ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಆಪರೇಷನ್ ಕಮಲ ಭೀತಿ!

ಡಿಜಿಟಲ್ ಕನ್ನಡ ಟೀಮ್:

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ (105) ಹಾಗು ಶಿವಸೇನೆ (56) ಈಗ ಸಿಎಂ ಕುರ್ಚಿಗಾಗಿ ಹಗ್ಗಜಗ್ಗಾಟ ನಡೆಸುತ್ತಿವೆ. ಪರಿಣಾಮ ಸಿಎಂ ಸ್ಥಾನ ಉಳಿಸಿಕೊಳ್ಳಲು ಬಿಜೆಪಿಯು ಶಿವಸೇನೆ ವಿರುದ್ಧ ಆಪರೇಷನ್ ಕಮಲ ಅಸ್ತ್ರ ಪ್ರಯೋಗಿಸಿದೆ.

ಎರಡು ಪಕ್ಷಗಳು ಭರ್ಜರಿ ಬಹುಮತದ ಕನಸಿನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರೂ ಪಡೆದಿದ್ದು ಸರಳ ಬಹುಮತ. ಫಲಿತಾಂಶ ಬಂದ ನಂತರ ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷಗಳು ಶಿವಸೇನೆಗೆ ಸಿಎಂ ಕುರ್ಚಿ ಆಫರ್ ಕೊಟ್ಟು ಸರ್ಕಾರ ರಚನೆಗೆ ಆಹ್ವಾನ ನೀಡಿ ಬಿಜೆಪಿ ವಿರುದ್ಧ ರಾಜಕೀಯ ದಾಳ ಉರುಳಿಸಿತು.

ಪರಿಣಾಮ ಶಿವಸೇನೆ ಈಗ 50:50 ಅಧಿಕಾರ ಹಂಚಿಕೆಗೆ ಪಟ್ಟು ಹಿಡಿದು ಬಿಜೆಪಿ ಮೇಲೆ ಒತ್ತಡ ಹಾಕಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಆಪರೇಷನ್ ಅಸ್ತ್ರ ಪ್ರಯೋಗ ಮಾಡಿ ಶಿವಸೇನೆ ಇಬ್ಬಾಗ ಮಾಡಲು ಮುಂದಾಗಿದೆ.

ಫಲಿತಾಂಶದವರೆಗೂ ದೋಸ್ತಿಗಳಾಗಿದ್ದ ಬಿಜೆಪಿ ಶಿವಸೇನೆ ಮಧ್ಯೆ ಈಗ ಒಡೆದು ಆಳುವ ಸೂತ್ರ ಪ್ರಯೋಗ ನಡೆಯುತ್ತಿದೆ.

ಮೈತ್ರಿ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬಂದರೆ 50-50 ಅಧಿಕಾರ ಹಂಚಿಕೆ ಬಗ್ಗೆ ಸ್ವತಃ ಅಮಿತ್ ಷಾ ಹಾಗು ಸಿಎಂ ದೇವೇಂದ್ರ ಫಡ್ನವಿಸ್ ಭರವಸೆ ನೀಡಿದ್ದರು ಎನ್ನುವುದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಾದ. ಆದ್ರೆ ನಾವು 50-50 ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಆಶ್ವಾಸನೆ ನೀಡಿಲ್ಲ ಎಂದು‌ ದೇವೇಂದ್ರ ಫಡ್ನವಿಸ್ ಬಹಿರಂಗವಾಗಿ ಹೇಳುವ ಮೂಲಕ ಶಿವಸೇನೆ ಸುಳ್ಳು ಹೇಳುತ್ತಿದೆ ಎಂದು ಪರೋಕ್ಷವಾಗಿ ಹೇಳ್ತಿದ್ದಾರೆ. ಆದ್ರೆ ಶಿವಸೇನಾ ಮುಖಂಡ ಸಂಜಯ್ ರಾವತ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಬಿಜೆಪಿ ನಾಯಕರು ಚುನಾವಣೆಗೂ ಮುನ್ನ ನಮಗೆ ಕೊಟ್ಟಿರುವ 50-50 ಅಧಿಕಾರ ಹಂಚಿಕೆ ಬಗ್ಗೆ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ನಮಗೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರು ಯಾಮಾರಿಸಿದ್ರೆ, ಕಾಂಗ್ರೆಸ್ ಹಾಗು ಎನ್‌ಸಿಪಿ ಜೊತೆ ಸೇರಿ ಸರ್ಕಾರ ರಚನೆ ಮಾಡ್ತೇವೆ ಎಂದಿದ್ದಾರೆ.

