ಸಾಮಾಜಿಕ ಜಾಲತಾಣಗಳಲ್ಲಿ ಜಿಯೋ, ಏರ್ ಟೆಲ್, ವೊಡಾಫೋನ್ ಕಿತ್ತಾಟ!

ಡಿಜಿಟಲ್ ಕನ್ನಡ ಟೀಮ್:

ಸುದೀರ್ಘ ಎರಡು ವರ್ಷಗಳ ಕಾಲ ಗ್ರಾಹಕರಿಗೆ ಉಚಿತ ಕರೆ ಸೌಲಭ್ಯ ನೀಡಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಬಿರುಗಾಳಿಯನ್ನೇ ಸೃಷ್ಟಿಸಿರುವ ರಿಲಾಯನ್ಸ್ ಜಿಯೋ, ಕೆಲ ದಿನಗಳ ಹಿಂದೆ ಬೇರೆ ಕಂಪನಿಗಳ ಸಂಖ್ಯೆಗಳ ಕರೆಗೆ 6 ಪೈಸೆ ಶುಲ್ಕ ವಿಧಿಸಿ ಎಲ್ಲರ ಹುಬ್ಬೇರಿಸಿತ್ತು. ಜಿಯೋನ ಈ ನಡೆ ಈಗ ವ್ಯಾಪಕ ಚರ್ಚೆಯಾಗುತ್ತಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟೆಲಿಕಾಂ ಕಂಪನಿಗಳು ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಳ್ಳುತ್ತಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಎಂಜಾಯ್ ಮಾಡುತ್ತಿದ್ದಾರೆ.

ಕಡಿಮೆ ಬೆಲೆಗೆ ಇಂಟರ್ ನೆಟ್ ಡಾಟಾ ಹಾಗೂ ಉಚಿತ ಕರೆ ನೀಡಿದ್ದ ಜಿಯೋ ಇತರೆ ಕಂಪನಿಗಳಿಗೆ ದೊಡ್ಡ ಮಟ್ಟದಲ್ಲೇ ಟಕ್ಕರ್ ಕೊಟ್ಟಿತು. ಪರಿಣಾಮ ಇತರೆ ಕಂಪನಿಗಳು ಬೇರೆ ವಿಧಿ ಇಲ್ಲದೇ ಗ್ರಾಹಕರಿಗೆ ಕಡಿಮೆ ದರದಲ್ಲಿ ಈ ಸೇವೆ ನೀಡಬೇಕಾಯಿತು. ಕಳೆದ ವಾರ ಜಿಯೋ ಹೊರತಾದ ಸಂಖ್ಯೆಗಳಿಗೆ ಮಾಡುವ ಕರೆಯಲ್ಲಿ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಪಡಿಸಿರುವ ಜಿಯೋ ತನ್ನ ಉಚಿತ ಕರೆ ಸೇವೆಯನ್ನು ಒಂದು ಹಂತಕ್ಕೆ ನಿಲ್ಲಿಸಿದೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಏರ್ ಟೆಲ್ ಹಾಗೂ ವೊಡಾಫೋನ್ ಕಂಪನಿಗಳು ಜಿಯೋ ವಿರುದ್ಧ ಟ್ರೋಲ್ ಮಾಡಿ ತಮ್ಮ ಮಾರ್ಕೆಟಿಂಗ್ ಮಾಡಿಕೊಳ್ಳುತ್ತಿವೆ. ಇದಕ್ಕೆ ಜಿಯೋ ಕೂಡ ಪ್ರತಿ ಟ್ರೋಲ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

Leave a Reply