ರಾಜ್ಯಸಭಾ ಬಹುಮತಕ್ಕಾಗಿ ಆಪರೇಷನ್ ಕಮಲ! ರಾಮಮೂರ್ತಿ ಮೊದಲ ವಿಕೆಟ್.!?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದೆ. 2014ರಲ್ಲೇ ಮೋದಿ ನೇತೃತ್ವದಲ್ಲಿ ದೇಶದ ಚುಕ್ಕಾಣಿ ಹಿಡಿದ ಬಿಜೆಪಿ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ತಮ್ಮ ಅಜೆಂಡಾದ ಇನ್ನು ಅನೇಕ ಮಹತ್ವದ ನಿರ್ಧಾರಗಳನ್ನು ಜಾರಿಗೆ ತರಲು ಕಾದು ಕುಳಿತಿದೆ. ಆದರೆ ಬಿಜೆಪಿಗೆ ಇರುವ ಏಕೈಕ ಅಡ್ಡಿ ಎಂದರೆ ರಾಜ್ಯ ಸಭೆಯಲ್ಲಿನ ಬಹುಮತ ಕೊರತೆ. ಹೀಗಾಗಿ ಈ ಕೊರತೆ ನೀಗಿಸಿಕೊಂಡು ಬಹುಮತ ಪಡೆಯಲು ಬಿಜೆಪಿ ಮುಂದಾಗಿದೆ. ಅದರ ಆರಂಭಿಕ ಹೆಜ್ಜೆಯೇ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಕೆ.ಸಿ ರಾಮಮೂರ್ತಿ ಅವರ ರಾಜೀನಾಮೆ!

ಹೌದು, ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಅದಿಕಾರಕ್ಕೆ ಬಂದಿದೆ. ಇದೀಗ ರಾಷ್ಟ್ರಮಟ್ಟದಲ್ಲೂ ಆಪರೇಷನ್ ಕಮಲ ಶುರುವಾಗಿದೆ. ಯಾಕಂದ್ರೆ ಲೋಕಸಭೆಯಲ್ಲಿ ಪ್ರಚಂಡ ಬಹುಮತ ಹೊಂದಿರುವ ನರೇಂದ್ರ ಮೋದಿ ಸರ್ಕಾರ ರಾಜ್ಯಸಭೆಯಲ್ಲಿ ಪೂರ್ಣ ಬಹುಮತ ಹೊಂದಿಲ್ಲ.

ಸರ್ಕಾರ ಯಾವುದೇ ಒಂದು ಮಹತ್ವದ ನಿರ್ಧಾರ ಅಥವಾ ಸಂವಿಧಾನದ ತಿದ್ದುಪಡಿ ಜಾರಿಗೆ ತರಬೇಕಾದರೆ ಕೇವಲ ಲೋಕಸಭೆಯಲ್ಲಿ ಮಾತ್ರವಲ್ಲ ರಾಜ್ಯಸಭೆಯಲ್ಲೂ ಅನುಮೋದನೆ ಪಡೆಯಬೇಕು. ಇದಕ್ಕೆ ರಾಜ್ಯಸಭೆಯಲ್ಲೂ ಬಹುಮತದ ಅಗತ್ಯ ಇದೆ. ತ್ರಿವಳಿ ತಲಾಕ್ ನಿಷೇಧ ಸೇರಿದಂತೆ ಲೋಕಸಭೆಯಲ್ಲಿ ಸಂಪೂರ್ಣ ಬಹುಮತದೊಂದಿದೆ ಅಂಗೀಕರಿಸಿದ ಬಿಲ್ ಒಂದು ರಾಜ್ಯಸಭೆಯಲ್ಲಿ ಪಾಸ್ ಆಗದೆ ವಿಳಂಭವಾಗಿರುವುದು ನಾವು ನೋಡಿದ್ದೇವೆ. ಹೀಗಾಗಿ ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಬಿಜೆಪಿ ಆಪರೇಷನ್ ಆರಂಭಿಸಿದೆ.

ಮೊನ್ನೆಯಷ್ಟೇ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಸಭಾ ಸದಸ್ಯ ಕೆ.ಸಿ ರಾಮಮೂರ್ತಿ ರಾಜೀನಾಮೆ ನೀಡಿದ್ದು, ಸದ್ಯದಲ್ಲೇ ಬಿಜೆಪಿ ಸೇರಲಿದ್ದಾರೆ. ಇದರ ಜತೆಗೆ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಕೂಡ ಬಿಜೆಪಿಗೆ ಹೋಗ್ತಾರೆ ಅನ್ನೋ ಮಾತು ಕೇಳಿ ಬಂದಿವೆ. ಆದರೆ ಇದನ್ನು ಕುಪೇಂದ್ರ ರೆಡ್ಡಿ ತಳ್ಳಿಹಾಕಿದ್ದಾರೆ. ಇನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಆಪರೇಷನ್ ಕಮಲಕ್ಕೆ ತುತ್ತಾಗಿದ್ದಾರೆ ಎನ್ನಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಜೈರಾಮ್ ರಮೇಶ್ ನರೇಂದ್ರ ಮೋದಿ ಅವರ ಪರವಾಗಿ ಮಾತನಾಡಿದ್ದು, ಅವರು ಬಿಜೆಪಿಗೆ ಹೋಗ್ತಾರೆ ಎಂಬ ಚರ್ಚೆಗೆ ಪುಷ್ಠಿ ನೀಡಿದೆ. ಕಾಂಗ್ರೆಸ್, ಜೆಡಿಎಸ್ ಸದಸ್ಯರನ್ನು ಗುರಿಯಾಗಿಸಿ ಆಪರೇಷನ್ ಕಮಲ ಮಾಡಲು ಬಿಜೆಪಿ ನಾಯಕರು ನಿರ್ಧಾರ ಮಾಡಲಾಗಿದೆ ಎನ್ನಲಾಗ್ತಿದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಇವರು ಮತ್ತೊಮ್ಮೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವ ಆಶ್ವಾಸನೆ ಕೊಡಲಾಗಿದೆ ಎನ್ನಲಾಗಿದೆ. ಆದ್ರೆ ಈ ಇಬ್ಬರು ನಾಯಕರು ರಾಜೀನಾಮೆ ನೀಡಲು ಕೆಲವೊಂದಿಷ್ಟು ದಿನಗಳ ಕಾಲಾವಕಾಶ ಕೋರಿದ್ದಾರೆ ಎಂಬ ಮಾಹಿತಿ ಬಂದಿದೆ.

Leave a Reply