ಶಿವಸೇನೆ ಹಾಗು ಕಾಂಗ್ರೆಸ್ ರಾಜ್ಯಪಾಲರನ್ನು ಪ್ರತ್ಯೇಕವಾಗಿ ಭೇಟಿಯಾಗುವ ಮೂಲಕ ರಾಜಕೀಯ ಮೇಲಾಟಕ್ಕೆ ವೇದಿಕೆ ಸೃಷ್ಠಿ ಮಾಡಲು ಸಿದ್ಧತೆ ನಡೆಸಿವೆ. ಕಾಂಗ್ರೆಸ್, ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಲೆಕ್ಕಾಚಾರ ಶಿವಸೇನಾ ನಾಯಕರಲ್ಲಿ ಇದೆ. ಈ ನಡುವೆ ಶಿವಸೇನೆ ಶಾಸಕರನ್ನೇ ಆಪರೇಷನ್ ಕಮಲ ಮಾಡುವ ಮೂಲಕ ಶಿವಸೇನೆಯನ್ನು ಮಹಾರಾಷ್ಟದಲ್ಲಿ ಸಂಪೂರ್ಣ ಮುಗಿಸಿಬಿಡುವ ತಯಾರಿಯನ್ನು ಕಮಲ ನಾಯಕರು ಮಾಡಿದ್ದಾರೆ ಎನ್ನಲಾಗ್ತಿದೆ. ಅದೂ ಕೂಡ ಮೂರನೇ ಎರಡು ಭಾಗದಷ್ಟು ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯೂ ರಾಜ್ಯದಲ್ಲಿ ಸಮಸ್ಯೆ ಆಗದಂತೆ ಜಾಣ್ಮೆಯಿಂದ ರಾಜಕೀಯ ಮಾಡಲು ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ನಾವು ಶಿವಸೇನೆಗೆ ಯಾವುದೇ ಅಧಿಕಾರ ಹಂಚಿಕೆ ಬಗ್ಗೆ ಆಶ್ವಾಸನೆ ನೀಡಿಲ್ಲ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಅದೇ ರೀತಿ ಈಗಾಗಲೇ ಶಿವಸೇನಾ ಶಾಸಕರನ್ನು ಬಿಜೆಪಿ ಗೌಪ್ಯವಾಗಿ ಸಂಪರ್ಕ ಸಾಧಿಸುತ್ತಿದೆ. ಈ ವಿಚಾರದ ಬಗ್ಗೆ ತಿಳಿದಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕೆ, ಶಿವಸೇನೆಯಿಂದ ಗೆಲುವು ಸಾಧಿಸಿ, ಪಕ್ಷಾಂತರ ಮಾಡಿದ್ರೆ ನಿಮ್ಮ ರಾಜಕೀಯ ಜೀವನವೇ ಮುಗೀತು ಎಂದು ಭಾವಿಸಿಕೊಳ್ಳಿ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸತಾರಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸೋಲುಂಡ ಮಾಜಿ ಎನ್‌ಸಿಪಿ ನಾಯಕ, ಶಿವಾಜಿ ವಂಶಸ್ಥ ಉದಯನ್‌ ರಾಜೇ ಅವರನ್ನು ಉದಾಹರಣೆಯಾಗಿ ಕೊಟ್ಟಿದ್ದಾರೆ.

