ಕಷ್ಟಕಾಲದಲ್ಲಿ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನನಗೆ ಜರ ಬೆಂಬಲ ಸಿಕ್ಕಿದೆ. ಕಷ್ಟಕಾಲದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು. ನನಗೆ ಕಾನೂನಿನ ಮೇಲೆ ಗೌರವವಿದೆ. ನನ್ನ ಹೋರಾಟ ಮುಂದುವರಿಸುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ನವದೆಹಲಿಯಲ್ಲಿ ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ನವದೆಹಲಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಡಿಕೆ ಶಿವಕುಮಾರ್, ನಮ್ಮ ವಕೀಲರು ಹಾಗೂ ನಾಯಕರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ನಂತರ ಬೆಂಗಳೂರಿಗೆ ಆಗಮಿಸುತ್ತೇನೆ ಎಂದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಬೆಳಗ್ಗೆ ನಮ್ಮ ತಾಯಿ ಹಾಗೂ ಪತ್ನಿಯ ವಿಚಾರಣೆ ಇತ್ತು. ಅದು 30ನೇ ತಾರೀಕಿಗೆ ಮುಂದೂಡಿಕೆಯಾಗಿದೆ. 31ಕ್ಕೆ ಸಮನ್ಸ್ ನೀಡಬೇಕು ಅಂತಾ ದ್ದಾರೆ. ನಾವು ವಿಚಾರಣೆಯನ್ನು ಬೆಂಗಳೂರಿನಲ್ಲೇ ಮಾಡಿ ಅಂತಾ ಕೇಳಿಕೊಂಡಿದ್ದೇವೆ. ಅವರು ಏನೇ ಮಾಡಲಿ ಉತ್ತರ ಕೊಡಲು ನಾವು ತಯಾರಿದ್ದೇವೆ. ಈಗ ನನ್ನ ಪರ ವಾದ ಮಾಡಿರುವ ವಕೀಲರನ್ನು ಭೇಟಿ ಮಾಡಬೇಕಿದೆ. ಅವರು ಕೋರ್ಟ್ ಗಳಲ್ಲಿ ಇರುವುದರಿಂದ ಮಧ್ಯಾಹ್ನ ಅವರ ಸಮಯ ಕೇಳಿದ್ದು ಮನೆಗೆ ಹೋಗಿ ಭೇಟಿ ಮಾಡಬೇಕು. ಅದು ನನ್ನ ಕರ್ತವ್ಯ. ನಂತರ ನಮ್ಮ ನಾಯಕರನ್ನು ಭೇಟಿ ಮಾಡಿ ಬೆಂಗಳೂರಿನತ್ತ ಪ್ರಯಾಣ ಮಾಡುತ್ತೇನೆ.

ನಾನು ನಂಬಿದಂತಹ ನನ್ನ ಶಕ್ತಿ ನಮ್ಮ ಜನರನ್ನು ಭೇಟಿ ಮಾಡಬೇಕಾಗಿದೆ. ಮಾಧ್ಯಮದವರೂ ಕೂಡ ಕೆಲವರು ನನ್ನ ಪರವಾಗಿದ್ದು ನಿಮ್ಮನ್ನು ಭೇಟಿ ಮಾಡುತ್ತೇನೆ. ನಿಮ್ಮ ಕರ್ತವ್ಯ ನೀವು ಮಾಡಿದ್ದೀರಿ. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿಮಗೆ ಬಿಟ್ಟಿದ್ದೇನೆ.

