ನರೇಂದ್ರ ಮೋದಿ ಅಶ್ವಮೇಧ ಕುದುರೆ ಕಟ್ಟೋ ತಾಕತ್ತು ಯಾರಿಗೂ ಇಲ್ಲ..!

ಡಿಜಿಟಲ್ ಕನ್ನಡ ಟೀಮ್:

ಪ್ರಸ್ತುತ ನಮ್ಮ ದೇಶದ ರಾಜಕಾರಣದಲ್ಲಿ ನರೇಂದ್ರ ಮೋದಿ ಅವರ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಪ್ರತಿ ಚುನಾವಣೆಯಲ್ಲೂ ಸಾಬೀತಾಗುತ್ತಲೇ ಬಂದಿದೆ.

ಕೇವಲ ಲೋಕಸಭೆ ಚುನಾವಣೆಯಲ್ಲಿ ಮಾತ್ರವಲ್ಲ, ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಒಂದೊಂದೇ ರಾಜ್ಯಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡು ರಾಷ್ಟ್ರದಾದ್ಯಂತ ಕೇಸರಿ ಪತಾಕೆ ಹಾರಿಸುತ್ತಿದ್ದಾರೆ. ಈಗ ಈ ಸಾಲಿಗೆ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆ ಸೇರ್ಪಡೆಯಾಗುತ್ತಿದೆ.

ನಿನ್ನೆ ಈ ಎರಡು ರಾಜ್ಯಗಳಲ್ಲಿ ಮತದಾನ ಮುಗಿದ ಬೆನ್ನಲ್ಲೇ ಹೊರಬಂದ ಸಮೀಕ್ಷೆ ಫಲಿತಾಂಶ, ಬಿಜೆಪಿ ಭರ್ಜರಿ ಜಯದ ಭವಿಷ್ಯ ನುಡಿದಿದೆ. ಪ್ರತಿಪಕ್ಷಗಳು ಚುನಾವಣೆಯಲ್ಲಿ ಕಿಂಚಿತ್ತೂ ಪ್ರತಿರೋಧ ತೋರವುದಿಲ್ಲ ಎಂಬ ಸಮೀಕ್ಷೆ ಬಿಜೆಪಿಯ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಏಕಪಕ್ಷಿಯವಾಗಿ ಸರಳ ಬಹುಮತ ಪಡೆಯುವ ಸನಿಹಕ್ಕೆ ಬಂದು ನಿಂತಿದೆ. ಮಹಾರಾಷ್ಟ್ರದಲ್ಲಿ ಮೈತ್ರಿಯನ್ನು ಪಕ್ಕಕ್ಕಿಟ್ಟು ನೋಡಿದರೆ ಬಿಜೆಪಿ ಸಾಮರ್ಥ್ಯ ಏನು ಎಂಬುದು ಗೊತ್ತಾಗುತ್ತಿದೆ. ಇನ್ನು ಹರಿಯಾಣದಲ್ಲಿ ಕ್ಲೀನ್ ಸ್ವೀಪ್ ಮಾಡುವ ಹಂತಕ್ಕೆ‌ ಕಮಲ ಪಡೆ ಕಮಾಲ್ ಮಾಡಿದೆ.

ಮಹಾರಾಷ್ಟ್ರದಲ್ಲಿ ಒಟ್ಟು 288 ಸ್ಥಾನಗಳಿದ್ದು ಬಿಜೆಪಿ, ಶಿವಸೇನೆ‌ ಮೈತ್ರಿಕೂಟ 240ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ ಎನ್ನಲಾಗಿದೆ. 2014 ,ಚುನಾವಣೆಗಿಂತಲೂ ಕಾಂಗ್ರೆಸ್ ಮೈತ್ರಿ ​ಕಳಪೆ ಸಾಧನೆ ಮಾಡಲಿದೆ‌ ಎನ್ನುವ ಸಮೀಕ್ಷೆಗಳು ಹೊರ ಬಿದ್ದಿವೆ. ಹರಿಯಾಣದಲ್ಲಿ‌ ಒಟ್ಟು 90 ಸ್ಥಾನಗಳಿದ್ದು ಅದರಲ್ಲಿ ಬರೋಬ್ಬರಿ 75 ಸ್ಥಾನಗಳನ್ನು ಕಮಲ ತನ್ನ ವಶ ಮಾಡಿಕೊಳ್ಳಲಿದೆ ಎನ್ನುವ ಸಮೀಕ್ಷೆ ಹೊರಬಿದ್ದಿದ್ದು, ಕಾಂಗ್ರೆಸ್ ಕೇವಲ 10 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ‌ ಎನ್ನಲಾಗಿದೆ.

