ರಾಜರಾಜೇಶ್ವರಿನಗರ ಟಿಕೆಟ್ ಫೈನಲ್ ಮಾಡೋದು ಯಡಿಯೂರಪ್ಪನಾ? ಬಿ.ಎಲ್ ಸಂತೋಷಾ?

ಡಿಜಿಟಲ್ ಕನ್ನಡ ಟೀಮ್:

ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಹೊಗೆ ಆಡುತ್ತಿದೆ. ಈ ಮಧ್ಯೆ ರಾಜರಾಜೇಶ್ವರಿನಗರ ಕ್ಷೇತ್ರದ ಟಿಕೆಟ್ ಯಾರಿಗೆ ಸಿಗುತ್ತದೆ ಎಂಬುದು ಸಿಎಂ ಯಡಿಯೂರಪ್ಪ ಹಾಗೂ ಆರೆಸ್ಸೆಸ್ ನಾಯಕ ಬಿ.ಎಲ್ ಸಂತೋಷ್ ಅವರ ನಡುವಣ ಪ್ರತಿಷ್ಠೆ ವಿಷಯವಾಗಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ನಾಯಕ ಮುನಿರಾಜುಗೌಡ ವಿರುದ್ಧ ಸ್ಪರ್ಧೆ ಮಾಡಿದ್ದ ಮುನಿರತ್ನ ಗೆಲುವಿನ ನಗೆ ಬೀರಿದ್ರು. ಇದೀಗ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಜಿಗಿಯಲು ಸಜ್ಜಾಗಿದ್ದಾರೆ. ಆದ್ರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಮೂಲಕ ಬೆಳೆದು ಬಂದಿರುವ ಮುನಿರಾಜು ಗೌಡ ಮುನಿರತ್ನಗೆ ತಡೆಯಾಗಿದ್ದಾರೆ.

ಯಾವುದೇ ಕಾರಣಕ್ಕೂ ಉಪಚುನಾವಣೆಯಲ್ಲಿ ಟಿಕೆಟ್ ಮುನಿರತ್ನಗೆ ಕೊಡಬಾರದು ಅನ್ನು ಪಟ್ಟು ಹಾಕಿದ್ದಾರೆ. ಇದು ಕೇವಲ ಮುನಿರತ್ನ ವರ್ಸಸ್ ಮುನಿರಾಜುಗೌಡ ಅಲ್ಲ. ಬಿ.ಎಲ್ ಸಂತೋಷ್ ವರ್ಸಸ್ ಸಿಎಂ ಯಡಿಯೂರಪ್ಪ ಎನ್ನುವಂತಾಗಿರೋದು ಸಮಸ್ಯೆ ಜಟಿಲವಾಗಿದೆ. ಮುನಿರಾಜುಗೌಡ ಸಂಘ ಪರಿವಾರದ ನಾಯಕ ಆಗಿರೋದ್ರಿಂದ ಸಹಜವಾಗಿಯೇ ಸಂತೋಷ್ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮುನಿರಾಜುಗೌಡ ಪರ ನಿಂತಿದ್ದಾರೆ. ಇನ್ನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆಪರೇಷನ್ ಕಮಲಕ್ಕೆ ಸಹಕಾರಿ ಆಗಿದ್ರಿಂದ ಟಿಕೆಟ್ ಕೊಡಿಸಲೇ ಬೇಕೆಂದು ಯಡಿಯೂರಪ್ಪ ಹಠಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಮಾತಿಗೆ ಪಕ್ಷದಲ್ಲಿ ಅಷ್ಟೊಂದು ಬೆಲೆ ಇಲ ಅನ್ನೋ ಕಾರಣಕ್ಕೆ ನಳೀನ್ ಕುಮಾರ್ ಹತ್ತಿರ ಸಮಸ್ಯೆ ಬಗೆಹರಿಸಿಕೊಳ್ಳಲು ಮುನಿರತ್ನ ಸರ್ಕಸ್ ಮಾಡಿದ್ದರು. ಒಮ್ಮೆ ಗುಪ್ತವಾಗಿ ಬಿ.ಎಲ್ ಸಂತೋಷ್ ಭೇಟಿ ಮಾಡಿ ಚರ್ಚೆಯನ್ನೂ ನಡೆಸಿದ್ರು. ಆ ಬಳಿಕ ನಳೀನ್ ಕುಮಾರ್ ಕಟೀಲ್ ಭೇಟಿಗೂ ಯತ್ನ ನಡೆಸಿದ್ರು. ಆದ್ರೆ ನಳೀನ್ ಕುಮಾರ್ ಕಟೀಲ್ ಭೇಟಿಯಾಗದೆ ಅಂತರ ಕಾಯ್ದುಕೊಳ್ಳುವ ಮೂಲಕ ನಮ್ಮಲ್ಲಿ ಸಂಘಟನೆಯ ವ್ಯಕ್ತಿಗಳಿಗೆ ಮಾತ್ರ ಅವಕಾಶ ಎನ್ನುವ ಸಂದೇಶ ರವಾನೆ ಮಾಡಿದ್ರು. ಕೊನೆಗೆ ಅಂತಿಮವಾಗಿ ಸಿಎಂ ಯಡಿಯೂರಪ್ಪ ಬೆನ್ನು ಬಿದ್ದಿರುವ ಅನರ್ಹ ಶಾಸಕ ಪಡೆ, ಮುನಿರತ್ನಗೂ ಟಿಕೆಟ್ ಕೊಡುವಂತೆ ಆಗ್ರಹ ಮಾಡಿದೆ. ಇದೇ ಕಾರಣಕ್ಕೆ ತುಳಸಿ ಮುನಿರಾಜುಗೌಡ ಜೊತೆ ಸಂಧಾನಕ್ಕೆ ಇಳಿದಿರುವ ಬಿ.ಎಸ್ ಯಡಿಯೂರಪ್ಪ, ನಿಗಮ ಮಂಡಳಿ ಸೇರಿದಂತೆ ಸಾಕಷ್ಟು ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದಾರೆ. ಆದ್ರೆ ತುಳಸಿ ಮುನಿರಾಜುಗೌಡ ಯಾವುದಕ್ಕೂ ಒಪ್ಪದೆ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ.

