ನಿಮ್ಮ ಋಣ ತೀರಿಸುವ ಶಕ್ತಿ ತಾಯಿ ಭುವನೇಶ್ವರಿ ನೀಡಲಿ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ನನ್ನ ಸಂಕಷ್ಟದ ಸಂದರ್ಭದಲ್ಲಿ ನೀವೆಲ್ಲರು ತೋರಿದ ಪ್ರೀತಿ ವಿಶ್ವಾಸಕ್ಕೆ ಯಾರೂ ಬೆಲೆ ಕಟ್ಟಲು ಸಾಧ್ಯವಿಲ್ಲ. ನೀವು ತೆಗೆದುಕೊಂಡ ನಿಲುವು ರಾಜ್ಯದ ಇತಿಹಾಸದ ಪುಟ ಸೇರಿದೆ. ನಿಮ್ಮ ಸೇವೆಗೆ ಸದಾ ಸಿದ್ಧ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಕೆ ಶಿವಕುಮಾರ್ ಕರವೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

‘ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ… ಪದುಭನಾಭನ ಪಾದದಲಿ ಪರಮ ಸುಖವಯ್ಯ. ಆ ರೀತಿ ನಾನು ಇಂದು ನಿಮ್ಮ ಕೇಂದ್ರ ಕಚೇರಿಯಲ್ಲಿ ಕನ್ನಡ ಧ್ವಜ ಹಾರಿಸುವ ಭಾಗ್ಯ ನನಗೆ ಸಿಕ್ಕಿದ್ದು ಸಂತೋಷವಾಗಿದೆ.

ಗಾಂಧಿನಗರದ ಪ್ರತಿ ಗಲ್ಲಿಯೂ ನನಗೆ ಪರಿಚಿತ. ಎಸ್ ಜೆಪಿ ಕಾಲೇಜಿನಲ್ಲಿ ಓದಿದ್ದೇನೆ. ಇಲ್ಲಿನ ಪ್ರತಿ ಹಾವ ಭಾವ ನೋಡಿಕೊಂಡು ಬಂದಿದ್ದೇನೆ. ನನ್ನ ಕಷ್ಟಕಾಲದಲ್ಲಿ ಸಮಾಜದವರು, ಸಂಘಟನೆಗಳು, ಯಾರಿಗೂ ನನಗಾಗಿ ಪ್ರತಿಭಟನೆ ಮಾಡಿ ಎಂದು ಹೇಳಿರಲಿಲ್ಲ, ಕೇಳಿಕೊಂಡಿರಲಿಲ್ಲ. ನೀವೇ ತೀರ್ಮಾನ ಮಾಡಿ ಕರೆಕೊಟ್ಟು ಇಡಿ ರಾಷ್ಟ್ರದ ಜನ, ಒಬ್ಬ ವ್ಯಕ್ತಿ ಅರೆಸ್ಟ್ ಆದಾಗ ಆತ ತಪ್ಪು ಮಾಡಿದ್ದಾನಾ ಇಲ್ಲವೋ ಎಂದು ಪ್ರಶ್ನೆ ಮಾಡದೇ, ನನ್ನ ಮೇಲಿನ ನಂಬಿಕೆ ವಿಶ್ವಾಸ ಇಟ್ಟು ದೊಡ್ಡ ಮೆರವಣಿಗೆ ಮಾಡಿದ್ದೀರಿ. ನನಗೆ ಆ ಮೆರವಣಿಗೆ ನೋಡಲು ಆಗಲೇ ಇಲ್ಲ. ಟಿವಿ ನೋಡುವ ಅವಕಾಶ ನನಗೆ ಇರಲಿಲ್ಲ.

ಆಗ ಸ್ನೇಹಿತರೊಬ್ಬರು ಟಿವಿಯಲ್ಲಿ ಈ ರೀತಿ ಪ್ರತಿಭಟನೆ ಪ್ರಸಾರವಾಗುತ್ತಿದೆ ಅಂತಾ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ 3 ನಿಮಿಷದ ವಿಡಿಯೋ ತೋರಿದರು. ಅದನ್ನು ನೋಡಿ ನನಗೆ ಅನಿಸಿದ್ದೇನೆಂದರೆ, ನಮ್ಮ ಹಳ್ಳಿಗಳಲ್ಲಿ ಕೊಂಡ ಹಾಯುವ ರೀತಿ ಈ ವಿಚಾರದಲ್ಲಿ ನನನ್ನು ಬಿಡುವುದಿಲ್ಲ ಅಂತಾ ನನಗೆ ಗೊತ್ತಿತ್ತು. ಕಾರಣ, ಈ ವಿಚಾರವಾಗಿ ಮೊದಲೇ ಅನೇಕ ನಾಯಕರು ಭಾಷಣ ಮಾಡಿದ್ದರು. ಇವರನ್ನು ನಾವು ಜೈಲಿಗೆ ಕಳುಹಿಸುತ್ತೇವೆ ಅಂತಾ ಕೆಲವು ಮುಖಂಡರುಗಳು ಭಾಷಣ ಮಾಡಿದ್ದರು.

