ಹೊಸಕೋಟೆಯಲ್ಲಿ ಬಿಜೆಪಿ ಆತುರದ ನಿರ್ಧಾರ ಯಾಕೆ..?

ಡಿಜಿಟಲ್ ಕನ್ನಡ ಟೀಮ್:

ಮುಂದಿನ ತಿಂಗಳು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತಿದೆ. ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದ್ದು, ಬಿಜೆಪಿ ನಾಯಕ ಶರತ್ ಬಚ್ಚೆಗೌಡ ಬಂಡಾಯದ ಬಾವುಟ ಹಾರಿಸಿದ್ದಾರೆ. ಹೀಗಾಗಿ ಈ ಕ್ಷೇತ್ರ ಪ್ರತಿಷ್ಠೆ ಕಣವಾಗಿದೆ.

ಎಂಟಿಬಿ ನಾಗರಾಜ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಇನ್ನೂ ಕೂಡ ಅರ್ಹರಾಗಿಲ್ಲ. ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ಇನ್ನಷ್ಟೇ ಭವಿಷ್ಯ ಬರೆಯಬೇಕಿದೆ. ಇದೇ ಕಾರಣಕ್ಕೆ ಉಪಚುನಾವಣೆ ನಡೆಯುವ ಉಳಿದ ಕ್ಷೇತ್ರಗಳಿಗೆ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ಒಂದು ವೇಳೆ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಆದೇಶ ಹೊರಬಿದ್ದರೆ, ಬಿಜೆಪಿಯ ನಾಯಕರನ್ನೇ ಅಖಾಡಕ್ಕೆ ಇಳಿಸುವ ಯೋಜನೆ ಬಿಜೆಪಿ ನಾಯಕರಲ್ಲಿದೆ. ಇದೇ ಕಾರಣಕ್ಕೆ ಅನರ್ಹ ಶಾಸಕರು ಹಾಗು ಎದುರಾಳಿ ಅಭ್ಯರ್ಥಿಗಳ ನಡುವೆ ಯಾವುದೇ ನಿರ್ಧಾರ ಕೈಗೊಳ್ಳದೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಆದ್ರೆ ಅದೇ ಹೊಸಕೋಟೆ ವಿಚಾರದಲ್ಲಿ ಬಿಜೆಪಿ ನಾಯಕರು ಒಂದು ಹೆಜ್ಜೆ ಮುಂದಿಟ್ಟಿದ್ದು, ಅಭಿವೃದ್ಧಿ ಕೆಲಸದ ಹೆಸರಲ್ಲಿ ಎಂಟಿಬಿ ನಾಗರಾಜ್ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ. ಒಂದು ವೇಳೆ ಎಂಟಿಬಿ ನಾಗರಾಜು ಸ್ಪರ್ಧೆಗೆ ಅವಕಾಶ ಸಿಗದಿದ್ದರೂ ಬಿಜೆಪಿ ನಾಯಕ ಶರತ್ ಬಚ್ಚೇಗೌಡ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಲು ಸಾಧ್ಯವಾಗದಂತೆ ಕಂದಕ ನಿರ್ಮಿಸಲಾಗಿದೆ.

ನಿನ್ನೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಯಡಿಯೂರಪ್ಪ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡಲು ಆಗಮಿಸಿದ್ರು. ಹೊಸಕೋಟೆಯಲ್ಲಿ ಬಿಜೆಪಿ ನಾಯಕರು ಮಾತ್ರ ನಾಪತ್ತೆಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಸಾವಿರ ಮತಗಳ ಅಂತರಿಂದ ಸೋಲನ್ನಪ್ಪಿದ್ದ ಶರತ್ ಬಚ್ಚೇಗೌಡ, ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳದಲ್ಲಿ ಉಳಿದಿದ್ರು. ಅದೇ ರೀತಿ‌ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಕೂಡ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ಹೊಸಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷಕ್ಕೆ ಸಡ್ಡು ಹೊಡೆದು ಸ್ಪರ್ಧೆ ಮಾಡೋದು ಖಚಿತ ಎಂಬ ಸಂದೇಶವನ್ನು ಈ ಮೂಲಕ‌ ಸಾರಿದ್ರು.