ಮುನಿರತ್ನ ಕೇವಲ ಓರ್ವ ಶಾಸಕನಾಗಿದ್ರೆ ಬಿಜೆಪಿ ಕೂಡ ಸಂಘ ಪರಿವಾರದ ವ್ಯಕ್ತಿಯನ್ನೂ ಸುಮ್ಮನೆ ಇರುವಂತೆ ಮಾಡುತ್ತಿತ್ತು. ಆದ್ರೆ ರಾಜರಾಜೇಶ್ವರಿ ನಗರದ ಚುನಾವಣೆ ಬೆನ್ನಲ್ಲಿ ದೊಡ್ಡ ವೋಟರ್ ಐಡಿ ಜಾಲವೇ ಬಯಲಾಗಿತ್ತು. ಸ್ವತಃ ಕೇಂದ್ರ ಬಿಜೆಪಿ‌ ನಾಯಕರೇ ರಾತ್ರೋ ರಾತ್ರಿ ಸುದ್ಧಿಗೋಷ್ಟಿ ನಡೆಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಜೊತೆಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಮುನಿರಾಜುಗೌಡ, ಮುನಿರತ್ನ ಆಯ್ಕೆಯನ್ನು ಅನುರ್ಜಿತಗೊಳಿಸಿ ನನ್ನನ್ನೇ ಶಾಸಕನೆಂದು ಆಯ್ಕೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ವಿಚಾರಣೆ ಬಾಕಿ ಇರುವ ಕಾರಣಕ್ಕೆ ಉಪಚುನಾವಣೆ ದಿನಾಂಕ ರಾಜರಾಜೇಶ್ವರಿ ನಗರಕ್ಕೆ ಅನ್ವಯವಾಗಿಲ್ಲ. ಆ ಕೇಸ್ ಮುಗಿದ ಬಳಿಕ ಚುನಾವಣೆ ನಡೆಯಲಿದ್ದು, ಅಷ್ಟೊರೊಳಗಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಮುನಿರತ್ನ ಸರ್ಕಸ್ ಮಾಡ್ತಿದ್ದಾರೆ. ಆದ್ರೆ ಮುನಿರಾಜುಗೌಡ ಚುನಾವಣೆಯಲ್ಲೇ ಪ್ರಬಲ ಪೈಪೋಟಿ ಕೊಟ್ಟಿದ್ದು, ಇದೀಗ ಸಂಧಾನಕ್ಕೂ ಬಗ್ಗದೆ ನಾನು ಅಖಾಡದಲ್ಲೇ ಉತ್ತರ ಕೊಡ್ತೇನೆ. ನನ್ನ ಕ್ಷೇತ್ರದಲ್ಲಿ ಮುನಿರತ್ನ ವಿರುದ್ಧ ಆಕ್ರೋಶವಿದೆ ಎಂದಿದ್ದಾರಂತೆ.

ಕಮಲ ಹಿಡಿದು ರಾಜಕೀಯ ಅಸ್ತಿತ್ವ ವೃದ್ಧಿಸಿಕೊಳ್ಳುವ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುನಿರತ್ನ ಇದೀಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವಂತಾಗಿದ್ದಾರೆ. ಇದೇ ಕಾರಣಕ್ಕಾಗಿ ಮುನಿರತ್ನ ಕೂಡ ಕೋರ್ಟ್ ತೀರ್ಪಿನ ಬಳಿಕ ಮುಂದಿನ ನಿರ್ಧಾರ ಎಂದಿದ್ದಾರೆ. ಜೊತೆಗೆ ಸಿಎಂ ಯಡಿಯೂರಪ್ಪ ಅವರಿಗೂ ಇದು ಅಂತಿಮ ಪ್ರಯತ್ನ ಆಗಿದ್ದು, ಒಂದು ವೇಳೆ ಪಕ್ಷದಲ್ಲಿ ತನ್ನ ಮಾತಿಗೆ ಬೆಲೆಯೇ ಇಲ್ಲದಂತಾದ್ರೆ ಮುಂದಿನ ನಿರ್ಧಾರ ಬೇರೆ ಆಗಲಿದೆ ಎನ್ನಲಾಗಿದೆ.

Leave a Reply