ಭಾರತ ರತ್ನ ವೀರ ಸಾವರ್ಕರ್‌ ಗಾ ಅಥವಾ ಸಿದ್ಧಗಂಗಾ‌ ಶ್ರೀಗಳಿಗಾ? ಶುರುವಾಯ್ತು ರಾಜಕೀಯ ಹಗ್ಗಜಗ್ಗಾಟ!

ಡಿಜಿಟಲ್ ಕನ್ನಡ ಟೀಮ್:

ಮಹಾರಾಷ್ಟ್ರ ಚುನಾವಣೆ ವೇಳೆ ವಿನಾಯಕ ದಾಮೋದರ್ ಸಾವರ್ಕರ್‌ಗೆ ಭಾರತ ರತ್ನ ಶಿಫಾರಸು ಮಾಡ್ತೇವೆ ಎಂದು ಬಿಜೆಪಿ ಘೋಷಣೆ ಮಾಡಿದೆ. ಪ್ರಧಾನಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಪೂರಕವಾಗಿ ಮಾತನಾಡಿದ್ದಾರೆ. ಆದ್ರೆ ಇದಕ್ಕೆ ಕಾಂಗ್ರೆಸ್ ಇದೊಂದು ಚುನಾವಣಾ ಗಿಮಿಕ್ ಎಂದು ಟೀಕಿಸುತ್ತಿದೆ. ಈ ಮಧ್ಯೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವೀರ ಸಾವರ್ಕರ್‌ಗೆ ಭಾರತ ರತ್ನ ಕೊಡುವ ಮೊದಲು ನಮ್ಮ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿ ಎಂದು ಆಗ್ರಹಿಸಿದ್ದಾರೆ.

