ಯಡಿಯೂರಪ್ಪನವರ ಪಾಲಿಟಿಕ್ಸ್ ತಗೊಂಡು ನಾನೇನ್ ಮಾಡಲಿ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಸಿಎಂ ಬಿ.ಎಸ್. ಯಡಿಯೂರಪ್ಪನವರ ಪಾಲಿಟಿಕ್ಸ್ ತಗೊಂಡು ನಾನೇನ್ ಮಾಡಲಿ. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ನಮ್ಮ ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರ. ಅದನ್ನು ಬದಲಿಸೋ ಮೂಲಕ ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಕೊಡೋದಿಲ್ಲ. ಕೇವಲ ಜಿಲ್ಲಾ ಕೇಂದ್ರ ಗಳಿಗೆ ಮಾತ್ರ ಅನ್ನೋ ಸಿಎಂ ಬಿಎಸ್ ವೈ ಹೇಳಿಕೆ ವಿಚಾರ ಕುರಿತು ಕೆಪಿಸಿಸಿ ಕಚೇರಿ ಬಳಿ ಗುರುವಾರ ಪ್ರತಿಕ್ರಿಯಿಸಿದ ಅವರು, ‘ಅಧಿಕಾರ ಶಾಶ್ವತ ಅಲ್ಲ. ದ್ವೇಷದ ರಾಜಕೀಯ ಮಾಡೋದಾದ್ರೆ ಮಾಡಲಿ. ನಾನು ದ್ವೇಷದ ರಾಜಕಾರಣ ಮಾಡ್ತೀನಿ ಅನ್ನೋ ಸಂದೇಶವನ್ನ ಯಡಿಯೂರಪ್ಪ ರವಾನೆ ಮಾಡಿದ್ದಾರೆ. ಸುಧಾಕರ್ ಅವರದು ತಪ್ಪು ಅಂತಾ ನಾನು ಹೇಳಲ್ಲ. ಎಲ್ಲಿಗಾದ್ರೂ ಕೊಡಲಿ. ಆದ್ರೆ ನಮ್ಮ ಸರ್ಕಾರ ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಅಪ್ರೂವಲ್ ಮಾಡಿತ್ತು. ಅದನ್ನು ಕಿತ್ತುಕೊಳ್ಳೋದು ನ್ಯಾಯವಲ್ಲ’ ಎಂದರು.

ಕನಕಪುರಕ್ಕೂ ಕಾಲೇಜು ಕೊಡಲಿ. ಚಿಕ್ಕಬಳ್ಳಾಪುರಕ್ಕೂ ಕೊಡಲಿ. ಯಡಿಯೂರಪ್ಪನವರು ಅವರು ಈ ಬಗ್ಗೆ ನನ್ನ ಜೊತೆ ಮಾತಾಡಲಿ. ನಾನು ಕೂಡ ಅವ್ರಿಗೆ ಪತ್ರ ಬರೆಯುತ್ತೇನೆ. ಕನಕಪುರಕ್ಕೆ ಕಾಲೇಜು ನೀಡೋ ವಿಚಾರದಿಂದ ಅವರು ಹಿಂದೆ ಹೋಗೋದು ಬೇಡ. ಯಾರನ್ನೋ ಹೊಸದಾಗಿ ಪಕ್ಷಕ್ಕೆ ಸೇರಿಸಿಕೊಂಡೇ ಅನ್ನೋ ಕಾರಣಕ್ಕೆ ಅಲ್ಲಿನ ಕಾಲೇಜು ತೆಗೆದು ಇಲ್ಲಿಗೆ ಕೊಡೋದು ಸರಿಯಲ್ಲ’ ಎಂದರು.

‘ಇತಿಹಾಸ ತಿರುಚೋದು ಬೇಡ,
ಟಿಪ್ಪು ವಿಚಾರ ಮಾತನಾಡಿ. ರಾಷ್ಟ್ರಪತಿಗಳೇ ಇಲ್ಲಿಗೆ ಬಂದು ಟಿಪ್ಪು ಪರ ಭಾಷಣ ಮಾಡಿದ್ದಾರೆ. ಆದ್ರಿಂದ ಇದರಲ್ಲಿ ಹೊಸದಾಗಿ ನಾನೇನ್ ಹೇಳೋದಿದೆ? ಇತಿಹಾಸ ತಿರುಚಬಾರದು ಅಷ್ಟೇ’ ಎಂದರು.

ಬೇರೆ ಬೇರೆ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯ ಕೊಟ್ಟಿದ್ದೇವೆ. ಕೆಲವರು ಅಕ್ಕಿ ಕೊಟ್ಟೆ ಅಂತಾರೆ. ಕೆಲವರು ಸೈಕಲ್ ಕೊಟ್ಟೆ ಅಂತಾರೆ. ಕೆಲವರು ಸಾಲ ಮನ್ನಾ ಮಾಡಿದೆ ಅಂತಾರೆ. ಹೀಗಾಗಿ ನಾನು ನನ್ನ ಕ್ಷೇತ್ರಕ್ಕೆ ಏನಾದರೂ ಮಾಡಬೇಕು ಅನ್ನೋದು ನನ್ನ ಲೈಫ್ ಟೈಮ್ ಗುರಿ. ಹೀಗಾಗಿ ಕನಕಪುರ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಕೊಡಬೇಕು. ಒಂದು ವೇಳೆ ಸರ್ಕಾರ ಕೊಡದಿದ್ರೆ ನಾನು ಸುಮ್ಮನೆ ಕೂರಲ್ಲ ಎಂದರು.

Leave a Reply