ಇಂದಿರಾ ಗಾಂಧಿ ಅವರ ಪ್ರತಿ ಯೋಜನೆ ಎಲ್ಲ ವರ್ಗ ತಲುಪಿತ್ತು: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

‘ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಶಕ್ತಿ ಮಾತ್ರವಲ್ಲ ದೇಶದ ಶಕ್ತಿಯಾಗಿದ್ದವರು. ನಮ್ಮ ಹಿರಿಯ ನಾಯಕರುಗಳು ಹಾಕಿ ಕೊಟ್ಟ ಹಾದಿಯಲ್ಲಿ ನಾವು ಸಾಗಿದರೆ ಸಾಕು ಅದಕ್ಕಿಂತ ಹೊಸದಾಗಿ ಇನ್ಯಾವ ಹೊಸ ಹಾದಿ ಸೃಷ್ಟಿಸುವ ಅಗತ್ಯವೇ ಇಲ್ಲ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಈ ಪಕ್ಷವನ್ನು ನಿರ್ಣಾಮ ಮಾಡುತ್ತೇವೆ ಎಂಬುದು ಸಾಧ್ಯವಾಗದ ಮಾತು…’ ಇದು ಇಂದಿರಾ ಗಾಂಧಿ ಅವರು ಪುಣ್ಯ ತಿಥಿ ಸಂದರ್ಭದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ನುಡಿ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿಕೆ ಶಿವಕುಮಾರ್, ಅವರ ಸಾಧನೆಯ ಬಗ್ಗೆ ಮಾತನಾಡಿ ಅವರಂತೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಪಕ್ಷಕ್ಕಾಗಿ ದುಡಿಯುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

‘ಇಂದಿರಾ ಗಾಂಧಿ ಅವರ ಪುಣ್ಯತಿಥಿ ಹಾಗೂ ಸರ್ದಾರ್ ಪಟೇಲ್ ಅವರ ಜನ್ಮದಿನ ಆಚರಿಸುವ ಸಂದರ್ಭದಲ್ಲಿ ನಾವೆಲ್ಲಾ ಇದ್ದೇವೆ. ಇಬ್ಬರು ಮಹಾನ್ ಚೇತನರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಸೌಭಾಗ್ಯ.

ಇಂದಿರಾ ಅವರ ಹತ್ಯೆಯ ಸಂದರ್ಭದಲ್ಲಿ ನವೆಂಬರ್ 1ರಂದು ದೆಹಲಿಯಲ್ಲಿ ದೊಡ್ಡ ಮಟ್ಟದ ಸಮಾವೇಶ ಆಯೋಜಿಸಿದ್ದರು. ಸಮಾವೇಶದಲ್ಲಿ ಭಾಗಿಯಾಗಲು ಜಿಲ್ಲಾ ಯುವ ಘಟಕದ ಅಧ್ಯಕ್ಷನಾಗಿದ್ದ ನಾನು ಹಾಗೂ ಇತರರು ಅಕ್ಟೋಬರ್ 31ರಂದು ರೈಲಿನಲ್ಲಿ ಪ್ರಯಾಣ ಆರಂಭಿಸಿದ್ದೆವು. ಸ್ವಲ್ಪ ದೂರ ಹೋದ ನಂತರ ಅವರ ಸಾವಿನ ಸುದ್ದಿ ತಿಳಿಯಿತು. ನಂತರ ನಾವು ಬೆಂಗಳೂರಿನಲ್ಲಿ ದೊಡ್ಡ ಪ್ರತಿಭಟನೆ ಮಾಡಿದೆವು.