ನಾನು ಈಗ ಮೊದಲು ಮಾಡಬೇಕಾಗಿರುವುದು ಉಪಕಾರ ಸ್ಮರಣೆ. ನನ್ನ ಪರವಾಗಿ ನಿಂತವರನ್ನು ಭೇಟಿ ಮಾಡಿ ಅವರಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸದಿದ್ದರೆ ನಾನು ಮನುಷ್ಯನಾಗಲು ಸಾಧ್ಯನಾ? ಎಷ್ಟೋ ಜನ ರಸ್ತೆಯಲ್ಲಿ ನಿಂತು, ಬಂದ್ ಮಾಡಿ, ನನ್ನ ಪರ ಪ್ರತಿಭಟನೆ ಮಾಡಿ, ಮನೆಯಲ್ಲಿ ಕೂತು ಧ್ಯಾನ ಮಾಡಿ, ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ. ಕೇವಲ ಕಾಂಗ್ರೆಸ್ ಪಕ್ಷದವರು ಮಾತ್ರವಲ್ಲ. ಕೆಲವು ಬಿಜೆಪಿ ನಾಯಕರು ಸೇರಿದಂತೆ ಎಲ್ಲ ಪಕ್ಷದವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ದಳದವರು ನನಗೆ ಬೆಂಬಲಿಸಿದ್ದಾರೆ. ಇನ್ನು ಕಾಂಗ್ರೆಸ್ ನವರು ನನ್ನ ಕುಟುಂಬ. ಎಲ್ಲರು ಮನಸ್ಸು ಬಿಚ್ಚಿ ಪ್ರೀತಿ ತೋರಿದ್ದಾರೆ. ಆದರೆ ಕೆಲವರು ಮಾತ್ರ ನನ್ನ ಪರಿಸ್ಥಿತಿ ನೋಡಿ ಖುಷಿ ಪಟ್ಟಿದ್ದಾರೆ. ಏನು ಮಾಡಕ್ಕೆ ಆಗಲ್ಲ. ಅವರೆಲ್ಲ ಇರಬೇಕು. ಅವರಿಂದಲೇ ನಾವು ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ನನಗೆ ಅವರ ಮೇಲೆ ಯಾವುದೇ ಬೇಸರ ಇಲ್ಲ,

ನಾನು ಅಸೆಬ್ಲಿಯಲ್ಲೇ ಹೇಳಿ ಬಂದಿದ್ದೆ. ನನಗೆ ಏನೇನಾಗುತ್ತಿದೆ ಎಂಬುದು ಗೊತ್ತಿತ್ತು. ಹೀಗಾಗಿ ಮುಚ್ಚುಮರೆ ಮಾಡುವುದಿಲ್ಲ. ಯಾರ್ಯಾರು ಒತ್ತಡವಿತ್ತು. ಯಾರ್ಯಾರಿಗೆ ಏನೇನು ಆಫರ್ ಗಳಿತ್ತು. ಆದರೂ ನಾನೇ ನನಗೆ ಸಮನ್ಸ್ ನೀಡಿದ ತಕ್ಷಣ ಒಂದು ನಿಮಿಷವನ್ನು ವ್ಯರ್ಥ ಮಾಡದೇ ಮಧ್ಯಾಹ್ನ ದೆಹಲಿಗೆ ಬಂದು ಅಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿದ್ದೇನೆ. ನನ್ನ ಮಗಳಿಗೂ ಹೇಳಿದೆ. ನೀನು ವಿದ್ಯಾವಂತೆ ಇದ್ದೀಯಾ. ನಿನಗೇನು ಗೊತ್ತೋ ಅದನ್ನು ಹೇಳಿ ಅಧಿಕಾರಿಗಳಿಗೆ ಉತ್ತರ ನೀಡು ಅಂತಾ ಹೇಳಿದೆ. ಆಕೆ ಕೂಡ ಉತ್ತರ ನೀಡಿದ್ದಾಳೆ. ನನ್ನ ತಾಯಿ ಅವರಿಗೆ ವಯಸ್ಸಿನ ಸಮಸ್ಯೆ ಇದೆ. ಪ್ರಯಾಣ, ಭಾಷೆ ಸೇರಿದಂತೆ ಕೆಲವು ಸಮಸ್ಯೆಗಳು ಇವೆ. ನಾವು ಕೋರ್ಟ್ ಗೆ ಮನವಿ ಮಾಡಿದ್ದೇವೆ. ಅದಿಕಾರಿಗಳು ಅವರ ಪ್ರಯತ್ನ ಅವರು ಮಾಡಲಿ. ನನ್ನ ಪ್ರಯತ್ನ ನಾನು ಮಾಡ್ತೀನಿ.

