ಭಾರತೀಯ ಚಿತ್ರರಂಗ ಕೇವಲ ಖಾನ್ ಗಳದ್ದಲ್ಲ! ಮೋದಿ ವಿರುದ್ಧ ಜಗ್ಗೇಶ್ ಅಸಮಾಧಾನ!

ಡಿಜಿಟಲ್ ಕನ್ನಡ ಟೀಮ್:

ತಮ್ಮ ರಿಯಾಲಿಟಿ ಶೋ ವೇದಿಕೆಯಾಗಲಿ ಅಥವಾ ಸಾರ್ವಜನಿಕ ವೇದಿಕೆಯಾಗಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳುತ್ತಿದ್ದ ಬಿಜೆಪಿ ನಾಯಕ ಹಾಗೂ ನವರಸ ನಾಯಕ ಜಗ್ಗೇಶ್ ಈಗ ಮೋದಿ ವಿರುದ್ಧವೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಕಾರಣ, ಭಾರತೀಯ ಚಿತ್ರರಂಗವನ್ನು ಕೇವಲ ಬಾಲಿವುಡ್ ಗೆ ಸೀಮಿತಗೊಳಿಸಿರುವುದಕ್ಕೆ.

ಹೌದು, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನ ಆಚರಣೆ ಅಂಗವಾಗಿ ‘ಚೇಂಜ್ ವಿಥಿನ್’ ಎಂಬ ಕಾರ್ಯಕ್ರಮ ಆಯೋಜಿಸಿ ಇದರಲ್ಲಿ ಭಾರತೀಯ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಈ ಆಹ್ವಾನ ಕೇವಲ ಬಾಲಿವುಡ್ ನಟರಿಗೆ ಸೀಮಿತವಾಗಿದ್ದು, ಈಗ ಬೇರೆ ಚಿತ್ರರಂಗದವರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ಕಂಗನಾ ರಣಾವತ್, ಸೋನಂ ಕಪೂರ್, ರಾಕುಲ್ ಪ್ರೀತ್ ಸಿಂಗ್, ಜಾಕ್ವೆಲಿನ ಫರ್ನಾಂಡೀಸ್ ಸೇರಿ ಅನೇಕ ಸಿನಿಮಾ ಹಾಗೂ ಕಿರುತೆರೆ ತಾರೆಯರು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಮೋದಿ ಖಾನ್ ಗಳು ಸೇರಿದಂತೆ ಬಾಲಿವುಟ್ ಸ್ಟಾರ್ ಗಳ ಜತೆಗಿನ ಫೋಟೋ ವೈರಲ್ ಆಗಿದ್ದವು. ಆದರೆ ಈ ಚಿತ್ರಗಳಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಯಾವುದೇ ಚಿತ್ರರಂಗದ ಒಬ್ಬ ತಾರೆಯೂ ಕಾಣಿಸಲಿಲ್ಲ. ಇದು ಸಹಜವಾಗಿ ದಕ್ಷಿಣ ಭಾರತದ ಚಿತ್ರರಂಗದವರಿಗೆ ಬೇಸರ ತಂದಿದೆ. ಈ ವಿಚಾರವಾಗಿ ಟ್ವಿಟರ್ ಮೂಲಕ ಜಗ್ಗೇಶ್ ಅವರು ತಮ್ಮ ಬೇಸರ ಹೊರ ಹಾಕಿದ್ದು ಹೀಗೆ…

‘ಕನ್ನಡಿಗರು ಇಂದು ಬಹುತೇಕ ಪರಭಾಷೆ ಸ್ಟಾರ್ಗಳಿಗೆ ಚಪ್ಪಾಳೆ ಹೊಡೆದ ತಪ್ಪಿಗೆ ನಾವು ಕನ್ನಡಿಗರು ದಾರಿ ತಪ್ಪಿದವರಂತೆ ಆಗಿದ್ದೇವೆ! ಪ್ರಧಾನಿ ನರೇಂದ್ರ ಮೋದಿ ಅವರೇ, ಉತ್ತರ ಭಾರತದ ನಟ-ನಟಿಯರಿಗಿಂತ ನಾವು ಯಾವುದರಲ್ಲೂ ಕಡಿಮೆಯಿಲ್ಲ. ಶಾರೂಖ್, ಅಮೀರ್ ಖಾನ್ ಮಾತ್ರ ಕಲಾರಂಗಕ್ಕೆ ಒಡೆಯರಲ್ಲ! ನಮ್ಮ ಕನ್ನಡದ ಕಲಿಗಳು ಅನೇಕರಿದ್ದಾರೆ.’

‘ಇಂದು ಕರ್ನಾಟಕದಲ್ಲಿ ಹೆಚ್ಚು ಮನರಂಜನಾ ತೆರಿಗೆ ಸಂಗ್ರಹವಾಗುತ್ತಿರುವುದು ಕನ್ನಡದ ಚಿತ್ರರಂಗದಿಂದ, ನಟರಿಂದ ಎಂಬುದನ್ನು ನೆನಪಿಡಿ! ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಃ ಹಿಂದಿ ಚಿತ್ರರಂಗದಿಂದ ಅಲ್ಲ. ಈ ವಿಷಯ ಮನವರಿಕೆ ಮಾಡುವ ಕನ್ನಡ ಮನಸ್ಸುಗಳು ಇಲ್ಲವೆ ರಾಷ್ಟ್ರಕ್ಕೆ? ಎಂದು ತುಂಬಾ ದುಃಖವಾಯಿತು. ಖಾನ್ಗಳು ಮಾತ್ರ ಚಿತ್ರರಂಗವಲ್ಲ.’

Leave a Reply