ಅದೇ ಸಂದರ್ಭದಲ್ಲಿ ನನಗೆ ಚಿತ್ರಮಂದಿರ ಪ್ರಾರಂಭಿಸಲು ಪರವಾನಿಗೆ ಸಿಕ್ಕಿತು. ಆಗಿನ ಡಿಸಿ ಅವರು ಚಿತ್ರಮಂದಿರಕ್ಕೆ ಯಾವ ಹೆಸರು ಇಡುತ್ತೀಯಾ? ಎಂದು ಅವರು ಕೇಳಿದರು. ನಾನು ಆಗ ಇಂದಿರಾ ಗಾಂಧಿ ಅವರ ಹೆಸರಿಡುವುದಾಗಿ ಹೇಳಿದೆ. ಇಂದಿರಾ ಗಾಂಧಿ ಹೆಸರಿನ ಚಿತ್ರಮಂದಿರಕ್ಕೆ ನಾನು ಮಾಲೀಕನಾಗಿದ್ದೆ. ಆಗಿನ ಕಾಲದಲ್ಲಿ ನಮ್ಮ ಮನೆಯಲ್ಲಿ ಮಾತ್ರ ಟಿವಿ ಇತ್ತು. ಅದನ್ನು ತೆಗೆದುಕೊಂಡು ಹೋಗಿ ದೊಡ್ಡ ಆಂಟೇನಾವನ್ನು ಹಾಕಿ ನಮ್ಮ ಹುಡುಗರಿಗೆ ಇಂದಿರಾ ಗಾಂಧಿ ಅವರ ಕಾರ್ಯಕ್ರಮ ತೋರಿಸಿದ್ದೆ. ಅವರ ನಾಯಕತ್ವದ ಮೇಲೆ ನಮಗೆ ಅಷ್ಟು ವ್ಯಾಮೋಹ ಪ್ರೀತಿ ಇತ್ತು. ಪಕ್ಷದ ವಿಚಾರದಲ್ಲಿ ನಮಗಿರುವ ಬದ್ಧತೆಯನ್ನು ಯಾರೂ ಕೂಡ ಬದಲಿಸಲು ಸಾಧ್ಯವಿಲ್ಲ. ಅದು ನಮ್ಮ ರಕ್ತದಲ್ಲೇ ಬಂದಿದೆ.

ಇಂದಿರಾ ಗಾಂಧಿ ಅವರು ಕೇವಲ ನಮ್ಮ ನಾಯಕರಾಗಿರಲಿಲ್ಲ. ಒಂದು ಶಕ್ತಿಯಾಗಿದ್ದರು. ಅವರ ನೆರಳಲ್ಲಿ ನಾವು ಬದುಕುತ್ತಿದ್ದೇವೆ. ಅವರು ದೇಶದ ಎಲ್ಲ ವರ್ಗದ ಜನರನ್ನು ಒಟ್ಟಾಗಿ ಕರೆದೊಯ್ಯುವ ನಿರ್ಧಾರಗಳು, ಚಿಂತನೆ ಅವರ ಸಾಧನೆಗೆ ಕಾರಣ. ಬ್ಯಾಂಕುಗಳ ರಾಷ್ಟ್ರೀಕರಣ, ಸಾಲ ಕೊಡುವ ಯೋಜನೆ ಬಡವರಿಗೆ ಭೂಮಿ ನೀಡುವುದು ಸೇರಿದಂತೆ ಅವರ ಎಲ್ಲ ಯೋಜನೆಗಳು ಸಮಾಜದ ಪ್ರತಿ ವರ್ಗದ ಜನರಿಗೂ ತಲುಪುವಂತಿತ್ತು. ಅವರ ಯೋಜನೆಗಳನ್ನು ಇಂದು ನಾವು ಬೇರೆ ಬೇರೆ ಹೆಸರಲ್ಲಿ ರೂಪದಲ್ಲಿ ಮುಂದುವರಿಸುತ್ತಿದ್ದೇವೆ.

