ವಿಧಾನಸೌಧದಲ್ಲೇ ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದೇ ತರುತ್ತೇನೆ: ಡಿಕೆಶಿ

ಬೆಂಗಳೂರು:

ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಸ್ಥಳಾಂತರಗೊಳಿಸಲಾಗಿದ್ದು, ಇದರ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ವಿಧಾನಸೌಧದಲ್ಲೇ ನನ್ನ ಪ್ರಾಣ ಹೋದರು ಸರಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದೇ ತರುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ತಮ್ಮ ಸದಾಶಿವನಗರದ ನಿವಾಸದಲ್ಲಿ ಮಂಗಳವಾರ ಮಾಧ್ಯಮದವರ ಜತೆ ಮಾತನಾಡಿದ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…

‘ನಾನು ವೈದ್ಯಕೀಯ ಶಿಕ್ಷಣ ಇಲಾಖೆ ಆಯ್ಕೆ ಮಾಡಿಕೊಂಡಿದ್ದೇ ನನ್ನ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ತರಲು. ಬಜೆಟ್ ನಲ್ಲಿ ಮಂಜಾರಾಗಿ, ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪನವರು ಕೂಡ ಪ್ರಶ್ನೆ ಮಾಡದೇ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿ ಹಣಕಾಸು ಕೂಡ ಮಂಜೂರಾಗಿತ್ತು. ಸಚಿವ ಸಂಪುಟದಲ್ಲೂ ಅನುಮತಿ ಪಡೆಯಲಾಗಿತ್ತು. ಗುತ್ತಿಗೆದಾರರಿಗೆ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಹಿಂದೆ ಸೋಮಣ್ಣ ಅವರು ಸಚಿವರಾಗಿದ್ದಾಗ ಹೌಸಿಂಗ್ ಬೋರ್ಡ್ ಜಾಗವನ್ನು ನೀಡಲಾಗಿತ್ತು. ಕುಮಾರಸ್ವಾಮಿ ಅವರು ಅಮೆರಿಕಕ್ಕೆ ಹೋಗದಿದ್ದರೆ ಅವರಿಂದಲೇ ಕಾಲೇಜಿನ ಕಾಮಗಾರಿಗೆ ಭೂಮಿ ಪೂಜೆ ಮಾಡಿಸುತ್ತಿದ್ದೆ. ಇದೊಂದು ನನ್ನ ಕನಸಿನ ಯೋಜನೆ. ಆದರೆ ಈಗಿನ ಸರ್ಕಾರ ಈ ಯೋಜನೆಯನ್ನು ಏಕಾಏಕಿ ರದ್ದು ಮಾಡಿ, ಚಿಕ್ಕಬಳ್ಳಾಪುರಕ್ಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ನೀಡಿರುವುದಕ್ಕೆ ನನಗೆ ಸಮಸ್ಯೆ ಇಲ್ಲ. ಇನ್ನು ನೂರು ಕಾಲೇಜುಗಳಿಗೆ ಅನುಮತಿ ನೀಡಲಿ. ಆದರೆ, ನನ್ನ ಕ್ಷೇತ್ರಕ್ಕೆ ಸಿಕ್ಕಿದ್ದ ಮೆಡಿಕಲ್ ಕಾಲೇಜು ಕಿತ್ತುಕೊಂಡಿರುವುದನ್ನು ಸಹಿಸಿಕೊಳ್ಳುವುದಿಲ್ಲ. ನನ್ನ ಕನಕಪುರದ ಜನತೆಗಾಗಿ ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಮೆಡಿಕಲ್ ಕಾಲೇಜಿಗಾಗಿ ನಾನು ಹೋರಾಟ ನಡೆಸುತ್ತೇನೆ.

ಈ ವಿಚಾರವಾಗಿ ನಾನು ನನ್ನ ಕ್ಷೇತ್ರದ ಜನರ ಜತೆಗೆ ಮಾತನಾಡುತ್ತೇನೆ. ನಮ್ಮ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಅಭಿವೃದ್ಧಿ ಹಾಗೂ ಭಾವನಾತ್ಮಕ ವಿಚಾರ. ಯಡಿಯೂರಪ್ಪನವರು ನನ್ನ ಮನೆಗೆ ಬಂದು ಕೆಲಸ ಆಗಬೇಕು ಎಂದಾಗ ನಾನು ಯಾವುದೇ ರಾಜಕಾರಣ ಮಾಡಲಿಲ್ಲ. ಅವರಿಗೆ ಎಷ್ಟು ಸಾವಿರ ಕೋಟಿ ರುಪಾಯಿ ಯೋಜನೆ ಮಾಡಿಕೊಟ್ಟಿದ್ದೇನೆ ಅಂತಾ ನನಗೆ ಗೊತ್ತಿದೆ. ವಿರೋಧ ಪಕ್ಷದ ನಾಯಕರು ಬಂದಾಗ ನಾನು ರಾಜಕೀಯ ಮಾಡುವುದು ಸರಿಯಲ್ಲ. ಆದರೆ ಈ ವಿಚಾರದಲ್ಲಿ ರಾಜಕಾರಣ ಮಾಡಲಾಗಿದೆ.

