BJP ಹೈಕಮಾಂಡ್​ ವರ್ತನೆಗೆ ಪ್ರತಿಯಾಗಿ CM ಸಿಡಿಸಿದ್ರಾ ಆಡಿಯೋ ಬಾಂಬ್..?

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಲು ತಮ್ಮ ಪಕ್ಷದ ಹೈಕಮಾಂಡ್ ಸಹಕಾರ ನೀಡದೇ ಇದ್ದ ಕಾರಣ ಸಿಎಂ ಯಡಿಯೂರಪ್ಪ ಅವರೇ ಆಪರೇಷನ್ ಕಮಲದ ಆಡಿಯೋ ಬಾಂಬ್ ಹಾಕಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರೋ ಗುಸುಗುಸು.

ಹೌದು, ಆಪರೇಷನ್ ಕಮಲ ಪ್ರಹಸನದೊಂದಿಗೆ ಸರ್ಕಾರ ರಚಿಸಿ ಸಿಎಂ ಆದ ಬಿಎಸ್ ಯಡಿಯೂರಪ್ಪ ನೂರು ದಿನಗಳ ಅಧಿಕಾರ ಪೂರ್ಣಗೊಳಿಸಿದ್ದಾರೆ. ಈ ನೂರು ದಿನಗಳ ಸಿಎಂ ನಡೆದಿದ್ದು ಸವಾಲುಗಳ ಕಲ್ಲು ಮುಳ್ಳಿನ ಹಾದಿಯಲ್ಲಿ. ಇದರಲ್ಲಿ ವಿರೋಧ ಪಕ್ಷಗಳ ಸವಾಲಿಗಿಂತ ಸ್ವಪಕ್ಷೀಯರ ಸಾವಾಲುಗಳೇ ಯಡಿಯೂರಪ್ಪ ಅವರನ್ನು ಹೈರಾಣಾಗಿಸಿತ್ತು. ಆದರೆ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಮಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಹುಸಿಯಾದ ನಂತರ ಯಡಿಯೂರಪ್ಪಗೆ ಹೈಕಮಾಂಡ್ ಸಹಕಾರ ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಉಪ ಚುನಾವಣೆಯಲ್ಲಿ ಅನರ್ಹರ ವಿಚಾರವಾಗಿ ಪಕ್ಷದಲ್ಲಿ ಇತರ ನಾಯಕರ ಅಸಹಕಾರ ಹಾಗೂ ಪಕ್ಷದ ರಾಷ್ಟ್ರ ಮಟ್ಟದ ನಾಯಕರ ತಂತ್ರಗಾರಿಕೆ ಹಾಗೂ ಒತ್ತಡದಿಂದ ಬೇಸತ್ತಿದ್ದ ಯಡಿಯೂರಪ್ಪ ಈಗ ಆಡಿಯೋ ಅಸ್ತ್ರ ಪ್ರಯೋಗಿಸಿದ್ದಾರೆ. ಆ ಮೂಲಕ ಸರ್ಕಾರದ ಪ್ರತಿ ಹೆಜ್ಜೆಯಲ್ಲೂ ತಮಗೆ ಮುಖಭಂಗ ಮಾಡುತ್ತಿದ್ದ ಸ್ವಪಕ್ಷೀಯ ನಾಯಕರಿಗೆ ಪ್ರತಿತಂತ್ರ ಪ್ರಯೋಗಿಸಿದ್ದಾರೆ ಎಂದು ಹೇಳಲಾಗಿದೆ.

ಈಗ ಆಪರೇಷನ್ ಕಮಲದ ವಿಚಾರವಾಗಿ ಲೀಕ್ ಆಗಿರುವ ಆಡಿಯೋ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಂದ ರಾಜ್ಯ ನಾಯಕರವರೆಗೂ ಎಲ್ಲರನ್ನೂ ಮುಜುಗರಕ್ಕೆ ಸಿಲುಕಿಸಿದೆ.