ನಾನು ಸೇರಿದಂತೆ ಇಲ್ಲಿರುವ ಅನೇಕರು ತಳಮಟ್ಟದ ನಾಯಕತ್ವದಿಂದ ಬೆಳೆದು ಬಂದವರು. ಪ್ರಜಾಪ್ರಭುತ್ವದಲ್ಲಿ ಗ್ರಾಮಪಂಚಾಯ್ತಿ ಮಟ್ಟದಿಂದ ಸಂಸತ್ತಿನವರೆಗೂ ಎಲ್ಲ ಹಂತದಲ್ಲೂ ನಾಯಕತ್ವದ ಅಗತ್ಯವಿದೆ. ನಾಯಕತ್ವ ಇಲ್ಲದೇ ಯಾರೂ ಬೆಳೆಯಲು ಸಾಧ್ಯವಿಲ್ಲ. ನೀವು ಕೂಡ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಿ. ಈ ಪಕ್ಷಕ್ಕಾಗಿ ದುಡಿಯುವುದೇ ಒಂದು ಭಾಗ್ಯ. ರಾಷ್ಟ್ರ ಧ್ವಜವನ್ನು ಪಕ್ಷದ ಧ್ವಜದ ಮೂಲಕ ನಮ್ಮ ಹೆಗಲ ಮೇಲೆ ಹಾಕಿಕೊಳ್ಳುವುದೇ ಒಂದು ಹೆಮ್ಮೆಯ ವಿಚಾರ. ಈ ಭಾಗ್ಯ ಬೇರೆ ಯಾವುದೇ ಪಕ್ಷದ ಕಾರ್ಯಕರ್ತರಿಗೂ ಸಿಗುವುದಿಲ್ಲ. ನಮ್ಮ ನಾಯಕರುಗಳೇ ನಮ್ಮ ಶಕ್ತಿ. ನಮ್ಮ ಪಕ್ಷದ ಇತಿಹಾಸ ದೊಡ್ಡದಿದೆ. ಅದೇ ನಮ್ಮ ಆಸ್ತಿ. ಈಗಿನ ಕೆಲವು ನಾಯಕರುಗಳು ನಾವು ಬೆಳಸಿದವರೇ ನಮಗೆ ಮೋಸ ಮಾಡಿದ್ದಾರೆ. ಹೀಗಾಗಿ ಅದಿಕಾರವನ್ನು ಕಳೆದುಕೊಂಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಯಾವಾಗಲೂ ಅಧಿಕಾರ ಸಿಗುವುದಿಲ್ಲ. ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕು ಎಂದರೆ ವಿರೋಧ ಪಕ್ಷದ ನಾಯಕತ್ವವನ್ನು ಸ್ವೀಕರಿಸಬೇಕು. ಅದೂ ಕೂಡ ಬಹಳ ಮುಖ್ಯ. ದೇಶದ ಪ್ರಗತಿಯಲ್ಲಿ ವಿರೋಧ ಪಕ್ಷದ ಪಾತ್ರವೂ ಮುಖ್ಯ.

ಎಲ್ಲ ದೇಶಗಳಿಗೂ ಅದರದೇ ಆದ ಇತಿಹಾಸವಿದೆ. ಅದೇರೀತಿ ನಮ್ಮ ಪಕ್ಷಕ್ಕೂ ದೊಡ್ಡ ಇತಿಹಾಸ ಇದೆ. ನಮ್ಮ ನಾಯಕರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದರೆ ಸಾಕು. ನಾವು ಹೊಸದಾಗಿ ಏನನ್ನೂ ಸೃಷ್ಟಿಸುವ ಅಗತ್ಯವಿಲ್ಲ. ಈಗಿನ ಹೊಸ ಮತದಾರರಿಗೆ ಏನು ಬೇಕು ಬೇಡಗಳನ್ನು ತಿಳಿದು ಅದರತ್ತ ಗಮನ ಹರಿಸೋಣ. ಪಕ್ಷಕ್ಕಾಗಿ ನಾವೆಲ್ಲರೂ ಹೋರಾಟ ಮಾಡೋಣ. ಒಟ್ಟಾಗಿ ನಿಲ್ಲೋಣ. ಈಗ ನಮಗೆ ಅದಿಕಾರ ಇಲ್ಲದೇ ಇರಬಹುದು. ಒಂದಲ್ಲಾ ಒಂದು ದಿನ ಸಿಕ್ಕೇ ಸಿಗುತ್ತದೆ, ಅದಕ್ಕಾಗಿ ದುಡಿಯೋಣ.’

Leave a Reply