ದೆಹಲಿ ಹೈಕೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಗೆ ಷರತ್ತುಬದ್ಧ ಜಾಮೀನು

ಡಿಜಿಟಲ್ ಕನ್ನಡ ಟೀಮ್:

ದೆಹಲಿ ನಿವಾಸದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.

ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ದೆಹಲಿ ಹೈಕೋರ್ಟ್, ಡಿಕೆ ಶಿವಕುಮಾರ್ ಅವರ ಅನಾರೋಗ್ಯ ಗಮನದಲ್ಲಿಟ್ಟುಕೊಂಡು 3 ಷರತ್ತುಗಳ ಜಾಮೀನು ನೀಡಿದೆ. ಡಿಕೆ ಶಿವಕುಮಾರ್ ಅವರು ತಮ್ಮ ಪಾಸ್ ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು, 25 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟ್ ನೀಡಬೇಕು. ಅಗತ್ಯ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗಿ ಸಹಕರಿಸಬೇಕು ಎಂದು ಕೋರ್ಟ್ ಷರತ್ತುಗಳನ್ನು ಹಾಕಿದೆ.

ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಡಿ.ಕೆ ಶಿವಕುಮಾರ್ ಪರ ವಕೀಲರು ಆದಾಯ ತೆರಿಗೆ ವಂಚನೆ ಮಾಡಿದ್ದರೆ ದಂಡ ವಿಧಿಸಲಾಗುತ್ತದೆ. ಆದರೆ ಐಟಿ ದಾಳಿ ಬಳಿಕ ಇಡಿ ಎಂಟ್ರಿಯಾಗಿದ್ದೇ ತಪ್ಪು. ಅದೂ ಅಲ್ಲದೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು PML ಆಕ್ಟ್ ಅಡಿ ಪ್ರಕರಣ ದಾಖಲಿಸಿದ್ದು ಸರಿಯಲ್ಲ. ಇನ್ನು ಡಿಕೆ ಶಿವಕುಮಾರ್ ಅವರು ರಾಜಕಾರಣಿ ಹೀಗಾಗಿ ಅವರು ವಿದೇಶಕ್ಕೆ ಪರಾರಿಯಾಗುವುದಿಲ್ಲ. ಅವರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಅಧಿಕಾರಿಗಳು ಯಾವುದೇ ಸಂದರ್ಭದಲ್ಲಿ ವಿಚಾರಣೆಗೆ ಕರೆದರೂ ಹಾಜರಾಗುತ್ತಾರೆ ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸಿದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಮತ್ತೆ ಕಸ್ಟಡಿಗೆ ಪಡೆಯದಂತೆ ಸೂಚನೆ ಕೊಟ್ಟಿದೆ.

ಮಾಜಿ ಸಚಿವ ಡಿಕೆಶಿಗೆ ಜಾಮೀನು ಮಂಜೂರಾದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಟ್ವೀಟ್ ಮಾಡಿದ್ದು, ನ್ಯಾಯಾಲಯದ ತೀರ್ಪನ್ನು ಸ್ಚಾಗತಿಸುತ್ತೇವೆ ಎಂದಿದ್ದಾರೆ. ‘ದೆಹಲಿ ಹೈಕೋರ್ಟ್ ಡಿಕೆಶಿಗೆ ನೀಡಿರುವ ಜಾಮೀನು ದೇಶದ ನ್ಯಾಯಾಂಗ ವ್ಯವಸ್ಥೆಯು ಮೇಲೆ ಜನ ಸಾಮಾನ್ಯರ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದು.ನ್ಯಾಯಾಲಯದ ತೀರ್ಮಾನವನ್ನು ಸ್ವಾಗತಿಸುತ್ತೇನೆ’ ಎಂದಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಟ್ವಿಟರ್‌ನಲ್ಲಿ ಸ್ವಾಗತಿಸಿದ್ದಾರೆ. ಡಿ.ಕೆ ಶಿವಕುಮಾರ್ ಬೆಂಬಲಿಗರ ಹರ್ಷೋದ್ಘಾರ ಮುಗಿಲು ಮುಟ್ಟಿದ್ದು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಕನಕಪುರ, ರಾಮನಗರ, ಮಂಡ್ಯ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಸತ ಮನೆ ಮಾಡಿದೆ.

Leave a Reply