ಇನ್ನೆರಡು ಮೂರು ದಿನಗಳಲ್ಲಿ ನಾನು ಅವರಿಗೆ ಕಾಗದ ಬರೆಯುತ್ತಿದ್ದೇನೆ. ಅವರಿಗೆ ಸಮಯ ನೀಡುತ್ತೇನೆ. ಈ ವಿಚಾರವಾಗಿ ಅವರು ಪರಿಶೀಲನೆ ನಡೆಸಿ ಒಂದು ತೀರ್ಮಾನಕ್ಕೆ ಬರಲಿ. ಇಲ್ಲದಿದ್ದರೆ ನಾನು ನನ್ನ ಹೋರಾಟ ಮಾಡುತ್ತೇನೆ. ನಾನು ಬೇರೆಯವರ ಬೆಂಬಲವನ್ನು ಕೇಳುತ್ತಾ ಕೂರುವುದಿಲ್ಲ. ನಾನು ಯಾರಿಗೆ ಈ ವಿಚಾರ ತಿಳಿಸಬೇಕೋ ಅವರಿಗೆ ತಿಳಿಸಿ ನನ್ನ ಹೋರಾಟ ಮುಂದುವರಿಸುತ್ತೇನೆ. ಈ ವಿಚಾರವನ್ನು ಹೇಗೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನನಗೆ ರಾಜಕೀಯ ಮಾಡುವುದು ಗೊತ್ತು, ಹೋರಾಟ ಮಾಡುವುದು ಗೊತ್ತು. ನಾನೇ ಒಂದು ಮೆಡಿಕಲ್ ಕಾಲೇಜು ಆರಂಭಿಸಬಹುದು. ಆದರೆ ನನ್ನ ಕ್ಷೇತ್ರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು. ನಾನು ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಗೆ ಹುಟ್ಟಿರಬಹುದು. ಆದರೆ ಕ್ಷೇತ್ರದ ಜನರು ನನ್ನನ್ನು ಮಗನಂತೆ ಬೆಳೆಸಿದ್ದಾರೆ. ಅವರಿಗೋಸ್ಕರ ಈ ಕಾಲೇಜು ಮಾಡಿಯೇ ತೀರುತ್ತೇನೆ. ನಾನು ನನ್ನ ಅಧಿಕಾರದ ಕುರ್ಚಿಯನ್ನು ಬೇಕಾದರೆ ತ್ಯಾಗ ಮಾಡುತ್ತೇನೆ. ಆದರೆ ಇಂತಹ ವಿಚಾರಗಳಲ್ಲಿ ಸುಮ್ಮನೇ ಕೂರುವ ವ್ಯಕ್ತಿ ಶಿವಕುಮಾರ್ ಅಲ್ಲ.’

ಇನ್ನು ತಾಯಿ ಹಾಗೂ ಪತ್ನಿ ಅವರಿಗೆ ನೋಟೀಸ್ ಬಂದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ‘ಇದೇ 30ರಂದು ನನ್ನ ತಾಯಿ ಹಾಗೂ ಪತ್ನಿಗೆ ನೋಟೀಸ್ ನೀಡಿರುವ ವಿಚಾರವಾಗಿ ಹೈಕೋರ್ಟ್ ನಲ್ಲಿ ವಿಚಾರಣೆ ಇದೆ. ನಾನು ಅಥವಾ ನನ್ನ ತಮ್ಮ ಅವರ ಜತೆ ಹೋಗಬೇಕಿದೆ. ನಮ್ಮ ತಾಯಿಗೂ ಆರೋಗ್ಯ ತಪಾಸಣೆ ಮಾಡಿಸಬೇಕು. ನನ್ನ ಅಡ್ವಕೇಟ್ ಗಳ ಜತೆಯೂ ಮಾತನಾಡಬೇಕಿದೆ’ ಎಂದರು.

ಇನ್ನು ಉಪ ಚುನಾವಣೆ ಬಗ್ಗೆ ಮಾತನಾಡಿದ ಡಿಕೆಶಿ, ‘ಪಕ್ಷದ ಅಧ್ಯಕ್ಷರ ಜತೆ ಮಾತನಾಡುತ್ತೇನೆ. ನನ್ನ ಸಮಯಾವಕಾಶ ನೋಡಿ, ಅವರು ಯಾವ ಕೆಲಸ ವಹಿಸುತ್ತಾರೋ ಅದನ್ನು ಮಾಡುತ್ತೇನೆ. ಇನ್ನು ಎಂಟಿಬಿ ನಾಗರಾಜ್ ಅವರ ಆಹ್ವಾನಕ್ಕೆ ಧನ್ಯವಾದಗಳು. ಅವರು ದೊಡ್ಡವರು ಸಮಯ ಬಂದಾಗ ಉತ್ತರ ಕೊಡುತ್ತೇನೆ’ ಎಂದರು.

ಇನ್ನು ಡಿಕೆ ಸುರೇಶ್ ಅವರ ಬೆಂಬಲಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸುರೇಶ್ ನನ್ನು ತಮ್ಮ ಎಂದು ಭಾವಿಸಿಲ್ಲ. ಆತ ನನ್ನ ಮಗನಂತೆ. ಮೂರು ಮಕ್ಕಳ ಜತೆಗೆ ಅವನು ಒಬ್ಬ’ ಎಂದರು.

Leave a Reply