ಮುಖ್ಯಮಂತ್ರಿಗಳೇ ಮಹಾರಾಷ್ಟ್ರಕ್ಕೆ ನೀರು ಕೊಡ್ತೇವೆ ಅನ್ನೋ ಮೊದಲು ಮಹದಾಯಿ ಹೋರಾಟಗಾರರಿಗೆ ನ್ಯಾಯ ಕೊಡಿಸ್ರಿ!

ಡಿಜಿಟಲ್ ಕನ್ನಡ ಟೀಮ್:

ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕದಿಂದ ನೀರು ಕೊಡುವುದಾಗಿ ಭರವಸೆ ಕೊಟ್ಟು ಬಂದಿದ್ದಾರೆ. ಆದರೆ ಮಾನ್ಯ ಮುಖ್ಯಮಂತ್ರಿಗಳು ಮಹಾರಾಷ್ಟ್ರ ಜನರ ಬಾಯಾರಿಕೆ ತಣಿಸುವ ಮುನ್ನ ನಮ್ಮ ಉತ್ತರ ಕರ್ನಾಟಕ ಜಿಲ್ಲೆಗಳ ಜನರು ಮಹದಾಯಿ ವಿಚಾರವಾಗಿ ನಡೆಸುತ್ತಿರುವ ಅನೇಕ ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿಸಿ ಕೊಡುವ ಬಗ್ಗೆ ಗಮನ ಹರಿಸಿದ್ದರೆ ಚೆನ್ನಾಗಿರ್ತಿತ್ತು.

ಕಳೆದ ಬೇಸಿಗೆಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭೀಕರ ಬರಗಾಲ ದುರಾದಾಗ ರಾಜ್ಯ ಸರ್ಕಾರ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರಿಗೆ ಮಾನವೀಯತೆ ಆಧಾರದ ಮೇಲೆ ನೀರು ಬಿಡಿ ಎಂದು ಕೇಳಿತ್ತು. ಪ್ರತಿ ವರ್ಷ ದುಡ್ಡು ಪಡೆದು ನೀರು ಕೊಡುತ್ತಿದ್ದ ಮಹಾರಾಷ್ಟ್ರ ಈ ಬಾರಿ ನೀರಿಗೆ ನೀರು ಬೇಕು ಎಂದು ಪಟ್ಟು ಹಿಡಿದು ಕೊಯ್ನಾದಿದ ನೀರು ಬಡಲೇ ಇಲ್ಲ. ಆದರೆ ಆಗಸ್ಟ್ ತಿಂಗಳಲ್ಲಿ ಅತಿಯಾಗಿ ಮಳೆ ಸುರಿದಾಗ ಏಕಾಏಕಿ ನೀರು ಬಿಟ್ಟು ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಪ್ರವಾಹದಲ್ಲಿ ಮುಳುಗಿಸಿತ್ತು. ಅಂತಹವರಿಗೆ ಈಗ ನಮ್ಮ ಮುಖ್ಯಮಂತ್ರಿಗಳು ನೀರು ಕೊಡ್ತೇವೆ ಮತ ಕೊಡಿ ಎಂದು ಹೇಳುತ್ತಿದ್ದಾರೆ.

ಮಹಾರಾಷ್ಟ್ರ ಜನರ ಕೂಗು ಕೇಳಿಸಿಕೊಂಡಿರುವ ಸಿಎಂಗೆ ನಮ್ಮ ಮಹದಾಯಿ ಹೋರಾಟಗಾರರ ಕೂಗು ಕೇಳಿಸದಿರುವುದು ನಮ್ಮ ಜನರ ದೌರ್ಭಾಗ್ಯ. ಈಗ ಕೇಂದ್ರದಲ್ಲಿ, ರಾಜ್ಯದಲ್ಲಿ ಹಾಗೂ ಗೋವಾದಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ಮಹದಾಯಿ ಹೋರಾಟಗಾರರಿಗೆ ಈಗ ನ್ಯಾಯ ಸಿಗದಿದ್ದರೆ ಇನ್ಯಾವಾಗ ಸಿಗುತ್ತದೆ ಎಂಬ ಯಕ್ಷ ಪ್ರಶ್ನೆ ಉದ್ಭವಿಸಿದೆ.

ಅಂದಹಾಗೆ ಮಹದಾಯಿ ಹೋರಾಟಗಾರರು ನಿನ್ನೆ ಬೆಂಗಳೂರಿಗೆ ಆಗಮಿಸಿದ್ದಾರೆ. ರಾಜ್ಯಪಾಲರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲು ಬಂದ ಹೋರಾಗಾರರನ್ನು ರೈಲ್ವೇ ನಿಲ್ದಾಣದಲ್ಲೇ ತಡೆ ಹಿಡಿದರು. ಪರಿಣಾಮ ರಾತ್ರಿ ಹೋರಾಟಗಾರರು ಚಳಿಯಲ್ಲೇ ಕಾಲ ಕಳೆದಿದ್ದಾರೆ. ಇಂದು ಅವರ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದ್ದಾರೆ.