ಮಹಾರಾಷ್ಟ್ರ ಹಾಗು ಹರಿಯಾಣ ಚುನಾವಣೆ ಘೋಷಣೆಯಾದ ಬಳಿಕ ಈ ಬಾರಿಯ ಚುನಾವಣ ವಿಷಯ ಏನು ಅನ್ನೋದು‌ ಸಾಕಷ್ಟು ಚರ್ಚೆಯಾಗಿತ್ತು. ವಿರೋಧ ಪಕ್ಷಗಳು‌‌ ದೇಶದ ಆರ್ಥಿಕ‌ ಪರಿಸ್ಥಿತಿ ಹದಗೆಟ್ಟಿದೆ. ಕೇಂದ್ರ ಸರ್ಕಾರ‌ ತೆಗೆದುಕೊಂಡ ನಿಲುವುಗಳು ಸರಿಯಿಲ್ಲದ ಕಾರಣ ಸಾವಿರಾರು‌ ಕಾರ್ಖಾನೆಗಳು ನೆಲಕಚ್ಚುತ್ತಿದ್ದು, ಲಕ್ಷಾಂತರ ಉದ್ಯೋಗ ಕಡಿತ ಆಗ್ತಿದೆ ಎಂದು ಪ್ರಚಾರ ಶುರು ಮಾಡಿದ್ರು. ಆದ್ರೆ ಪ್ರಧಾನಿ ನರೇಂದ್ರ ಮೋದಿ‌ ಪ್ರಚಾರಕ್ಕೆ ಆಗಮಿಸುತ್ತಿದ್ದಂತೆ‌ ಜಮ್ಮು ಕಾಶ್ಮೀರಕ್ಕೆ ಕೊಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿದ್ದೇವೆ. ನಮ್ಮ ನಿರ್ಧಾರ ಪ್ರಶ್ನಿಸುವ ವಿರೋಧ ಪಕ್ಷಗಳು ಆರ್ಟಿಕಲ್ 370 ವಾಪಸ್ ತರುತ್ತೇವೆ ಎಂದು ಘೋಷಣೆ ಮಾಡಲು ತಾಕತ್ ಇದೆಯಾ ಎಂದು ಸವಾಲು ಹಾಕಿದ್ರು. ಆ ಬಳಿಕ ವೀರ ಸಾವರ್ಕರ್‌ಗೆ ಭಾರತ ರತ್ನ ಕೊಡಲು ಶಿಫಾರಸು‌ ಮಾಡ್ತೇವೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಘೋಷಣೆ ಮಾಡಿದ್ರು. ಅದನ್ನು ಮೋದಿ‌ ಹಾಗು ಅಮಿತ್ ಶಾ ಅನುಮೋದಿಸಿದ್ರು. ಅಲ್ಲಿಂದ ವೀರ ಸಾವರ್ಕರ್ ಚುನಾವಣಾ ವಿಷಯವಾಯ್ತು. ನಂತ್ರ ವಿವಾದ ಸ್ವರೂಪ ಪಡೆದು ಚುನಾವಣೆಯೂ ಮುಕ್ತಾಯ ಆಯ್ತು. ಬಿಜೆಪಿ ಬಿಟ್ಟ ಎರಡೇ ಬಾಣಗಳು ಎದುರಾಳಿಗಳ ತಂತ್ರಗಾರಿಕೆಗಳನ್ನು ಮಕಾಡೆ ಮಲಗಿಸಿದವು. ಬಿಜೆಪಿ ದಾಳ ಉರುಳಿಸುತ್ತಿದ್ದಂತೆ ಜನರು ಬೇರೆಯವರ ಮಾತು ಕೇಳಿಸಿಕೊಳ್ಳುವ ವ್ಯವಧಾನದಲ್ಲಿ ಇಲ್ಲ. ಆಯ್ಕೆ ಯಾರೆಂದು ಅಂತಿಮ ನಿರ್ಧಾರ ಮಾಡಿ‌ ಆಗಿದೆ‌ ಎನ್ನುವಂತೆ, ಮೋದಿಯ ಅಶ್ವಮೇಧ ಯಾಗದ ಕುದುರೆ ಮಹಾರಾಷ್ಟ್ರ ಹಾಗು ಹರಿಯಾಣವನ್ನು ಯಶಸ್ವಿಯಾಗಿ ದಾಟಿಕೊಂಡು ಮುಂದೆ ಸಾಗಿದೆ.

ಚುನಾವಣಾ ಫಲಿತಾಂಶ ಅಕ್ಟೋಬರ್ 24ರಂದು ಪ್ರಕಟವಾಗಲಿದ್ದು, ಬಹುತೇಕ ಮತದಾನೋತ್ತರ ಸಮೀಕ್ಷೆಯೇ ಅಧಿಕೃತ ಆಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗ್ತಿದೆ.

Leave a Reply