ಯಾರು ಏನು ಹೇಳಿದರು, ಯಾವ ರೀತಿ ಸಿದ್ಧತೆ ನಡೆಯುತ್ತಿತ್ತು, ನನಗೆ ಯಾವ ಆಫರ್ ಗಳು ಬರುತ್ತಿದ್ದವು ಎಲ್ಲವು ನನಗೆ ಗೊತ್ತಿತ್ತು. ಆ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ. ಆದರೆ ಆ ಸಂದರ್ಭದಲ್ಲಿ ನೀವು ತೋರಿದ ಶಕ್ತಿ ಪ್ರದರ್ಶನ, ಕರ್ನಾಟಕ ರಾಜ್ಯದ ಇತಿಹಾಸದ ಪುಟಗಳಲ್ಲಿ ಒಬ್ಬ ವ್ಯಕ್ತಿ ಆತ ಬಂಧನವಾಗಿ ಜೈಲಿಗೆ ಹೋದಾಗ ನಿಮ್ಮ ಸಂಘಟನೆಯ ಶಕ್ತಿಯನ್ನು ತೋರಿದ್ದು, ದಾಖಲಾಗಿದೆ. ಇತಿಹಾಸವನ್ನು ಯಾರೂ ತಿರುಚಿಸಲು ಸಾಧ್ಯವಿಲ್ಲ. ಮಾಧ್ಯಮಗಳು ಯಾವುದೇ ರೀತಿ ಬೇಕಾದರೂ ತಿರುಚಬಹುದು, ವ್ಯಾಖ್ಯಾನ ಮಾಡಬಹುದು, ಸಲಹೆ ನೀಡಬಹುದು. ಈ ಪ್ರಜಾಪ್ರಭುತ್ವದಲ್ಲಿ ಅವರು ಒಂದು ಭಾಗ. ಕೆಲವರು ಒಳ್ಳೆಯದು ಮಾತನಾಡಿದರೆ ಕೆಲವರು ಕೆಟ್ಟದ್ದು ಮಾತನಾಡುತ್ತಾರೆ. ಅದರಲ್ಲಿ ಯಾವುದು ಸರಿ ತಪ್ಪು ಯಾವುದು ಎಂದು ನೀವೇ ನಿರ್ಧರಿಸಿ, ನೀವು ತೆಗೆದುಕೊಂಡ ನಿಲುವು ಶ್ಲಾಘನೀಯ. ನಮ್ಮ ಪೊಲೀಸ್ ಅಧಿಕಾರಿಗಳು, ಬೇರೆ ಬೇರೆ ನಾಯಕರು ಯಾವರೀತಿ ನಾರಾಯಣ ಗೌಡರಿಗೆ ಧಮಕಿ ಹಾಕಿದರು. ನಾನು ಒಳಗಡೇ ಇದ್ದರೂ ನನಗೆ ಪ್ರತಿ ನಿಮಿಷ ಮಾಹಿತಿ ಸಿಗುತ್ತಿತ್ತು.

ಇದು ಕನ್ನಡ ಜನರು ಕೊಟ್ಟಂತ ಧ್ವಜ ಇದು. ಕರ್ನಾಟಕದ ಹೆಸರಿನಲ್ಲಿ ನಾವು ಜಾತಿ ಧರ್ಮ, ಮತ ಎಲ್ಲ ಬಿಟ್ಟು, ಎಲ್ಲ ಒಗ್ಗೂಡಿ, ನಮ್ಮ ನಾಡು, ಭಾಷೆ ರಕ್ಷಣೆ ಮಾಡುವ ವಿಚಾರದಲ್ಲಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ. ನಾರಾಯಣಗೌಡರಿಗೆ ಪೊಲೀಸ್ ಅಧಿಕಾರಿಗಳು ಎಷ್ಟು ಹೆದರಿಸಿದರು ಎಂದರೆ, ನನಗೆ ಆ ವಿಚಾರ ಗೊತ್ತಿದೆ. ಸರ್ಕಾರಕ್ಕೆ ತಾವು ನಿಷ್ಠರಾಗಿದ್ದೇವೆ ಎಂದು ತೋರಿಸಲು ಅಧಿಕಾರಿಗಳು ಈ ರೀತಿ ನಡೆದುಕೊಂಡಿದ್ದಾರೆ. ಅವರಿಗೂ ಈ ಡಿಕೆ ಶಿವಕುಮಾರ್ ಅವರ ಸ್ನೇಹಿತರು ಜಗ್ಗುವುದಿಲ್ಲಾ ಅಂತಾ ಗೊತ್ತಿದೆ. ಆದರೂ ಒಂದು ಪ್ರಯತ್ನ ಮಾಡೋಣ ಅಂತಾ ಮಾಡಿದರು. ಆದರೆ ನಾರಾಯಣಗೌಡರು ಅದಕ್ಕೆ ಒಪ್ಪಲ್ಲಿಲ್ಲ.

