ಟೀಮ್ ಇಂಡಿಯಾ ನಾಯಕ ಕೊಹ್ಲಿ, ಕೋಚ್ ರವಿ ಶಾಸ್ತ್ರಿಗೆ ಗಂಗೂಲಿ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್:

‘ಭಾರತ ಕ್ರಿಕೆಟ್ ತಂಡ ಉತ್ತಮವಾಗಿದೆ. ಆದರೆ ಕಳೆದ ಏಳು ಪ್ರಮುಖ ಸರಣಿಗಳನ್ನು ಭಾರತ ಸೋತಿದೆ. ತಂಡ ಸೆಮಿಫೈನಲ್ ಹಾಗೂ ಫೈನಲ್ ಹೊರತಾಗಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಸಮಸ್ಯೆಯನ್ನು ನಾಯಕ ವಿರಾಟ್ ಕೊಹ್ಲಿ ಬಗೆಹರಿಸುವ ವಿಶ್ವಾಸವಿದೆ…’ ಇದು ಟೀಮ್ ಇಂಡಿಯಾ ಪ್ರದರ್ಶನದ ಕುರಿತಾಗಿ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಕೊಟ್ಟಿರುವ ನಾಜೂಕಾದ ವಾರ್ನಿಂಗ್!

ಟೀಮ್ ಇಂಡಿಯಾ ನಾಯಕರಾಗಿದ್ದ ಸಮಯದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಿ, ಆಕ್ರಮಣಕಾರಿ ಮನೋಭಾವ ತುಂಬಿ ಭಾರತ ಕ್ರಿಕೆಟ್ ದಿಕ್ಕು ಬಡಳಿಸಿದ್ದು ಇದೇ ಸೌರವ್ ಗಂಗೂಲಿ. ಈಗ ಬಿಸಿಸಿಐ ಅಧ್ಯಕ್ಷರಾಗಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಅವರ ಪ್ರತಿ ಮಾತುಗಳು ಬದಲಾವಣೆಯ ನಿರೀಕ್ಷೆ ಮೂಡಿಸುತ್ತಿದೆ.

ಇನ್ನು ಮಾಜಿ ಆಟಗಾರ ಹಾಗೂ ಹಾಲಿ ಕೋಚ್ ಆಗಿರುವ ರವಿ ಶಾಸ್ತ್ರಿ ವಿರುದ್ಧ ತಮ್ಮ ಕೋಪ ಮುಂದುವರಿಸಿರುವ ಗಂಗೂಲಿ ‘ಇಲ್ಲಿವರೆಗೂ ಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಆಗಿ ಮಾಡಿರುವುದಾದರೂ ಏನು?’ ಎಂದು ಕೇಳಿರುವ ವೀಡಿಯೊ ವೈರಲ್ ಆಗಿದೆ. ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ರವಿ ಶಾಸ್ತ್ರಿ ಜತೆ ಚರ್ಚೆ ಮಾಡಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ‘ಅವರೊಂದಿಗೆ ಯಾಕೆ ಮಾತನಾಡಲಿ? ತಂಡಕ್ಕೆ ಅವರೇನು ಮಾಡಿದ್ದಾರೆ ಎಂದು ಕೇಳಿದ್ದಾರೆ.

ಅನೇಕ ವರ್ಷಗಳಿಂದ ಗಂಗೂಲಿ ಹಾಗೂ ಶಾಸ್ತ್ರಿ ಜತೆ ಮನಸ್ತಾಪ ಎಲ್ಲರಿಗೂ ಗೊತ್ತಿರುವ ವಿಚಾರ. ಮೊದಲು ಕೋಚ್ ಆಯ್ಕೆ ವೇಳೆ ರವಿ ಶಾಸ್ತ್ರಿಗೆ ಬ್ರೇಕ್ ಹಾಕಲು ಸಲಹಾ ಸಮಿತಿಯಲ್ಲಿದ್ದ ಗಂಗೂಲಿ, ಕುಂಬ್ಳೆ ಅವರನ್ನು ನೇಮಕ ಮಾಡಿ ಟಕ್ಕರ್ ಕೊಟ್ಟಿದ್ದರು. ಆದ್ರೆ ಕೊಹ್ಲಿ, ಕುಂಬ್ಳೆ ಜತೆ ಕಿತ್ತಾಡಿಕೊಂಡು ರವಿ ಶಾಸ್ತ್ರಿಗಾಗಿ ಪಟ್ಟು ಹಿಡಿದಿದ್ದರು. ಹೀಗೆ ಗಂಗೂಲಿ ಹಾಗೂ ಶಾಸ್ತ್ರಿ ನಡುವಣ ಗುದ್ದಾಟ ನಡೆಯುತ್ತಲೇ ಬಂದಿದೆ.

ಈಗ ಗಂಗೂಲಿ ಅವರ ನಾಜೂಕಿನ ಎಚ್ಚರಿಕೆ ಕೋಚ್ ಹಾಗೂ ರವಿಶಾಸ್ತ್ರಿ ಪರ ಬಿಸಿಸಿಐನಲ್ಲಿ ಲಾಭಿ ಮಾಡಿದ ನಾಯಕ ಕೊಹ್ಲಿಗೆ ರವಾನೆಯಾಗಿರುವುದು ಸ್ಪಷ್ಟ.

Leave a Reply