ಶರತ್ ಬಚ್ಚೇಗೌಡ ಯಾರ ಸಂಪರ್ಕಕ್ಕೂ‌ ಸಿಗಲಿಲ್ಲ. ಇನ್ನು ಹಾಲಿ ಬಿಜೆಪಿ ಸಂಸದ ಬಚ್ಚೇಗೌಡ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ಮಗನ ನಿರ್ಧಾರವನ್ನು ತಂದೆಯಾಗಿ ಬೆಂಬಲಿಸಿದ್ರು. ಸಿಎಂ ಆಗಮಿಸಿದ್ರು ಬಿ.ಜೆ.ಪಿ ಕಾರ್ಯಕರ್ತರ‌ ಅಬ್ಬರ ಇರಲಿಲ್ಲ. ಶರತ್ ಬಚ್ಚೇಗೌಡಗೆ ಬಿಜೆಪಿ ಬಿ ಫಾರಂ ಕೊಟ್ಟರೆ ಮಾತ್ರ ಸಂಧಾನ. ಇಲ್ಲದಿದ್ದರೆ ಏನಿದ್ದರೂ ಅಖಾಡದಲ್ಲಿ ಯುದ್ಧ ಎಂದು ಬಚ್ಚೇಗೌಡ ಆಪ್ತ ಪರಿಷತ್ ಸದಸ್ಯ ಸಿ. ಮುನಿಶಾಮಪ್ಪ ಮೇರವಾಗಿಯೇ ಸವಾಲು ಎಂದಿದ್ದಾರೆ.

ಈ ನಡುವೆ ಎಂಟಿಬಿ ನಾಗರಾಜ್ ಬೆಂಬಲಕ್ಕೆ ನಾನಿದ್ದೇನೆ ಎಂಬುದನ್ನು ಸಿಎಂ ಯಡಿಯೂರಪ್ಪ ವೇದಿಕೆ ಮೇಲೆಯೇ ತೋರ್ಪಡಿಸಿದ್ರು. ನಿಮ್ಮ ಬೇಡಿಕೆ ಏನೇ ಇರಲಿ ನಾನು ಈಡೇರಿಸ್ತೀನಿ ಎಂದು ಬಿ.ಎಸ್ ಯಡಿಯೂರಪ್ಪ ಇನ್ನೆನಾದ್ರು ಬೇಡಿಕೆ ಇದೆಯಾ ನಾಗರಾಜ್ ಹೇಳಿ ಎಂದು‌ ಖುಷಿ ಪಡಿಸಿದ್ರು. ಇನ್ನೊಂದು ಕಡೆ ಸಚಿವ ಆರ್. ಅಶೋಕ್, ಶರತ್ ಬಚ್ಚೇಗೌಡ ಹಾಗು ಅವರ ಆಪ್ತರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ರು. ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೋ..? ಅವರ ಪರವಾಗಿ ಎಲ್ಲರೂ ಕೆಲಸ ಮಾಡಬೇಕು. ಒಂದು ವೇಳೆ ಅವರ ವಿರುದ್ಧ ನಿಂತ್ರೆ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ತೇವೆ. ಪಾರ್ಟಿಯಿಂದಲೇ ತೆಗೆದು ಹಾಕುತ್ತೇವೆ ಎಂದು ಎಚ್ಚರಿಸಿದರು.

ಆದ್ರೆ‌ ಬೇರೆ ಕ್ಷೇತ್ರಗಳಲ್ಲಿ ಸುಪ್ರೀಂಕೋರ್ಟ್ ತೀರ್ಪಿಗೆ ಕಾಯುತ್ತಿರುವ ಬಿಜೆಪಿ ನಾಯಕರು, ಶರತ್ ಬಚ್ಚೇಗೌಡ ವಿಷಯದಲ್ಲಿ ಮಾತ್ರ ಯಾಕೀ ದೃಢ ನಿರ್ಧಾರ ಅನ್ನೋದು ಬಿಜೆಪಿ ಕಾರ್ಯಕರ್ತರ ಪ್ರಶ್ನೆಯಾಗಿದೆ. ಅದಕ್ಕೆ‌ ಉತ್ತರ ಇಲ್ಲೇ ಇದೆ.