ಮಧ್ಯರಾತ್ರಿ ಹೋಗಿ ನಾರಾಯಣಗೌಡರ ಹತ್ತಿರ ಒಂದು ಬಾಂಡ್ ಬರೆಸಿಕೊಂಡರು. ಪ್ರತಿಭಟನೆ ಸಂದರ್ಭದಲ್ಲಿ ಏನೇ ಹೆಚ್ಚು ಕಡಿಮೆ ಆದರೂ ಎಲ್ಲದಕ್ಕೂ ನೀವೇ ಜವಾಬ್ದಾರಿ ಎಂದು ಮುಚ್ಚಳಿಕೆ ಬರೆಸಿಕೊಂಡರು. ನಾರಾಯಣಗೌಡರು ರಾತ್ರಿ 3 ಗಂಟೆಗೆ ಆ ಬಾಂಡ್ ಗೆ ಸಹಿ ಹಾಕಿದರು. ಈ ಬಗ್ಗೆ ಅರ್ಧ ಗಂಟೆಗೊಮ್ಮೆ ಮಾಹಿತಿ ಬರುತ್ತಿತ್ತು. ಆದರೆ ನೋಡೋ ಭಾಗ್ಯ ನನಗಿಲ್ಲ. ಅಲ್ಲೂ ಕೂಡ ನಾರಾಯಣಗೌಡರ ಶಿಷ್ಯರು ನಾನು ತುಘಲಕ್ ಠಾಣೆ ಮುಂದೆ ಬಂದು, ಕನ್ನಡದ ಪೇಪರ್ ಅನ್ನು ಕೊಟ್ಟು ನನಗಾಗಿ ಕೆಲಸ ಮಾಡಿದರು. ಆತ ಒಬ್ಬನಾಗಿ ಕೆಲಸ ಮಾಡಲಿಲ್ಲ. ಇಡೀ ಕನ್ನಡ ರಕ್ಷಣಾ ವೇದಿಕೆಯ ಸದಸ್ಯರ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು.

ನಾನು ತಿಹಾರ್ ಜೈಲಲ್ಲಿ ಇದ್ದಾಗ, ತೀರ್ಮಾನ ಮಾಡಿದೆ. ಬಿಡುಗಡೆ ಆದ ನಂತರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರನ್ನು ಭೇಟಿ ಮಾಡಬೇಕು ಎಂದು ತೀರ್ಮಾನಿಸಿದೆ. ಬೆಂಗಳೂರಿಗೆ ಬಂದ ತಕ್ಷಣ ಪಕ್ಷದ ಕಚೇರಿಯಲ್ಲಿ ಬೇರೆ ನಾಯಕರು ಕಾಯುತ್ತಿದ್ದರು. ಹೀಗಾಗಿ ಅಲ್ಲಿಗೆ ನೇರವಾಗಿ ಹೋಗಬೇಕಾಯಿತು. ನಂತರ ಇಲ್ಲಿಗೆ ಬರಬೇಕು ಎಂದು ನಿರ್ಧರಿಸಿದ್ದೆ. ನನಗೆ ಯಾರು ಸಹಾಯ ಮಾಡಿದರೋ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಬೇಕಾಯಿತು. ಮನುಷ್ಯ ಯಾರೇ ಆದರೂ ಕೂಡ ಆತನಿಗೆ ಉಪಕಾರ ಸ್ಮರಣೆ ಇರಬೇಕು. ಇಲ್ಲವಾದರೆ ಮನುಷ್ಯತ್ವ ಇರುವುದಿಲ್ಲ.
ನಾನು ಆಗಾಗಾ ಒಂದು ಮಾತು ಹೇಳುತ್ತಿರುತ್ತೇನೆ. ನೀವು ನಿಮ್ಮ ಬೇರನ್ನು ಮರೆತರೆ ಫಲ ಸಿಗಲ್ಲ ಅಂತಾ. ಹಾಗೆ ನಾವು ನಮ್ಮ ಅಡಿಪಾಯ, ಬೇರನ್ನು ಮರೆತರೆ ಯಾವುದೇ ಹಣ್ಣು, ನೆರಳು ಸಿಗುವುದಿಲ್ಲ. ಹೀಗಾಗಿ ಅದನ್ನು ಮರೆಯಬಾರದು.

