ಧೋನಿ ಕ್ರಿಕೆಟ್ ಭವಿಷ್ಯ ದಾದಾ ಕೈಯಲ್ಲಿ!?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾದ ಯಶಸ್ವಿ ನಾಯಕ, ಬೆಸ್ಟ್ ಫಿನಿಷರ್, ಮಿಸ್ಟರ್ ಡಿಪೆಂಡಬಲ್ ಎಂದೇ ಹೆಸರು ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯ ಈಗ ಅನಿಶ್ಚಿತತೆಯಲ್ಲಿದೆ. ಅಕ್ಟೋಬರ್ 24ರಂದು ಧೋನಿ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೇಳಿಕೆ ಈಗ ಭಾರಿ ಅಚ್ಚರಿ ಮೂಡಿಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಗಂಗೂಲಿ ಅಕ್ಟೋಬರ್ 23ರಂದು ಅಧಿಕಾರ ಸ್ವೀಕರಿಸಲಿದ್ದು, ಮರುದಿನ ಟೀಂ ಇಂಡಿಯಾ ಆಯ್ಕೆದಾರರ ಜತೆ ಸಭೆ ನಡೆಸಲಿದ್ದು, ಧೇನಿ ಅಭಿಪ್ರಾಯ ಸೇರಿದಂತೆ ಎಲ್ಲರ ಅನಿಸಿಕೆ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

2019ರ ಏಕದಿನ ವಿಶ್ವಕಪ್ ನಂತರ ಮಹೇಂದ್ರ ಸಿಂಗ್ ಧೋನಿ ಮತ್ತೆ ಮೈದಾನಕ್ಕೆ ಇಳಿದಿಲ್ಲ. ಕೆಲ ದಿನಗಳ ಕಾಲ ಗಡಿಯಲ್ಲಿ ಭಾರತೀಯ ಸೇನೆಯೊಂದಿಗೆ ಕಾರ್ಯನಿರ್ವಹಿಸಿದ್ದ ಧೋನಿ ಮತ್ತೆ ಕಣಕ್ಕಿಳಿಯುವ ನಿರೀಕ್ಷೆ ಇತ್ತು. ಆದರೆ ಅದು ಆಗಿಲ್ಲ. ಧೋನಿ ದಿಢೀರ್ ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿ ಹಬ್ಬಿತ್ತಾದರೂ ಅದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಈಗ ಗಂಗೂಲಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Leave a Reply