ಕಿಚ್ಚನ ಅಭಿಮಾನಿ ಮೇಲೆ ವಿನಯ್ ಗುರೂಜಿ ಶಿಷ್ಯರ ಗೂಂಡಾಗಿರಿ!

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದ ವಿನಯ್ ಗುರೂಜಿ ಈಗ ಅದರ ಮುಂದುವರಿದ ಭಾಗವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ವಿನಯ್ ಗುರೂಜಿ ಅವರ ಶಿಷ್ಯರು ಸುದೀಪ್ ಅವರ ಅಭಿಮಾನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ.

ನಟ ಸುದೀಪ್ ಬಗ್ಗೆ ಲೋಕಾರೂಢಿಯಾಗಿ ಮಾತನಾಡಿದ್ದ ಅವಧೂತ ವಿನಯ್ ಗುರೂಜಿ, ‘ಸುದೀಪ್ ಹೆಬ್ಬುಲಿಯಂತೆ ಹೆಬ್ಬುಲಿ. ನಿಜವಾದ ಹುಲಿ ಬಂದ್ರೆ ಓಡಿ ಹೋಗ್ತಾನೆ’ ಎಂದಿದ್ದರು. ಇದನ್ನು ವಿಡಿಯೋ ಮಾಡಿದ್ದ ಅವರ ಆಪ್ತರೇ ವೈರಲ್ ಆಗುವಂತೆ ಮಾಡಿದ್ರು. ಇದರಿಂದ ಸಿಡಿದೆದ್ದಿದ್ದ ಅಭಿನಯ ಚಕ್ರವರ್ತಿ ಅಭಿಮಾನಿಗಳು ಬಹಿರಂಗವಾಗಿ ಕ್ಷಮೆ ಕೇಳುವಂತೆ ಆಗ್ರಹ ಮಾಡಿದ್ರು. ಜೊತೆಗೆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವಂತೆ ಆಗ್ರಹ ಮಾಡಿದ್ರು. ಜೊತೆಗೆ ಕೆಲವರು ಅವಧೂತ ವಿನಯ್ ಗುರೂಜಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ರು.

ಆ ಪೈಕಿ ಸುದೀಪ್ ಅವರ ಅಭಿಮಾನಿ ಕುಂದಾಪುರದ ರತ್ನಾಕರ್ ಪೂಜಾರಿ ಎಂಬಾತ ವಿನಯ್ ಗುರೂಜಿ ವಿರುದ್ಧ ಮಾತನಾಡಿ ಅದರ ವಿಡಿಯೋ ಅನ್ನು ಫಸ್ ಬುಕ್ ನಲ್ಲಿ ಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಗುರೂಜಿಯ ಪುಂಡ ಭಕ್ತರು ರತ್ನಾಕರ್ ಅವರ ಮೇಲೆ‌ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ವಿನಯ್ ಗುರೂಜಿ‌ ಬೆಂಬಲಿಗರಾದ ಗುರುರಾಜ್ ಪುತ್ರನ್ (28), ಸಂತೋಷ್ (30), ಪ್ರದೀಪ್ (29) ಹಲ್ಲೆ‌ ಸೇರಿ ಎಂಟರಿಂದ ಹತ್ತು ಮಂದಿ ಸಂಗಮ್‌ ಶಾಲೆ ಬಳಿ ರತ್ನಾಕರ್ ಮೇಲೆ ಬೈಕ್ ಸೈಲನ್ಸರ್‌ಗೆ ಅಳವಡಿಸುವ ರಾಡ್ ನಿಂದ‌ ಮಾರಣಾಂತಿಕ  ಹಲ್ಲೆ‌ ನಡೆಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಕುಂದಾಪುರ ತಾಲೂಕಿನ ಚಿಕನ್ ಸಾಲ್ ನಿವಾಸಿಗಳಾಗಿದ್ದಾರೆ. ಉಳಿದ‌ ಆರೋಪಿಗಳಿಗ ಪತ್ತೆಗೆ ಬಲೆ‌ ಬೀಸಿರುವ ಕುಂದಾಪುರ ಪೊಲೀಸರು, ಎರಡು ತಂಡಗಳ‌ ರಚನೆ ಮಾಡಿದ್ದಾರೆ.

ಅಂದಹಾಗೆ, ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ್ ಗುರೂಜಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ರಾಜ್ಯ ರಾಜಕೀಯ ನಾಯಕರುಗಳ ಜತೆ ವಿನಯ್ ಗುರೂಜಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇವರು ವಂಶಪಾರಂಪರ್ಯವಾಗಿ ಅವಧೂತರಾಗಿದ್ದಾರೆ. ಕಾಲೇಜು ಸಮಯದಲ್ಲಿ‌ ಎಲ್ಲರಂತೆ ಸಾಮಾನ್ಯರಾಗಿದ್ದ ವಿನಯ್ ಗುರೂಜಿ ಇದೀಗ ಭೂತ, ಭವಿಷ್ಯ, ವರ್ತಮಾನದ ಬಗ್ಗೆಯೂ ಹೇಳ್ತಾರೆ ಅನ್ನೋದು ಜನರ ನಂಬಿಕೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಂದ ಹಿಡಿದು, ರಮೇಶ್ ಕುಮಾರ್, ಸಿಎಂ ಯಡಿಯೂರಪ್ಪ ಕೂಡ ಗೌರಿಗದ್ದೆಯ ವಿನಯ್ ಗುರೂಜಿ ಕಾಲಿಬಿದ್ದು ಆರ್ಶೀರ್ವಾದ ಪಡೆದಿದ್ದಾರೆ.

Leave a Reply