ನಾನು ಕರವೇ ಕಚೇರಿಗೆ ಬಂದು ಧ್ವಜ ಹಾರಿಸಲು ಆಹ್ವಾನಿಸಿದರು. ನನ್ನ ಕ್ಷೇತ್ರದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಧ್ವಜಾರೋಹಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾರಾಯಣ ಗೌಡರು ಇಲ್ಲಿಗೆ ಕರೆದಾಗ ನಿಮ್ಮನ್ನೆಲ್ಲಾ ಭೇಟಿ ಮಾಡುವ ಅವಕಾಶ ಸಿಗುತ್ತದೆಯಲ್ಲಾ ಅಂತಾ ಬಹಳ ಸಂತೋಷದಿಂದ ಬಂದೆ. ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಕಾಶ್ಮೀರದಿಂದ, ಕನ್ಯಾಕುಮಾರಿವರೆಗೂ ನಮ್ಮ ಪಕ್ಷ, ಬೇರೆ ಪಕ್ಷದ ಕಾರ್ಯಕರ್ತರು ಪಂಜಿನ ಮೆರವಣಿಗೆ ಮಾಡಿ ಬೆಂಬಲ ಸೂಚಿಸಿದ್ದಾರೆ.

ನಾನು ಬಂದಾಗ ಸ್ವಾಗತ ಮಾಡಿ, ಹೂವಿನ ಹಾರ ಹಾಕಿ ಎಂದು ಕೇಳಲಿಲ್ಲ. ಆದರೆ ಸಾವಿರಾರು ಮಂದಿ ಅಭಿಮಾನ ತೋರಿಸಿದ್ದಾರೆ. ಅವರು, ನೀವು ತೋರಿಸಿದ ಪ್ರೀತಿ, ವಿಶ್ವಾಸಕ್ಕೆ ಯಾರು ಬೆಲೆ ಕಟ್ಟಲು ಸಾಧ್ಯವಿಲ್ಲ. ನಾನು ಬಂದ ತಕ್ಷಣ ತಾಯಿ ಭುವನೇಶ್ವರಿಗೆ ಜ್ಯೋತಿ ಬೆಳಗಿಸಿ ಪೂಜೆ ಮಾಡಿದೆ. ಆ ತಾಯಿಗೆ ನಾನು ಕೇಳುವುದು ಒಂದೇ, ನಿಮ್ಮ ಋಣವನ್ನು ತೀರಿಸುವ ಶಕ್ತಿ ನನಗೆ ಕೊಡಲಿ.

ನಾನು ಸಿದ್ದರಾಮಯ್ಯನವರಿಗೆ ಎರಡು ಮೂರು ಬಾರಿ ಒಂದೇ ಬೇಡಿಕೆ ಇಟ್ಟಿದ್ದೆ. ನೀವು ಏನೂ ಮಾಡಲು ಹೋಗಬೇಡಿ, ಕರವೇ ಸಂಘಟನೆಯವರು ಈ ರಾಜ್ಯದ ನೆಲ, ಜಲ ಸಂರಕ್ಷಣೆಗೆ ಹೋರಾಟ ಮಾಡಿದ್ದಾರೆ. ಈ ಕಾರ್ಯಕರ್ತರ ಮೇಲೆ ಎಷ್ಟು ಪ್ರಕರಣಗಳಿವೆ ಅವುಗಳನ್ನು ವಜಾ ಮಾಡಬೇಕು ಅಂತಾ ಮನವಿ ಮಾಡಿದೆ. ಪಾಪ ಅವರ ಕೈಯಲ್ಲಿ ಆಯಿತೋ ಇಲ್ಲವೋ ಚರ್ಚೆ ಬೇಡ. ಇವತ್ತು ನಾನು ಮುಖ್ಯಮಂತ್ರಿ ಹತ್ತಿರವಿಲ್ಲ. ಬೊಮ್ಮಾಯಿ ಅವರಿಗೆ ಹೇಳುವುದೂ ಅದೇ, ಈ ನಾಡಧ್ವಜ ಹಿಡಿದು ಹೋರಾಟ ಮಾಡಿದ ಈ ರಾಜ್ಯದ ರಕ್ಷಣೆಯ ಕಾರ್ಯಕರ್ತರ ಮೇಲೆ ಪ್ರಕರಣ ವಜಾ ಮಾಡಿ ಎಂದು ಪತ್ರ ಬರೆದು ಕೇಳಿಕೊಳ್ಳುತ್ತೇನೆ.