ನಾನು ಯಾರನ್ನು ಭೇಟಿ ಮಾಡ್ತೀನಿ ಅಂತಾ ಹೇಳಲು ಕಷ್ಟ. ಪಕ್ಷ ಭೇಧ ಮರೆತು ಅನೇಕರು ಬೆಂಬಲಿಸಿದ್ದಾರೆ. ಸಿಪಿಎಂ, ಸಿಪಿಐಎಂ, ಟಿಎಂಸಿ ಜನತಾದಳ ಸೇರಿದಂತೆ ಅನೇಕ ನಾಯಕರುಗಳು ನನ್ನ ಬೆಂಬಲಿಸಿದ್ದಾರೆ. ಕೇರಳದಲ್ಲಿ ರಾತ್ರೋರಾತ್ರಿ ಪಂಜಿನ ಮೆರವಣಿಗೆ ಮಾಡಿದ್ದಾರೆ. ನಾನು ಇಡಿ ಕಚೇರಿಯಲ್ಲಿ, ಪೊಲೀಸ್ ಠಾಣೆಯಲ್ಲಿದ್ದಾಗ ಪ್ರತಿ ದಿನ ಮುನ್ನೂರು ನಾನೂರು ಜನ ಹುಡುಗರು ಬರುತ್ತಿದ್ದರು. ನನ್ನನ್ನು ಕಾಯುತ್ತಾ ತಿಂಗಳುಗಟ್ಟಲೇ ಇಲ್ಲೇ ಸೇರಿಕೊಂಡಿದ್ದಾರೆ. ರಸ್ತೆಗಿಳಿದು ಹೋರಾಟ ಮಾಡಿದ್ದಾರೆ.

ನಮ್ಮ ನಂಜಾವಧೂತ ಸ್ವಾಮಿಗಳ ಭಾಷಣ, ಅವರ ವ್ಯಾಖ್ಯಾನ ಈಗಷ್ಟೇ ತಿಳಿದುಕೊಂಡೆ. ಅನೇಕ ಮಠದ ಸ್ವಾಮಿಗಳು ಕೋರ್ಟ್ ಗೆ ಆಗಮಿಸಿ ಭೇಟಿ ಮಾಡಿದ್ದರು. ಅವರೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ, ಪ್ರಾರ್ಥನೆ ಫಲ ಇವೆಲ್ಲವೂ ಸೇರಿ ನನಗೆ ಶಕ್ತಿ ಕೊಟ್ಟಿದ್ದಾರೆ. ನಾನು ಕಾನೂನಿಗೆ ಬದ್ಧನಾಗಿರುವ ಪ್ರಜೆ. ಏಳು ಬಾರಿ ಶಾಸಕನಾಗಿದ್ದೇನೆ. ನಾವು ಕಾನೂನುಗಳನ್ನು ಮಾಡಿದ್ದೇವೆ. ಅವುಗಳನ್ನು ನಾವು ಗೌರವಿಸಬೇಕಿದೆ. ಚುನಾವಣಾ ಆಯೋಗ ಕೇಳಿರುವುದನ್ನು ನಾನು ಘೋಷಿಸಿದ್ದೇನೆ. ಈ ವಿಚಾರಗಳೆಲ್ಲವನ್ನು ನಾನು ಬೆಂಗಳೂರಿನಲ್ಲಿ ಮಾತನಾಡುತ್ತೇನೆ. ಬೇರೆಯವರ ಆಸ್ತಿ ಘೋಷಣೆ, ನನ್ನ ಆಸ್ತಿ ಘೋಷಣೆ ಎಲ್ಲದರ ಬಗ್ಗೆ ಹೇಳುತ್ತೇನೆ.

ನನ್ನ ಅನೇಕ ಸ್ನೇಹಿತರು ನನಗೆ ಒಳ್ಳೆಯ ಸಲಹೆಗಳನ್ನು ನೀಡಿದ್ದಾರೆ. ಕೆಲವರು ಬಿಸಿನೆಸ್ ಮಾಡು, ಸನ್ಯಾಸತ್ವ ತಗೋ, ಕೆಲವನ್ನು ಬಿಡಬೇಕು ಅಂದಿದ್ದಾರೆ ಎಲ್ಲದಕ್ಕೂ ಉತ್ತರ ಕೊಡುತ್ತೇನೆ.’

Leave a Reply