊಂಡಿದ್ದಾನೆ ಎಂದರೆ ಬೇಸರವಾಗುತ್ತಿದೆ. ಬೆಳಗ್ಗಿನ ಜಾವದವರೆಗೂ ನಮ್ಮ ಮನೆಯಲ್ಲೇ ಇದ್ದ. ತನಿಖೆ ಮುಗಿದ ಬಳಿಕ, ಇದೆಲ್ಲ ಏನೂ ಆಗಲ್ಲ ಚಿಂತಿಸಬೇಡ ಎಂದು ಹೇಳಿ ಕಳುಹಿಸಿದ್ದೆ. ಆದರೆ ಆತ ಆತ್ಮಹತ್ಯೆ ಯಾಕೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಿಲ್ಲ. ನಾನು ಈಗ ಅಲ್ಲಿಗೆ ತೆರಳುತ್ತಿದ್ದೇನೆ’ ಎಂದರು.

Leave a Reply