ನ್ಯಾಯಾಧಿಕರಣದಲ್ಲಿ ಹಂಚಿಕೆಯಾಗಿರುವ ನೀರಿನ ಬಳಕೆಗೆ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೋರಡಿಸಬೇಕಿದ್ದು, ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪ್ರಯತ್ನಿಸಿತ್ತು. ಆದರೆ ರಾಜಕೀಯ ಲೆಕ್ಕಾಚಾರಕ್ಕವೋ ಏನೋ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಲಿಲ್ಲ. ಆದರೆ ಈಗ ಮೂರು ಕಡೆಗಳಲ್ಲೂ ಬಿಜೆಪಿ ಸರ್ಕಾರವೇ ಇದೆ. ಈಗ ಮಹದಾಯಿ ಹೋರಾಟಗಾರರ ಕೂಗು ಕೇಳಿ ನೀರು ಹಂಚಿಕೆಯಾದರೆ ಸಂಪೂರ್ಣ ಶ್ರೇಯ ಬಿಜೆಪಿ ಪಾಲಾಗುತ್ತದೆ. ಹೀಗಾಗಿ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಈಗಲಾದರೂ ಉತ್ತರ ಭಾಗದ ಜನರ ಕುಡಿಯುವ ನೀರು ಸಮಸ್ಯೆ ಪೂರ್ಣಗೊಳ್ಳುತ್ತದೆ ಎಂಬ ಭರವಸೆ ಮೂಡಿತ್ತು.

ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ತಿಂಗಳು ಪೂರ್ಣಗೊಳ್ಳುತ್ತಿದ್ದರೂ ಇನ್ನು ಮಹದಾಯಿ ವಿಚಾರವಾಗಿ ಕಣ್ಣುಕೂಡ ಹಾಯಿಸಿಲ್ಲ. ನಮ್ಮಿಂದ ಆಯ್ಕೆಯಾಗಿ ಸಂಸತ್ತಿಗೆ ಹೋಗಿರುವ 25 ದಂಡಪಿಂಡಗಳು ತಾವು ಆಯ್ಕೆಯಾಗಿರುವುದೇ ದೆಹಲಿಗೆ ವಿಮಾನದಲ್ಲಿ ಸುತ್ತಿ ಪ್ರಧಾನಿ ಮೋದಿ, ಬಿಜೆಪಿ ಅಮಿತ್ ಶಾರಿಗೆ ಬಕೆಟ್ ಹಿಡಿಯಲು ಎಂಬ ಮನಸ್ಥಿತಿಗೆ ಬಂದಿದ್ದಾರೆ. ಈ ಮನಸ್ಥಿತಿಯಿಂದ ಹೊರಬಂದು ಮಹದಾಯಿ ವಿಚಾರದಲ್ಲಿ ನಮ್ಮ ಜನರಿಗೆ ನ್ಯಾಯ ಒದಗಿಸಲು ಮನಸ್ಸು ಮಾಡಬೇಕಿದೆ. ಮಹದಾಯಿ ಹೋರಾಟಗಾರರ ಸಮಸ್ಯೆಗೆ ಪರಿಹಾರ ನೀಡಲು ಇದಕ್ಕಿಂತ ರಾಜಕೀಯ ಸುಸಂದರ್ಭ ಮತ್ತೆ ಸಿಗುವುದು ಅನುಮಾನ. ಹೀಗಾಗಿ ಈ ಜನರ ಕೂಗನ್ನು ಕಿವಿ ಮೇಲೆ ಹಾಕಿಕೊಂಡು ತಮಗೆ ಮತ ಹಾಕಿದವರಿಗೆ ಸ್ವಲ್ಪಮಟ್ಟಿಗಾದರೂ ಕೃತಜ್ಞತೆ ಸಲ್ಲಿಸಿದರೆ ಅದೇ ದೊಡ್ಡ ಕಾರ್ಯವಾಗಲಿದೆ. ಈ ಬಗ್ಗೆ ನಮ್ಮ ಮುಖ್ಯಮಂತ್ರಿಗಳು, ಸಂಸದರು, ಕೇಂದ್ರ ಸಚಿವರು ಆದಷ್ಟು ಬೇಗ ಗಮನಹರಿಸಲಿ ಎಂದು ರಾಜ್ಯದ ಜನರೆಲ್ಲ ಪ್ರಾರ್ಥಿಸುತ್ತಿದ್ದಾರೆ.

Leave a Reply