ಕೇವಲ ನಾಲ್ಕು ತಿಂಗಳಲ್ಲಿ ರಾಜ-ಮಹಾರಾಜರೇ ಸೋಲು ಕಂಡಿದ್ದಾರೆ ಎಂದಾದರೆ, ಸಾಮಾನ್ಯ ಜನಪ್ರತಿನಿಧಿಗಳ ಸ್ಥಿತಿ ಏನಾಗಬಹುದೆಂದು ಊಹೆ ಮಾಡಿಕೊಳ್ಳಿ ಎನ್ನುವ ಮೂಲಕ ಉದ್ಧವ್ ಠಾಕ್ರೆ ತನ್ನ ಪಕ್ಷದ ಶಾಸಕರನ್ನು ಬಿಗಿ ಹಿಡಿಯುವ ಕೆಲಸ ಮಾಡಿದ್ದಾರೆ. ಜೊತೆಗೆ ನೀವು ಪಕ್ಷ ತೊರೆದರೆ ನಾವು ಖಂಡಿತ ನಿಮ್ಮನ್ನು ಸೋಲಿಸುವ ಮೂಲಕ ರಾಜಕೀಯ ಭವಿಷ್ಯವನ್ನೇ ಮುಗಿಸುತ್ತೇವೆ ಎನ್ನುವ ಸುಳಿವನ್ನೂ ಕೊಟ್ಟಿದ್ದಾರೆ. ಉದ್ಧವ್‌ ಠಾಕ್ರೆಗೆ ಬಿಜೆಪಿ ಬಗ್ಗೆ ಮೊದಲಿನಿಂದಲೂ ಆತಂಕ ಇದ್ದೇ ಇದೆ. ಯಾಕಂದ್ರೆ 2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ಹಿಡಿದ ನರೇಂದ್ರ ಮೋದಿ, ಸುರೇಶ್ ಪ್ರಭು ಅವರನ್ನು ಶಿವಸೇನೆಯಿಂದ ರಾಜೀನಾಮೆ ಕೊಡಿಸಿ ಬಿಜೆಪಿಗೆ ಸೇರಿಸಿಕೊಂಡರು. ಮೈತ್ರಿ ಪಕ್ಷವಾಗಿದ್ದರೂ ಶಿವಸೇನೆಯ ಬೆನ್ನಿಗೆ ಇರಿಯುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದರು ಅನ್ನೋದು ಉದ್ಧವ್ ಠಾಕ್ರೆ ಆರೋಪ. ಬಿಜೆಪಿ ಬೆಳೆಯುವ ತನಕ ಪ್ರಾದೇಶಿಕ ಪಕ್ಷಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಬೆಳೆದ ಬಳಿಕ ಪ್ರಾದೇಶಿಕ ಪಕ್ಷಗಳನ್ನೇ ಸರ್ವ ನಾಶ ಮಾಡುವ ಪದ್ಧತಿ ರೂಢಿಸಿಕೊಂಡಿದ್ದಾರೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಮಾಡೋದು ಕನ್ಫರ್ಮ್ ಆಗಿದೆ. ಒಂದು ವೇಳೆ 50-50 ಅಧಿಕಾರ ಹಂಚಿಕೆ ಬೇಡಿಕೆಯಿಂದ ಶಿವಸೇನೆ ಹಿಂದೆ ಸರಿಯದಿದ್ರೆ ಆಪರೇಷನ್ ಕಮಲ ಕನ್ಪರ್ಮ್. ಈಗಾಗಲೇ ಬಿಜೆಪಿ ಕೇಂದ್ರ ನಾಯಕರ ಸೂಚನೆ ಮೇರೆಗೆ ಅಧಿಕಾರ ರಚನೆಗೆ ಮುಂದಾಗದ ದೇವೇಂದ್ರ ಫಡ್ನವಿಸ್, 15 ಮಂದಿ ಪಕ್ಷೇತರ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದಿದ್ದಾರೆ. ಬಿಜೆಪಿಯ 105 ಜೊತೆಗೆ ಪಕ್ಷೇತರ 15 ಸ್ಥಾನಗಳು ಸೇರಿದ್ರೆ 105+15 = 120 ಸ್ಥಾನಗಳಾಗುತ್ತವೆ. ಬಹುಮತಕ್ಕೆ 145 ಸ್ಥಾನಗಳು ಬೇಕಿದ್ದು, ಇನ್ನು 25 ಸ್ಥಾನಗಳ ಕೊರತೆ ಆಗಲಿದೆ. 145-120 = 25 ಸ್ಥಾನಗಳ ಕೊರತೆ ಆಗಲಿದೆ.

ಮೂರನೇ ಎರಡರಷ್ಟು ಶಿವಸೇನೆ ಶಾಸಕರನ್ನು ಸೆಳೆದುಬಿಟ್ಟರೆ, ಶಿವಸೇನೆ ಸಿಎಂ ಸ್ಥಾನ ಬಿಟ್ಟುಕೊಡದೆ ಅಧಿಕಾರ ಹಿಡಿಯಬಹುದು ಎನ್ನುವ ಲೆಕ್ಕಾಚಾರ ಸಿದ್ಧವಾಗಿದೆ ಎನ್ನಲಾಗ್ತಿದೆ.

Leave a Reply