ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆ! ಕರಾವಳಿ ರೆಡ್ ಅಲರ್ಟ್

ಡಿಜಿಟಲ್ ಕನ್ನಡ ಟೀಮ್:

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ನಿನ್ನೆಯಿಂದ ಕೇರಳ ಸೇರಿದಂತೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತಿದ್ದು, ಮುಂದಿನ ಐದು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

 ಈಗಾಗಲೇ ಪ್ರವಾಹದಿಂದ ತತ್ತರಿಸಿರುವ ಕರ್ನಾಟಕದ ಹಲವು ಜಿಲ್ಲೆಗಳು ಈಗ ಮುಂದಿನ ಐದು ದಿನಗಳ ಕಾಲ ಸುರಿವ ಮಳೆಯಿಂದ ಮತ್ತೆ ಪ್ರವಾಹಕ್ಕೆ ಸಿಲುಕುವ ಆತಂಕ ಸೃಷ್ಟಿಯಾಗಿದೆ. ಇದರ ಜತೆಗೆ ಮಹಾರಾಷ್ಟ್ರದಲ್ಲೂ ನಿರಂತರ ಮಳೆ ಬೀಳುತ್ತಿರುವ ಪರಿಣಾಮ ನಾರಾಯಣಪುರ ಜಲಾಶಯದಿಂದ 1.49 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ರಾಯಚೂರಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.

ಮಲಪ್ರಭಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಬೆಳಗಾವಿ ಜಿಲ್ಲೆಯ ಸವದತ್ತಿ ಗ್ರಾಮದ ಮುನವಳ್ಳಿ ಗ್ರಾಮ ಅರ್ಧದಷ್ಟು ಮುಳುಗಿದೆ. ಹಾವೇರಿಯಲ್ಲಿ ಭಾರಿ ಮಳೆಗೆ ಹೆಗ್ಗೇರಿ ಕೆರೆಯಲ್ಲಿ ಓರ್ವ ವ್ಯಕ್ತಿ ಕೊಚ್ಚಿಹೋಗಿದ್ದು, ಹಿರೇಕೆರೂರು ತಾಲೂಕಿನಲ್ಲಿ 1500 ಕೋಳಿಗಳು ಸತ್ತಿವೆ.ಇನ್ನು ರಾಷ್ಟ್ರೀಯ ಹೆದ್ದಾರಿ 218 ಬಂದ್ ಆಗಿದ್ದು, ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆಯಾಗಿರುವುದರಿಂದ ಕೆಣ್ಣೂರು ಗ್ರಾಮ ಮುಳುಗುವ ಹಂತದಲ್ಲಿದೆ.

ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ನಿನ್ನೆ ರಾತ್ರಿಯಿಂದ ಭಾರಿ ಮಳೆ ಸುರಿದಿದ್ದು, ರೈತರ ತೋಟಗಳಲ್ಲಿ ನೀರು ನಿಂತಿವೆ.  ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, 60 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಪರಿಣಾಮ ಹಂಪಿಯ ಸಾಲು ಮಂಟಪ, ಪುರಂದರದಾಸರ ಮಂಟಪ, ರಾಮ ಲಕ್ಷ್ಮಣ ದೇವಾಲಯಕ್ಕೆ ನೀರು ನುಗ್ಗಿದೆ.

ಇನ್ನು ದಕ್ಷಿಣ ಕರ್ನಾಟಕ ಭಾಗಕ್ಕೆ ಬಂದರೆ ಮೈಸೂರಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ವಿದ್ಯುತ್ ವ್ಯತ್ಯಯವಾಗಿದೆ. ದಾವಣಗೆರೆ, ಚಿತ್ರದುರ್ಗಗಳಲ್ಲೂ ಭಾರಿ ಮಳೆಯಾಗಿದೆ.

Leave a Reply