ಆಪರೇಷನ್ ಆಡಿಯೋ: ಕಾಂಗ್ರೆಸ್ ಮನವಿ ಮಾನ್ಯ ಮಾಡಿದ ಸುಪ್ರೀಂ ಕೋರ್ಟ್!?

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲ ವಿಚಾರವಾಗಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಆಡಿಯೋ ವಿಚಾರವನ್ನು ಸುಪ್ರೀಂ ಕೋರ್ಟ್ ವರೆಗೂ ಎಳೆದುಕೊಂಡು ಹೋಗಿರುವ ಕಾಂಗ್ರೆಸ್, ಅನರ್ಹ ಶಾಸಕರ ಪ್ರಕರಣದಲ್ಲಿ ಇದನ್ನು ಹೊಸ ಸಾಕ್ಷ್ಯವನ್ನಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕು. ಹೀಗಾಗಿ ಇದರ ವಿಚಾರಣೆಗೆ ಪ್ರತ್ಯೇಕ ಸಂವಿಧಾನ ಪೀಠ ರಚನೆ ಮಾಡಬೇಕು ಎಂದು ಮನವಿ ಮಾಡಿದೆ.

ಕಾಂಗ್ರೆಸ್ ಮನವಿಯನ್ನು ಮಾನ್ಯ ಮಾಡಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಮಣ ಅವರ ನೇತೃತ್ವದ ಪೀಠ, ಈ ವಿಚಾರವನ್ನು ಮುಖ್ಯನ್ಯಾಯಮೂರ್ತಿಗಳ ಗಮನಕ್ಕೆ ತರಲಾಗುವುದು. ಅವರು ಒಪ್ಪಿದರೆ ನಾಳೆ ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪರ ವಕೀಲರಾದ ಕಪಿಲ್ ಸಿಬಲ್ ಅವರು ಈ ವಿಚಾರವನ್ನು ನ್ಯಾಯಲಯದ ಮುಂದೆ ಮಂಡಿಸಿದರು. ಅನರ್ಹ ಶಾಸಕರಿಗೆ ಬಿಜೆಪಿಯಿಂದ ಆಮಿಷ ನೀಡಲಾಗಿತ್ತು. ಈ ಆಮಿಷ ಇಲ್ಲದಿದ್ದರೆ ಅವರು ರಾಜೀನಾಮೆ ನೀಡುತ್ತಿರಲಿಲ್ಲ. ಪ್ರಕರಣದಲ್ಲಿ ಈ ಬಗ್ಗೆ ವಿಚಾರಣೆ ಮುಕ್ತಾಯವಾದ ಬಳಿಕ ಈ ಸಾಕ್ಷಿ ಸಿಕ್ಕಿದ್ದು, ಇದನ್ನು ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ತಿಳಿಸಿದರು.

ಸದ್ಯ ಸುಪ್ರೀಂ ಕೋರ್ಟ್ ಈ ಆಡಿಯೋ ಸತ್ಯಾಸತ್ಯತೆಯನ್ನು ಖಚಿತಪಡಿಸಿದ ನಂತರವಷ್ಟೇ ಸಾಕ್ಷಿಯಾಗಿ ಪರಿಗಣಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲಿದೆ.

ಈ ಮಧ್ಯೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ರಾವ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಆಡಿಯೋ ವಿಚಾರವಾಗಿ ದೂರು ನೀಡಲು ನಿರ್ಧರಿಸಿದೆ. ಈ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವೂ ಇದ್ದು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

Leave a Reply