ಬೆಟ್ಟದಷ್ಟು ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಸಿಕ್ಕಿದ್ದು ಬೊಗಸೆಯಷ್ಟು! ಆದ್ರೂ ಕಾಂಗ್ರೆಸ್ ಸ್ಥಿತಿ ಸುಧಾರಿಸಿಲ್ಲ

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಯೇ ಬೇರೆ, ರಾಜ್ಯ ವಿಧಾನಸಭೆ ಚುನಾವಣೆಗಳೇ ಬೇರೆ. ಅಲ್ಲಿನ ತಂತ್ರ ಇಲ್ಲಿ, ಇಲ್ಲಿಯ ತಂತ್ರ ಅಲ್ಲಿ ವರ್ಕ್ ಆಗಲ್ಲ ಎಂಬುದನ್ನು ಮತದಾರ ಮತ್ತೊಮ್ಮೆ ಸಾಬೀತು ಮಾಡಿದ್ದಾನೆ. ಪರಿಣಾಮ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುತ್ತದೆ ಎಂಬ ನಿರೀಕ್ಷೆಗೆ ಮತದಾರ ಕೊಳ್ಳಿ ಇಟ್ಟಿದ್ದಾನೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿಕೂಟ (ಸಂಜೆ 4.30ರ ವೇಳೆಗೆ 157ರಲ್ಲಿ ಮುನ್ನಡೆ) ಸರಳ ಬಹುಮತದತ್ತ ಹೆಜ್ಜೆ ಹಾಕುತ್ತಿದೆ. ಇನ್ನು ಹರ್ಯಾಣದಲ್ಲಿ ಮುಕ್ಕಾಲು ಭಾಗ ಕ್ಷೇತ್ರಗಳನ್ನು ಬಾಚಿಕೊಳ್ಳುತ್ತೇವೆ ಎಂದುಕೊಂಡಿದ್ದ ಬಿಜೆಪಿಗೆ ಅತಂತ್ರ ವಿಧಾನಸಭೆ ಫಲಿತಾಂಶ ಶಾಕ್ ಕೊಟ್ಟಿದೆ.

ಮೊನ್ನೆಯಷ್ಟೇ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯದ ನಂತರ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸುವ ಭವಿಷ್ಯಗಳನ್ನು ನುಡಿದಿದ್ದವು. ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಶಿವಸೇನೆ 220ರಿಂದ 240ರವರೆಗೂ ಗೆಲ್ಲಲಿದೆ. ಇನ್ನು 90 ಕ್ಷೇತ್ರಗಳ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿ ಬರೋಬ್ಬರಿ 70ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಹೇಳಲಾಗಿತ್ತು. ಆದರೆ ಇಂದು ಮತದಾರ ಬರೆದ ಭವಿಷ್ಯ ಬಹಿರಂಗವಾದಾಗ ಈ ಸಮೀಕ್ಷೆಗಳೆಲ್ಲಾ ಮಕಾಡೆ ಮಲಗಿದವು.

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370, ವೀರ್ ಸಾವರ್ಕರ್ ಅವರಿಗೆ ಭಾರತ ರತ್ನದಂತ ಬಿಜೆಪಿ ಅಸ್ತ್ರಗಳು ನಿರೀಕ್ಷಿತ ಫಲ ನೀಡಿಲ್ಲ. ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ದೇವೇಂದ್ರ ಫಡ್ನವೀಸ್ ಅವರ ಸರ್ಕಾರದ ವೈಫಲ್ಯ, ಆರ್ಥಿಕ ಹಿಂಜರಿತ, ನಿರುದ್ಯೋಗದಂತಹ ಸ್ತಳೀಯ ವಿಚಾರಗಳು ಮತದಾರನಿಗೆ ಮುಖ್ಯವಾಗಿದ್ದು ಫಲಿತಾಂಶದಲ್ಲಿ ಸ್ಪಷ್ಟವಾಗುತ್ತದೆ.

