ಮರಾಠಿಗರ ಮನಸ್ಸಿಂದ ದೂರ ಆದ್ರಾ ಶಿವಾಜಿ ಮಹಾರಾಜ್..!?

ಡಿಜಿಟಲ್ ಕನ್ನಡ ಟೀಮ್:

ಮರಾಠಿಗರ ಹೆಮ್ಮೆಯ ಪ್ರತೀಕ ಶಿವಾಜಿ ಮಹರಾಜ್. ಮರಾಠಿಗರ ಪಾಲಿಗೆ ಅವರೇ ಆರಾಧ್ಯ ದೈವ ಅಂದರೂ ತಪ್ಪಿಲ್ಲ, ಸ್ವಾಭಿಮಾನದ ಗುರುತು ಅಂದರೂ ತಪ್ಪಿಲ್ಲ. ಪ್ರತಿ ಬಾರಿ ಮಹಾರಾಷ್ಟ್ರ ಶಿವಾಜಿ ಮಹಾರಾಜರ ಅಜೆಂಡಾ ಇಲ್ಲದೇ ಚುನಾವಣೆ ಕಾವು ಪಡೆಯುತ್ತಲೇ ಇರಲಿಲ್ಲ. ಆದರೆ ಈ ಬಾರಿ ಈ ವಿಚಾರದಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಈ ಬಾರಿ ಶಿವಜಿ ಮಹರಾಜರ ಬದಲಿಗೆ ವೀರ ಸಾವರ್ಕರ್ ಅಜೆಂಡಾ ಬಲು ಜೋರಾಗಿದೆ. ದು ಸಹಜವಾಗಿ ಮರಾಠಿಗರ ಮನಸ್ಸಿಂದ ಶಿವಾಜಿ ದೂರಾ ಆದ್ರಾ ಅನ್ನೋ ಪ್ರಶ್ನೆ ಮೂಡಿಸುತ್ತದೆ.

ಅಕ್ಟೋಬರ್ 21ರಂದು ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಎರಡನೇ ಬಾರಿ ಅಧಿಕಾರದ ಗದ್ದುಗೆ ಹಿಡಿಯಲು ಶಿವಸೇನಾ, ಬಿಜೆಪಿ ಜತೆ ಕೈಜೋಡಿಸಿದೆ. ಕಳೆದ ಬಾರಿ ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿದ್ರು. ಮೊದಲ ಬಾರಿಗೆ ಪ್ರಧಾನಿಯಾಗಿದ್ದ ಮೋದಿ ಶಿವಾಜಿ ಮಹಾರಾಜರ ಗುಣಗಾನ ಮಾಡುತ್ತಲೇ ಪ್ರಚಾರ ಮಾಡಿದ್ರು. ಆದ್ರೆ ಈ ಬಾರಿ ಮಹಾರಾಷ್ಟ್ರ ಬಿಜೆಪಿ ನಾಯಕರು ವೀರ ಸಾವರ್ಕರ್ ಅವರನ್ನು ಮುನ್ನಲೆಗೆ ತಂದಿದ್ದಾರೆ. ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಪ್ರಣಾಳಿಕೆಯಲ್ಲೂ ಹೇಳಿಕೊಂಡಿದೆ.

ಮಹಾರಾಷ್ಟ್ರ ನಾಯಕರು ಹೇಳಿದ ಬಳಿಕ ನರೇಂದ್ರ ಮೋದಿ ಕೂಡ ವೀರ ಸಾವರ್ಕರ್ ಓರ್ವ ಮಹಾನ್ ದೇಶಭಕ್ತ ಎಂದು ಶ್ಲಾಘಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ವೀರ ಸಾವರ್ಕರ್ ಇಲ್ಲದೇ ಇದ್ದಿದ್ರೆ 1857ರ ಸೈನಿಕ ದಂಗೆ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆಗ್ತಿರಲಿಲ್ಲ. ಹಾಗಾಗಿ ನಾವೆಲ್ಲರೂ ವೀರ ಸಾವರ್ಕರ್ ಅವರನ್ನು ಗೌರವಿಸಲೇ ಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬದಲಾವಣೆ ಯಾಕೆ ಅನ್ನೋ ತಂತ್ರಗಾರಿಕೆ ಸ್ವತಃ ಶಿವಾಜಿಯನ್ನು ಪೂಜಿಸುವ ಶಿವಸೇನೆಗೂ ಕಂಗಾಲಾಗುವಂತೆ ಮಾಡಿದೆ.