ಅತೃಪ್ತ ಶಾಸಕರನ್ನು ರಾಜೀನಾಮೆ ಕೊಡಿಸಿ ಸರ್ಕಾರ ರಚನೆ ಮಾಡುವ ಸಿದ್ಧತೆಯಲ್ಲಿದ್ದ ಬಿಎಸ್​ ಯಡಿಯೂರಪ್ಪಗೆ ಸ್ಪೀಕರ್​ ಅನರ್ಹತೆ  ಅಸ್ತ್ರ ಬಳಸ್ತಾರೆ ಅನ್ನೋದು ಗೊತ್ತಿತ್ತು. ಆದ್ರೆ ಉಪಚುನಾವಣೆ ವೇಳೆಗೆ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತಿ ಕೊಡಿಸುತ್ತೇನೆ. ಕಾನೂನು ಹೋರಾಟದಲ್ಲೂ ಜಯ ಸಿಗುವಂತೆ ನೋಡಿಕೊಳ್ತೇನೆ ಎಂದಿದ್ದ ಯಡಿಯೂರಪ್ಪ, ಹೈಕಮಾಂಡ್​ ನಾಯಕರ ಸಹಕಾರ ಇಲ್ಲದೆ ಕಂಗಾಲಾಗಿದ್ದಾರೆ. ಇದ್ರ ನಡುವೆ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಬಿಜೆಪಿ ಪರಾಜಿತ ನಾಯಕರು ರೆಬೆಲ್​ ಆಗಿ ಕಣಕ್ಕಿಳಿಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಇದೇ ಕಾರಣದಿಂದ ಸಿಎಂ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್​ ಮೇಲೆಯೇ ಆಡಿಯೋ ಬಾಂಬ್​ ಎಸೆದಿದ್ದಾರೆ ಎನ್ನುವ ಗುಮಾನಿ ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿವೆ. ಆಪರೇಷನ್​ ಕಮಲ ಮಾಡಿ ಸರ್ಕಾರ ರಚನೆ ಮಾಡಿದ್ದಾರೆ ಅನ್ನೋದು ರಾಜ್ಯದ ಜನರಿಗೆ ಗೊತ್ತಿರುವ ಸಂಗತಿ. ಆದ್ರೆ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸದೆ ಕೇಂದ್ರ ಸರ್ಕಾರ ನನ್ನನ್ನೇ ಕಳನಾಯಕನನ್ನಾಗಿ ಮಾಡಲು ಹೊರಟಿದೆ ಎನ್ನುವ ಭಾವನೆಯಲ್ಲಿರುವ ಯಡಿಯೂರಪ್ಪ, ನೇರವಾಗಿ ಆಪರೇಷನ್​ ಕಮಲ ಅಂಗಳಕ್ಕೆ ಅಮಿತ್​ ಶಾ ಅವರನ್ನು ಎಳೆದು ತಂದು ನಿಲ್ಲಿಸಿದ್ದಾರೆ.

ಸರ್ಕಾರ ಬಿದ್ದರೂ ಪರವಾಗಿಲ್ಲ ರಾಜ್ಯದ ಜನರ ದೃಷ್ಟಿಯಲ್ಲಿ ನಾನು ಕೆಟ್ಟವನಾಗಬಾರದು ಎನ್ನುವ ಮಟ್ಟಕ್ಕೆ ಬಂದಿರುವ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್​ ಸೂಚನೆಯಂತೆ ಆಪರೇಷನ್​ ಕಮಲ ನಡೀತು ಅನ್ನೋದನ್ನು ಈ ಮೂಲಕ ಜನರಿಗೆ ತಿಳಿಸಿದ್ದಾರೆ. ಈ ಆಡಿಯೋ ಉದ್ದೇಶ ಪೂರ್ವಕವಾಗಿಯೇ ರೆಕಾರ್ಡ್​ ಮಾಡಲಾಗಿದೆ. ಈ ಅಂಶ ಗೊತ್ತಿದ್ದ ಯಡಿಯೂರಪ್ಪ, ಬೇಕೆಂದೇ ನಾವು ಮಾತನಾಡಿದ ಬಗ್ಗೆ ಹೊರಗಡೆ ಸುದ್ದಿ ಮಾಡಿಸಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪನೇ ಆಡಿಯೋ ರೆಕಾರ್ಡ್​ ಮಾಡಿಸಿದ್ದಾರೆ ಅನ್ನೋ ಗುಮಾನಿ ಪಕ್ಷದಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಳೀನ್​ ಕುಮಾರ್​ ಕಟೀಲ್, ಪಕ್ಷದೊಳಗೆ ಆಂತರಿಕವಾಗಿ ತನಿಖೆಗೆ ಮುಂದಾಗಿದ್ದಾರೆ. ಯಾರು ಯಾವ ಉದ್ದೇಶಕ್ಕೆ ಆಡಿಯೋ ರೆಕಾರ್ಡ್​ ಮಾಡಿಸಿದ್ರು. ಯಾರ ಮೂಲಕ ಆಡಿಯೋ ಮಾಧ್ಯಮಗಳಿಗಳಿಗೆ ತಲುಪಿಸಲಾಯ್ತು ಅನ್ನೋ ಬಗ್ಗೆ ಮಾಹಿತಿ ಸಂಗ್ರಹ ಮಾಡ್ತಿದ್ದು, ಹೈಕಮಾಂಡ್​ಗೆ ಇಂಚಿಂಚು ಮಾಹಿತಿ ರವಾನೆ ಮಾಡಲಿದ್ದಾರೆ ಎನ್ನಲಾಗಿದೆ. ಹೈಕಮಾಂಡ್​ ಕೂಡ ಯಡಿಯೂರಪ್ಪ ಮೇಲೆ ಗರಂ ಆಗಿದ್ದು, ನಳೀನ್​ ಕುಮಾರ್​ ಕಟೀಲ್​ ವರದಿ ಕೈ ಸೇರಿದ ಬಳಿಕ ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

Leave a Reply