ಇನ್ನು ಹರ್ಯಾಣ ವಿಚಾರದಲ್ಲಿ ಜಾಟ್ ಸಮುದಾಯದ ಮತಗಳು ವಿಭಜನೆಯಾಗಿದ್ದು, ಬಿಜೆಪಿ ಪ್ರಚಂಡ ಬಹುಮತದ ಆಸೆಗೆ ತಣ್ಮೀರೆರೆಚಿದೆ. ಮಹಾರಾಷ್ಟ್ರದಲ್ಲಿ ಶಿವಾಜಿ ಮಹರಾಜರಿಗಿಂತ ಈ ಬಾರಿ ಸದ್ದು ಮಾಡಿದ್ದು ವೀರ್ ಸಾವರ್ಕರ್. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಪ್ರಮುಖವಾಗಿ ಬಳಸಿದ್ದು ಜಮ್ಮು ಕಾಶ್ಮೀರದ 370ನೇ ವಿಧಿ ರದ್ದು ಅಸ್ತ್ರವನ್ನು. ರಾಷ್ಟ್ರೀಯತೆಯ ಫ್ಲೇವರ್ ನಲ್ಲೇ ಈ ಅಸ್ತ್ರ ಪ್ರಯೋಗಿಸಿ, ಬಿಜೆಪಿ ನಾಯಕರಪು ಕಾಂಗ್ರೆಸ್ ಗೆ ಈ ವಿಚಾರದಲ್ಲಿ ಸವಾಲುಗಳನ್ನು ಎಸೆದರೇ ಹೊರತು ಸ್ಥಳೀಯ ವಿಚಾರಗಳ ಅಸ್ತ್ರಗಳು ಮತದಾರನ ಮನ ತಲುಪಲಿಲ್ಲ.

ಮಹಾರಾಷ್ಟ್ರದ ಚಿತ್ರಣ ನೋಡುವುದಾದರೆ 2014ರ ಚುನಾವಣೆಯಲ್ಲಿ 122 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 100 ಗಡಿಯಲ್ಲೇ ಸುತ್ತುತ್ತಿದೆ. ಇನ್ನು ಶಿವಸೇನೆ ಕೂಡ ಕಳೆದ ಬಾರಿಗಿಂತ ಕಡಿಮೆ ಸಂಖ್ಯೆ ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಇನ್ನು ಕಾಂಗ್ರೆಸ್ ಸಂಖ್ಯೆಯಲ್ಲಿ ಒಂದೆರಡು ಅಂಕಿಗಳು ಹೆಚ್ಚಾದರೂ ತನ್ನ ಮೈತ್ರಿ ಪಕ್ಷ ಎನ್ ಸಿಪಿಗಿಂತ ಕಡಿಮೆ ಸೀಟು ಪಡೆಯುತ್ತಿರುವುದು ಕಾಂಗ್ರೆಸ್ ಪಾಲಿಗೆ ಹಿನ್ನಡೆಯೇ ಸರಿ.

ಇನ್ನು ಹರ್ಯಾಣದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಪಡೆಯುವುದಿರಲಿ ಬದಲಿಗೆ ಕಳೆದ ಬಾರಿಗಿಂತ ಕುಸಿತ ಕಾಣುತ್ತಿದ್ದು, ಕಾಂಗ್ರೆಸ್ 19ರಿಂದ 30+ ಸೀಟುಗಳಿಗೆ ಜಿಗಿಯುತ್ತಿರುವುದು ಉತ್ತಮ ಬೆಳವಣಿಗೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಐಎನ್ಎಲ್ ಡಿಯಿಂದ ವಿಭಜನೆಯಾಗಿ ರೂಪುಗೊಂಡಿರುವ ಜನನಾಯಕ್ ಜನತಾ ಪಕ್ಷ 10 ಸೀಟುಗಳನ್ನು ಗೆದ್ದು ಕಿಂಗ್ ಮೇಕರ್ ಆಗುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ಮಹಾರಾಷ್ಟ್ರ ಹಾಗೂ ಹರ್ಯಾಮ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಲಿ ಅಥವಾ ಪ್ರಿಯಾಂಕಾ ಗಾಂಧಿ ಆಗಲಿ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಆ ಮೂಲಕವೇ ಕಾಂಗ್ರೆಸ್ ಪರೋಕ್ಷವಾಗಿ ಶಸ್ತ್ರತ್ಯಾಗ ಮಾಡಿತ್ತು. ಒಂದು ವೇಳೆ ಕಾಂಗ್ರೆಸ್ ಇನ್ನಷ್ಟು ಶ್ರಮ ಹಾಕಿದ್ದೇ ಆಗಿದ್ದರೆ ಫಲಿತಾಂಶದಲ್ಲಿ ಇನ್ನಷ್ಟು ಏರಿಕೆ ಕಾಣಬಹುದಿತ್ತು.

Leave a Reply