2015ರಲ್ಲಿ ಚುನಾವಣೆ ನಡೆದಾಗ ನರೇಂದ್ರ ಮೋದಿ ಅಲೆ ಎದ್ದಿತ್ತು. ದೇಶದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸುತ್ತಿತ್ತು. ಶಿವಾಜಿ ಮಹಾರಾಜರ ಹೆಸರೇಳಿದ್ರೂ ಜನರೂ ಮತ ಹಾಕ್ತಾರೆ ಅನ್ನೋ ನಂಬಿಕೆ ಇತ್ತು. ಆದ್ರೆ ಈ ಬಾರಿ ಶಿವಾಜಿ ಹೆಸರೇಳಿಕೊಂಡು ರಾಜಕಾರಣ ಮಾಡಿದ್ರೆ ಜನರು ಮತ ಹಾಕಲ್ಲ. ಕೇವಲ ಮರಾಠಿ ಮರಾಠಿ ಎಂದರೆ ನಾವು ಗೆಲ್ಲುವುದಕ್ಕೆ ಆಗಲ್ಲ ಎನ್ನುವುದನ್ನು ಮನಗಂಡಿರುವ ಬಿಜೆಪಿ ವೀರ ಸಾವರ್ಕರ್ ಹೆಸರನ್ನು ಮುನ್ನಲೆಗೆ ತಂದಿದೆ. ವೀರ ಸಾವರ್ಕರ್ ಮಹಾತ್ಮ ಗಾಂಧಿ ಹತ್ಯೆಯಲ್ಲಿ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿದ್ದಾರೆ ಎಂದು ಈಗಾಗಲೇ ಕಾಂಗ್ರೆಸ್ ವಿರೋಧ ಮಾಡ್ತಿದೆ. ‘ಭಾರತ ರತ್ನ ಗೌರವವನ್ನು ಓರ್ವ ಕೊಲೆಗೆ ಸಂಚು ಮಾಡಿದವನಿಗೂ ಕೊಡಬಹುದು ಎಂದು ಬಿಜೆಪಿ ತೋರಿಸಿಕೊಡಲು ಮುಂದಾಗಿದೆ’ ಎಂದು ಆಕ್ರೋಶ ಹೊರಹಾಕಿದೆ. ಇದೀಗ ಗಾಂಧಿಯನ್ನು ಪ್ರೀತಿಸುವವರು ಹಾಗು ಗಾಂಧಿಯನ್ನು ವಿರೋಧಿಸುವ ಬಣಗಳಾಗಿ ಬದಲಾಯಿಸುವ ಉದ್ದೇಶದಲ್ಲಿ ಬಿಜೆಪಿ ಸಫಲವಾಗಿದೆ ಎನ್ನುವುದು ಮಹಾರಾಷ್ಟ್ರ ರಾಜಕೀಯ ಪಂಡಿತರ ಮಾತಾಗಿದೆ. ಬಿಜೆಪಿ ನಿರೀಕ್ಷೆ ಮಾಡಿದ ರೀತಿಯಲ್ಲೇ ಮತಗಳಾಗಿ ಪರಿವರ್ತನೆಯಾಗುತ್ತಾ ಅನ್ನೋದನ್ನು ಕಾದು ನೋಡ್ಬೇಕು.

Leave a Reply