ಆಡಿಯೋ ತನಿಖೆ ಆರಂಭವಾದ್ರೆ ಸಿಎಂ ಯಡಿಯೂರಪ್ಪಗೆ ಕಂಟಕ!

ಡಿಜಿಟಲ್ ಕನ್ನಡ ಟೀಮ್:

ಆರೇಷನ್ ಕಮಲದ ಬಗ್ಗೆ ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಪ್ರಕರಣ ಸದ್ಯ ರಾಜ್ಯ ರಾಜಕೀಯದಲ್ಲಿ ಕಾವು ಪಡೆದುಕೊಂಡಿದೆ.  ಸುಪ್ರೀಂ ಕೋರ್ಟ್ ನಲ್ಲಿ ಇದನ್ನು ಸಾಕ್ಷ್ಯವಾಗಿ ಪರಿಗಣಿಸುವುದಾಗಿ ನ್ಯಾಯ ಪೀಠ ತಿಳಿಸಿದೆಯಾದರೂ, ಅದರ ಸತ್ಯಾಸತ್ಯತೆ ಕುರಿತು ತನಿಖೆಗೆ ನಿರ್ದೇಶನ ನೀಡುವುದೇ ಎಂಬ ಕುತೂಹಲ ಮೂಡಿದೆ. ಒಂದು ವೇಳೆ ಈ ತನಿಖೆಗೆ ಆದೇಶ ನೀಡಿದರೆ ಸಿಎಂ ಯಡಿಯೂರಪ್ಪಗೆ ಸಂಕಷ್ಟ ಎದುರಾಗಲಿದೆ.

ಶಾಸಕರ ಅನರ್ಹ ಪ್ರಕರಣದ ವಿಚಾರಣೆ ಮುಕ್ತಾಯವಾಗಿದ್ದು, ಇದನ್ನು ಸಾಕ್ಷ್ಯವಾಗಿ ಪರಿಗಣಿಸುತ್ತೇವೆ ಆದರೆ ಮತ್ತೆ ವಿಚಾರಣೆ ಅಗತ್ಯವಿಲ್ಲ ಎಂದಿದೆ. ಒಂದುವೇಳೆ ನ್ಯಾಯಾಲಯ ಅನರ್ಹ ಪ್ರಕರಣಕ್ಕೆ ಹೊರತಾಗಿ ಈ ಆಡಿಯೋ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶ ನೀಡಿದರೆ ಸಿಎಂಗೆ ಅಪಾಯ ಎದುರಾಗಲಿದೆ.

ಸದ್ಯ ಆಡಿಯೋ ಸಿಡಿಯ ನೈಜತೆ ಬಗ್ಗೆ ಸೂಕ್ತ ತನಿಖೆ ನಡೆಸಿ ಕೋರ್ಟ್‌ಗೆ ವರದಿ ಸಲ್ಲಿಸಿ ಎಂದು ಸುಪ್ರೀಂ ನಿರ್ದೇಶನ ನೀಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ತನಿಖೆ ಆರಂಭವಾದರೆ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುವುದು ಬಹುತೇಕ ಖಚಿತ. ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಕಾರ್‍ಯಕರ್ತ ಹನುಮೇಗೌಡ ಎಂಬುವರು ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ಹಾಗು ಎಸಿಬಿಯಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ.

ಸುಪ್ರೀಂಕೋರ್ಟ್ ಆಡಿಯೋ ಸಿಡಿ ಬಗ್ಗೆ ತನಿಖೆ ನಡೆಸಿ ಎಂದು ಹೇಳಿದರೆ ರಾಜ್ಯಪಾಲರ ಅನುಮತಿ ಪಡೆಯಬೇಕಾಗುತ್ತದೆ. ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿರೋದ್ರಿಂದ ರಾಜ್ಯಪಾಲರು ನಿರಾಕರಿಸಲು ಸಾಧ್ಯವಿಲ್ಲ. ಆಡಿಯೋ ಸಿಡಿಯ ನೈಜತೆ ಬಗ್ಗೆ ಪೊಲೀಸ್ರು ತನಿಖೆ ಕೈಗೊಂಡು, ಅದು ಯಡಿಯೂರಪ್ಪನವರದ್ದೇ ಧ್ವನಿ ಎಂದು ಸಾಬೀತಾದ್ರೆ ಬೇರೆಲ್ಲಾ ಆಡಿಯೋಗಳು, ಆಪರೇಷನ್ ಕಮಲ ಹೇಗೆ ನಡೀತು ಅನ್ನೋ ಬಗ್ಗೆಯೂ ತನಿಖೆ ಶುರುವಾಗಲಿದೆ. ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲು ದಾರಿ ಮಾಡಿಕೊಡುತ್ತವೆ. ಆಗ ಯಡಿಯೂರಪ್ಪನವರ ಸಿಎಂ ಹುದ್ದೆಗೆ ಸಂಚಕಾರ ಎದುರಾಗುತ್ತದೆ.

ಆಗ ಬಿಜೆಪಿ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆರವು ಮಾಡಿ, ಮುಖ್ಯಮಂತ್ರಿ ಪಟ್ಟಕ್ಕೆ ಬೇರೊಬ್ಬರನ್ನು ಕೂರಿಸಲಿದೆ. ಹೀಗಾಗಿ ಸುಪ್ರೀಂಕೋರ್ಟ್ ನೀಡುವ ನಿದೇಶನ ಅಥವಾ ತೀರ್ಪಿನ ಆಧಾರದ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಭವಿಷ್ಯ ನಿಂತಿದೆ ಎಂಬ ವಿಶ್ಲೇಷಣೆ ಬರುತ್ತಿವೆ.

Leave a Reply