ಒಂದು ವೇಳೆ ಎಂಟಿಬಿ ನಾಗರಾಜ್ ಸ್ಪರ್ಧೆ ಮಾಡಲು ಸುಪ್ರೀಂಕೋರ್ಟ್ ಅವಕಾಶ ಕೊಡದಿದ್ದರೆ, ಬಿಜೆಪಿ ನಾಯಕರು ಶರತ್ ಬಚ್ಚೇಗೌಡಗೆ ಟಿಕೆಟ್ ಕೊಡುವಂತಿಲ್ಲ‌ ಅನ್ನೋ ಮಾತುಕತೆ ನಡೆದಿದೆ ಎನ್ನಲಾಗಿದೆ. ಒಂದು ವೇಳೆ ಈ ಬಾರಿ ಶರತ್ ಬಚ್ಚೇಗೌಡಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಬಿಟ್ಟರೆ, ಮುಂದಿನ ಬಾರಿ ಎಂಟಿಬಿ ನಾಗರಾಜ್ ಹೊಸ ಕ್ಷೇತ್ರ ಹುಡುಕಾಟ ಮಾಡಬೇಕಾಗುತ್ತದೆ. ಅದೇ ಕಾರಣದಿಂದ ಈಗಲೇ ಶರತ್ ಬಚ್ಚೇಗೌಡನನ್ನು ಪಕ್ಷದಿಂದ ಹೊರ ಹೋಗುವಂತೆ ಮಾಡಿಬಿಟ್ಟರೆ ಮುಂದಿನ ದಿನಗಳಲ್ಲಿ ಪ್ರಬಲ ಎದುರಾಳಿ ಯಾರೂ ಇಲ್ಲದಂತಾಗುತ್ತದೆ. ಈ ಬಾರಿ ಅಲ್ಲದಿದ್ದರೂ ಮುಂದಿನ ಬಾರಿಯ ಆದ್ರೂ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕ, ಸಚಿವನಾಗಬಹುದು.

ಆದ್ರೆ‌ ಶರತ್ ಬಚ್ಚೇಗೌಡ ಗೆದ್ದು ಬಿಟ್ಟರೆ, ಕ್ಷೇತ್ರವನ್ನೇ ಆವರಿಸಿಕೊಂಡು ಬಿಡ್ತಾರೆ. ಕ್ಷೇತ್ರವನ್ನು ಬಿಡಿಸೋದು ಭಾರೀ ಕಸರತ್ತು ನಡೆಸಬೇಕಾಗುತ್ತದೆ. ಹೀಗಾಗಿ ಎಂಟಿಬಿ ನಾಗರಾಜ್, ಸುಪ್ರೀಂಕೋರ್ಟ್‌ನಲ್ಲಿ ನಾನು ಸ್ಪರ್ಧೆ ಮಾಡುವಂತಿಲ್ಲ‌ ಎಂದು ತೀರ್ಪು ನೀಡಿದರೂ ತಾನು ಹೇಳುವ ವ್ಯಕ್ತಿಯನ್ನೇ ಅಭ್ಯರ್ಥಿ ಮಾಡಬೇಕು ಎಂದು ಪಟ್ಟು ಹಾಕಿದ್ದಾರಂತೆ. ಹೇಗಿದ್ದರೂ ಶರತ್‌ಗೆ ಟಿಕೆಟ್ ಕೊಡಲು‌ ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ‌ ಪಕ್ಷ ಬಿಟ್ಟರೂ ಪರವಾಗಿ ಅನ್ನುವ ಉದ್ದೇಶದಿಂದ ಹೊಸಕೋಟೆ ಅಖಾಡಕ್ಕೆ ರಂಗು ತುಂಬಿದ್ದಾರೆ ಎನ್ನಲಾಗ್ತಿದೆ.

Leave a Reply