ಅಷ್ಟೇ ಅಲ್ಲದೆ ಕೇವಲ ಸಾವರ್ಕರ್ ಅವರಿಗೆ ಯಾಕೆ ನಾಥೂರಾಮ್ ಗೋಡ್ಸೆ ಅವರಿಗೂ ಭಾರತ ರತ್ನ ಕೊಡಲಿ ಎಂದು ವ್ಯಂಗ್ಯ ಮಾಡಿ ವಿವಾದ ಹುಟ್ಟುಹಾಕಿದ್ದಾರೆ. ಇದಕ್ಕೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಹೇಳಿಕೆಯನ್ನು ಸಿಎಂ ಯಡಿಯೂರಪ್ಪ ಖಂಡಿಸಿದ್ದಾರೆ. ‘ವಿನಾಯಕ್ ದಾಮೋದರ್ ಸಾರ್ವಕರ್ ಕುರಿತು ಸಿದ್ದರಾಮಯ್ಯ ಲಘುವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ವೀರ ಸಾವರ್ಕರ್ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅಪ್ಪಟ ದೇಶ ಪ್ರೇಮಿ ಅವರಿಗೆ ಭಾರತ ರತ್ನ ನೀಡುವ ಬಗ್ಗೆ ಕೆಲ ಕಾಂಗ್ರೆಸ್ಸಿಗರು ಬೆಂಬಲ ಸೂಚಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ನಾಥೂರಾಮ್ ಘೋಡ್ಸೆಗೆ ಹೋಲಿಸಿದ್ದಾರೆ. ಇವರ ಈ ಹೇಳಿಕೆ ಕೀಳು ಅಭಿರುಚಿಯ ಪ್ರತೀಕ. ಸಿದ್ದರಾಮಯ್ಯ ನಾಡಿನ ಜನತೆಯ ಮುಂದೆ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಕುರಿತು ಇಂತಹ ಹೇಳಿಕೆ ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಹುನ್ನಾರ ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲ. ಅವರು ತಮ್ಮ ಘನತೆಗೆ ತಕ್ಕಂತೆ ‌ನಡೆದುಕೊಳ್ಳಬೇಕು. ಈ ರೀತಿ ಅಸಂಬದ್ಧವಾಗಿ ಹೇಳಿಕೆ ನೀಡಿ ತಾನೊಬ್ಬ ಉತ್ತಮ ವಾಗ್ಮಿ, ಬುದ್ದಿವಂತ ಎಂದು ಭಾವಿಸಿದ್ದರೆ ಅದು ಅವರ ಭ್ರಮೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ವಿನಾಯಕ ದಾಮೋದರ ಸಾವರ್ಕರ್‌ಗೆ ಭಾರತ ರತ್ನ ನೀಡುವ ವಿಚಾರದ ಬಗ್ಗೆ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ಮಹಾರಾಷ್ಟ್ರ ಚುನಾವಣೆಯಲ್ಲಿ ಗೆಲುವುಗಾಗಿ ಕೇಂದ್ರ ಬಿಜೆಪಿ ಸರ್ಕಾರ ಈ ಮಾತು ಹೇಳಿದೆ. ವೀರ ಸಾವರ್ಕರ್  ಹಿಂದೂ ರಾಷ್ಟ್ರವಾದಿಯಾಗಿ ಹೋರಾಟ ಮಾಡಿದ್ರು. ಮಹಾತ್ಮ ಗಾಂಧಿ ಕೊಲೆಯಲ್ಲಿ ಅವರು ಕೂಡ ಒಬ್ಬ ಆರೋಪಿ ಯಾಗಿದ್ರು. ಆದರೆ ಆರೋಪ ಸಾಬೀತು ಪಡಿಸುವ ಹಂತದಲ್ಲಿ ಶಿಕ್ಷೆಯಿಂದ ಹೊರಗೆ ಬಂದ್ರು. ಕೊನೆಗೆ ನಾಥುರಾಮ್ ಘೋಡ್ಸೆ ಮಾತ್ರ ಕೊಲೆ ಆರೋಪಿಯಾದ್ರು. ಇದು ನಿಜವಾದ ವಿಚಾರ, ಇವಾಗ ಸಾವರ್ಕರ್ ಜನಸಂಖ್ಯೆಯ ಮುಖ್ಯಸ್ಥರಾಗಿ ಹಿಂದೂ ‌ಮಹಾಸಭಾ ಕಟ್ಟಿ ಹೋರಾಟ ಮಾಡಿದ್ದಾರೆ. ಮಹಾತ್ಮ ಗಾಂಧಿ ಕೊಲೆಗೆ ಅವರ ಸಂಬಂಧ ಇತ್ತು ಎಂಬ ಆರೋಪಕ್ಕೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅವರು ಆರೋಪಿ ಸ್ಥಾನದಿಂದ ವಿಮುಕ್ತಿ ಆದರು. ಈ ವಿವಾದ ಹಿಂದೆಯೂ ಇತ್ತು‌ ಈಗಲೂ ಇದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರೋದ್ರಿಂದ ವಿವಾದ ಇದ್ದರೂ ಅದನ್ನು ಪರಿಗಣಿಸದೆ ಏನು ನಿರ್ಣಯ ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕು ಎಂದಿದ್ದಾರೆ.

ಇನ್ನು ಯಡಿಯೂರಪ್ಪ ಮಾಧ್ಯಮ ಪ್ರಕಟಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದು ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ‌. ‘ವಿನಾಯಕ ದಾಮೋದರ್ ಸಾವರ್ಕರ್‌ಗೆ ಭಾರತ ರತ್ನ ಆಮೇಲೆ ಕೊಡುವಿರಂತೆ, ಮೊದಲು ಸಾಮಾಜಿಕ ಸೇವೆಗಾಗಿ ಬದುಕನ್ನೇ ತೇಯ್ದು ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶಿವಕುಮಾರ್ ಸ್ವಾಮೀಜಿ ಅವರಿಗೆ ಮೊದಲು ಭಾರತ ರತ್ನ ನೀಡಿ. ಕನಿಷ್ಠ ಈ ಒಂದು ಬೇಡಿಯನ್ನಾದರೂ ಈಡೇರಿಸಿ’ ಎಂದು ಮನವಿ ಮೂಲಕ ಸವಾಲು ಹಾಕಿದ್ದಾರೆ.A

Leave a Reply