ಕೇವಲ ಭಾರತಕ್ಕಷ್ಟೇ ಅಲ್ಲ ಚೀನಾಗೂ ಬರೆ ಎಳೆದಿದೆ ಜಾಗತಿಕ ಆರ್ಥಿಕ ಹಿಂಜರಿತ!

ಡಿಜಿಟಲ್ ಕನ್ನಡ ಟೀಮ್:

ಸದ್ಯ ಜಾಗತಿಕ ಆರ್ಥಿಕ ಹಿಂಜರಿತ ವಿಶ್ವದ ಎಲ್ಲ ರಾಷ್ಟ್ರಗಳ ಮೇಲೂ ತನ್ನ ದುಷ್ಪರಿಣಾಮ ಬೀರುತ್ತಿದೆ. ಭಾರತದಂತಹ ಬೆಳವಣಿಗೆ ಕಾಣುತ್ತಿರುವ ದೇಶಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ತಿಳಿಸಿದೆ. ಆದರೆ ಕೇವಲ ಭಾರತ ಮಾತ್ರವಲ್ಲ ಚೀನಾ ಆರ್ಥಿಕತೆ ಮೇಲೂ ಜಾಗತಿಕ ಆರ್ಥಿಕ ಹಿಂಜರಿತದ ಬರೆ ಬಿದ್ದಿರೋದು ಈಗ ಸ್ಪಷ್ಟವಾಗಿದೆ.

ಹೌದು, ಕಳೆದ 27 ವರ್ಷಗಳಲ್ಲೇ ಮೊದಲ ಬಾರಿಗೆ ಚೀನಾ ಜಿಡಿಪಿ ಶೇ.6ಕ್ಕೆ ಕುಸಿತ ಕಂಡಿದೆ. ಜುಲೈ-ಸೆಪ್ಟೆಂಬರ್ ವರೆಗಿನ (ಮೂರನೇ) ತ್ರೈಮಾಸಿಕ ಅವಧಿಯಲ್ಲಿ ಚೀನಾ ಜಿಡಿಪಿ ಶೇ.6ಕ್ಕೆ ಕುಸಿದಿದೆ. ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇ.6.2ರಷ್ಟಿದ್ದ ಜಿಡಿಪಿ ಈಗ ಕುಸಿದಿದ್ದು, 1992ರ ನಂತರ ಜಿಡಿಪಿ ಅತಿ ಕಡಿಮೆಗೆ ಕುಸಿತ ಕಂಡಂತಾಗಿದೆ. ಆದರೂ ಪ್ರಸಕ್ತ ಸಾಲಿನಲ್ಲಿ ಚೀನಾ ಶೇ.6ರಿಂದ ಶೇ.6.5ರಷ್ಟು ಜಿಡಿಪಿ ಗುರಿ ಹೊಂದಿದೆ. ಇದು ಜಾಗತಿಕ ಆರ್ಥಿಕ ಹಿಂಜರಿತದ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತೋರುತ್ತದೆ.

ಚೀನಾದ ಈ ಪರಿಸ್ಥಿತಿಗೆ ಪರೋಕ್ಷವಾಗಿ ಆ ದೇಶವೇ ಕಾರಣವಾಗಿದೆ. ಅಮೆರಿಕದ ಮೇಲೆ ಸುಂಕ ಹೆಚ್ಚಳ ಮಾಡಿ ಆರ್ಥಿಕ ಸಮರ ಆರಂಭಿಸಿದ ಚೀನಾ ತನ್ನ ತಪ್ಪಿಗೆ ಈಗ ತಾನು ಮಾತ್ರವಲ್ಲ ಬೇರೆ ರಾಷ್ಟ್ರಗಳೂ ನರಳುವಂತೆ ಮಾಡಿದೆ. ಚೀನಾದ ಸುಂಕ ಹೆಚ್ಚಳಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಸುಂಕ ಹೆಚ್ಚಳ ಮಾಡಿದ್ದು, ಜಾಗತಿಕ ಆರ್ಥಿಕತೆ ಮೇಲೆ ಋಣಾತ್ಮಕ ಪರಿಣಾಮ ಬೀರಿತು.

ಭಾರತದಲ್ಲಿ ಆರ್ಥಿಕ ಹಿಂಜರಿತದ ಪರಿಣಾಮ ಕೇಂದ್ರ ಸರ್ಕಾರದ ಮೇಲೆ ಟೀಕೆಗಳು ವ್ಯಕ್ತವಾಗುತ್ತಿದ್ದು, ಚೀನಾ ಜತೆಗೆ ಆರ್ಥಿಕ ಪ್ರಗತಿಯಲ್ಲಿ ಪೈಪೋಟಿ ನೀಡಲು ಮುಂದಾಗುತ್ತಿದ್ದ ಭಾರತ ಈಗ ಮೋದಿ ಸರ್ಕಾರದ ಆರ್ಥಿಕ ನೀತಿಯಿಂದ ಎಡವಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಈಗ ಭಾರತದ ರೀತಿ ಚೀನಾ ಜಿಡಿಪಿ ಕುಸಿತ ಜಾಗತಿಕ ಆರ್ಥಿಕ ಹಿಂಜರಿತದ ಪ್ರಭಾವ ಎಷ್ಟರ ಮಟ್ಟಿಗ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.

ಇನ್ನು ಚೀನಾ ಹಾಗೂ ಅಮೆರಿಕ ನಡುವಣ ವ್ಯಾಪಾರ ಸಂಘರ್ಷ ಇನ್ನು ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬ ಆತಂಕ ಮೂಡಿದೆ.

Leave a Reply