ನಮಗೆ ಅಧಿಕಾರಬೇಕು, ಆದರೆ ನಿಮಗೆ ಅದ್ಯಾವುದೂ ಇಲ್ಲ. ನಿಮ್ಮ ಸ್ವಾರ್ಥ ಬಿಟ್ಟು, ಈ ದೇಶದ ಸಂಸ್ಕೃತಿ ಭಾಷೆ ಉಳಿಸಬೇಕು ಎಂಬುದು ನಿಮ್ಮ ಉದ್ದೇಶ. ಇಲ್ಲಿ ಯಾವುದೇ ಜಾತಿ, ಧರ್ಮಕ್ಕೆ ಅವಕಾಶ ಇಲ್ಲ. ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ. ಈ ಡಿಕೆ ಶಿವಕುಮಾರ್ ಪ್ರಾಣ ಇರೋವರೆಗೂ ನಿಮ್ಮ ಜತೆ ಈ ಕನ್ನಡದ ಬಾವುಟದ ಜತೆ ಇರುತ್ತೇನೆ ಎಂದು ಹೇಳುತ್ತೇನೆ.

ಇಲ್ಲೂ ಅನೇಕ ಸಂಘಟನೆಗಳು ಅನೇಕ ಹುಟ್ಟುಕೊಂಡಿವೆ. ಆದರೂ ನಾರಾಯಣ ಗೌಡರ ನೇತೃತ್ವದಲ್ಲೂ ಎರಡು ದಶಕಗಳಿಂದ ಅಧಿಕಾರದ ನಿರೀಕ್ಷೆ ಇಲ್ಲದೇ ಸಂಘಟನೆ ಉಳಿಸಿಕೊಳ್ಳುವುದು ದೊಡ್ಡ ವಿಚಾರ. ನಿಮ್ಮ ಹೋರಾಟ ಕಾನೂನು ಚೌಕಟ್ಟಿನಲ್ಲಿ ಇರಲಿ. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ಬಹಳ ಹುಷಾರಾಗಿದ್ದು ಹೋರಾಟ ಮುಂದುವರಿಸಿ. ರಾಜ್ಯದ ಜನತೆ ಆಶೀರ್ವಾದದಿಂದ ನಿಮ್ಮ ಆಶೀರ್ವಾದ, ನಿರೀಕ್ಷೆ ಈಡೇರಲಿದೆ ಎಂದು ವಿಶ್ವಾಸ ಇದೆ. ನಿಮ್ಮ ನಮ್ಮ ಸಂಬಂಧ ಭಕ್ತರಿಗೂ ಭಗವಂತನಿಗೂ ಇರುವ ಸಂಬಂಧ. ನನ್ನ ಸಂಘಟನೆ ಒಂದು ದೇವಸ್ಥಾನ. ನಾನು ಇಲ್ಲಿ ಒಬ್ಬ ಭಕ್ತನಾಗಿ ರಾಜ್ಯದಲ್ಲಿ ನಿಮ್ಮೆಲ್ಲರ ಸೇವೆ ಮಾಡಲು ಬಂದಿದ್ದೇನೆ. ಇದನ್ನು ಮುಂದುವರಿಸಿಕೊಂಡು ಹೋಗುತ್ತೇನೆ.

ನಾನು ತಪ್ಪು ಮಾಡಿದರೆ ಅದನ್ನು ತಿದ್ದುವ ಶಕ್ತಿ ನಿಮಗೆ ಇದೆ. ಆದರೂ ಒಂದು ಮಾತು ಹೇಳುತ್ತೇನೆ. ನಾನು ಏನಾದರೂ ತಪ್ಪು ಮಾಡಿದರೆ ನನಗೆ ಯಾವುದೇ ಶಿಕ್ಷೆ ಬೇಕಾದರೂ ಬಿಜೆಪಿ ಸ್ನೇಹಿತರು ನೀಡಲಿ ಸ್ವೀಕರಿಸಲು ನಾನು ಸಿದ್ಧ.’

Leave a Reply