ಅಂತಿಮ ಘಟ್ಟಕ್ಕೆ ಅಯೋಧ್ಯೆ ವಿಚಾರಣೆ! ಸೆಕ್ಷನ್ 144 ಜಾರಿ

ಡಿಜಿಟಲ್ ಕನ್ನಡ ಟೀಮ್:

ಅಕ್ಟೋಬರ್ 17ರ ಒಳಗಾಗಿ ಅಯೋಧ್ಯೆ ವಿವಾದಿತ ಭೂಮಿ ವಿಚಾರಣೆ ಮುಕ್ತಾಯಗೊಳಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದ್ದು, ಇಂದು ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ತಲುಪಿದೆ. ಕಳೆದ ಮೂರು ದಶಕಗಳ ಕಾಲ ಭಾರತದಲ್ಲಿ ಹಿಂದೂ ಹಾಗೂ ಮುಸಲ್ಮಾನ ಸಮುದಾಯಗಳ ನಡುವಣ ಸಂಘರ್ಷದ ಪ್ರಕರಣವಾಗಿರುವ ಅಯೋಧ್ಯೆ ವಿಚಾರ ಸೂಕ್ಷ್ಮ ವಿಚಾರವಾಗಿರುವ ಪರಿಣಾಮ ಅಯೋಧ್ಯೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಒಂದು ವಾರಗಳ ಕಾಲ ದಸರಾ ರಜೆ ನಂತರ ಸೋಮವಾರ ಪ್ರಕರಣದ ವಿಚಾರಣೆ ನಡೆಯಲಿದ್ದು, ಈ ಪ್ರಕರಣದ 38ನೇ ವಿಚಾರಣೆ ದಿನವಾಗಿದೆ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ನಿಗದಿತ ದಿನದ ಒಳಗಾಗಿ ಪ್ರಕರಣ ಇತ್ಯರ್ಥ ಮಾಡಲು ನಿರ್ಧರಿಸಿದೆ. ಪ್ರಕರಣದ ತೀರ್ಪು ಸನಿಹದಲ್ಲಿರುವ ಕಾರಣ ಡಿಸೆಂಬರ್ 10ರವರೆಗೂ ಅಯೋಧ್ಯೆ ಜಿಲ್ಲಾಡಳಿತ ಸೆಕ್ಷನ್ 144 ಜಾರಿಗೊಳಿಸಿದೆ. ಆ ಮೂಲಕ ಜಿಲ್ಲೆಯ ಯಾವುದೇ ಸ್ಥಳದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಜನರು ಗುಂಪು ಕಟ್ಟುವಂತಿಲ್ಲ.

ಆರಂಭದಲ್ಲಿ ಅಯೋಧ್ಯೆ ಪ್ರಕರಣವನ್ನು ರಾಜಿ ಸಂದಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿತ್ತು. ಆದರೆ ರಾಜಿ ಯಶಸ್ವಿಯಾಗದ ಪರಿಣಾಮ ಆಗಸ್ಟ್ 6ರಿಂದ ಸುಪ್ರೀಂ ಕೋರ್ಟ್ ನ ಪಂಚ ಪೀಠ, ಅಕ್ಟೋಬರ್ 16ರ ಒಳಗಾಗಿ ಪ್ರಕರಣದ ವಿಚಾರಣೆ ಅಂತ್ಯಗೊಳಿಸಲು ಗಡವು ಹಾಕಿಕೊಂಡು ಪ್ರತಿನಿತ್ಯ ವಿಚಾರಣೆ ನಡೆಸಿತ್ತು. ಇಂದಿನಿಂದ ಮೂರುದಿನಗಳ ಕಾಲ ಅಂತಿಮ ಘಟ್ಟದ ವಿಚಾರಣೆ ನಡೆಯಲಿದ್ದು, ಅಕ್ಟೋಬರ್ 17ರಂದು ತೀರ್ಪು ಪ್ರಕಟವಾಗಲಿದೆ.

ಅಯೋಧ್ಯೆಯ 2.77 ಎಕರೆ ವಿವಾದಿತ ಭೂಮಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನಾಲ್ಕು ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ್ದ ಅಲಹಬಾದ್ ಹೈಕೋರ್ಟ್ 2010ರಲ್ಲಿ ವಿವಾದಿತ ಜಾಗವನ್ನು ಮೂರು ಭಾಗವಾಗಿ ವಿಂಗಡಿಸಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ್ ಲಲ್ಲಾಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಒಟ್ಟು 14 ಮೇಲ್ಮನವಿಗಳು ಸುಪ್ರೀಂ ಕೋರ್ಟ್ ನಲ್ಲಿ ದಾಖಲಾದವು. ಈಗ ಸುದೀರ್ಘ 9 ವರ್ಷಗಳ ನಂತರ ಮೇಲ್ಮನವಿ ಅರ್ಜಿ ವಿಚಾರಣೆ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ.

Leave a Reply