ರಾಜಕಾರಣದಲ್ಲಿ ಯಾರೂ ಶತ್ರುಗಳೂ ಅಲ್ಲ.. ಮಿತ್ರರೂ ಅಲ್ಲ ಅಂತಾ ಮತ್ತೆ ಸಾಬೀತು ಮಾಡ್ತಿದ್ದಾರೆ ಹೆಚ್ಡಿಕೆ- ಬಿಎಸ್ ವೈ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜೆಡಿಎಸ್ ವಿರುದ್ಧ ಸಿಎಂ ಯಡಿಯೂರಪ್ಪ ಮಾತಿನಲ್ಲೇ ಕತ್ತಿ ಮಸೆದಿದ್ರು. ಮೊದಲು ಮುಖ್ಯಮಂತ್ರಿ ಆದಾಗ ಸರ್ಕಾರ ನಡೆಸಲು ಬಿಡಲಿಲ್ಲ ಅನ್ನೋ ಕೋಪ ಯಡಿಯೂರಪ್ಪನದ್ದಾಗಿತ್ತು. ಅದೇ ರೀತಿ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಕೂಡ ಆಕ್ರೋಶಭರಿತರಾಗಿ ಮಾತನಾಡಿದ್ರು. ಇದಕ್ಕೆ ಕಾರಣ ಅಂದ್ರೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಉರುಳಿಸಿ ಅಧಿಕಾರ ಕಿತ್ತುಕೊಂಡ್ರು ಅನ್ನೋ ಕೋಪ. ಆದ್ರೆ ಇದೀಗ ಎಲ್ಲವೂ ನಿರಾಳ. ಸಿಎಂ ಯಡಿಯೂರಪ್ಪ ಹಾಗು ಜೆಡಿಎಸ್ ನಾಯಕರ ನಡುವೆ ಸ್ನೇಹದ ಚಿಗುರೊಡೆದಿದೆ. ಇದು ರಾಜಕೀಯದಲ್ಲಿ ಯಾರು ಶತ್ರಗಳಲ್ಲ ಯಾರೂ ಮಿತ್ರರಲ್ಲ… ಅಧಿಕಾರ ಇದ್ದಾಗ ಎಲ್ಲರೂ ಮಿತ್ರರು ಅಧಿಕಾರ ಇಲ್ಲದಿದ್ದಾಗ ಎಲ್ಲರೂ ಶತ್ರಗಳು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ಕಳೆದ ವರ್ಷ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ನಂತರ ವಿರೋಧ ಪಕ್ಷ ನಾಯಕನ ಸ್ಥಾನದಲ್ಲಿ ಕೂತ ಯಡಿಯೂರಪ್ಪನವರು ಜೆಡಿಎಸ್ ಅಪ್ಪ ಮಕ್ಕಳ ಪಕ್ಷ, ಅವರು ಕಾಂಗ್ರೆಸ್ ನಿರ್ಣಾಮ ಮಾಡುತ್ತಾರೆ. ಅವರ ಸಹವಾಸ ಒಳ್ಳೆಯದಲ್ಲ ಎಂದು ಉದ್ದುದ್ದ ಭಾಷಣ ಮಾಡಿದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ನಾಯಕರು ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈಗ ಜೆಡಿಎಸ್ ನಾಯಕರಲ್ಲಿ ಸಿದ್ದರಾಮಯ್ಯನವರ ಮೇಲಿನ ರಾಜಕೀಯ ದ್ವೇಷ, ಬಿಜೆಪಿಯ ಅಧಿಕಾರದ ಆಸೆ ಶತ್ರಗಳನ್ನು ಮಿತ್ರರನ್ನಾಗಿ ಪರಿವರ್ತಿಸಿದೆ.

ಉಪಚುನಾವಣೆ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇರಲ್ಲ ಅನ್ನೋ ಸಿದ್ದರಾಮಯ್ಯ ಮಾತಿಗೆ ತಿರುಗೇಟು ಕೊಟ್ಟಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯ ಸರ್ಕಾರವನ್ನು ಬೀಳಿಸಲು ಆಸ್ಪದ ಕೊಡಲ್ಲ ಎಂದಿದ್ರು. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕೂಡ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ರು. ಯಾದಗಿರಿಯ ಗುರುಮಿಠ್ಕಲ್ ಶಾಸಕ ನಾಗನಗೌಡ ಕಂದಕೂರ ಬೆಂಬಲಿಗರ ಮೇಲೆ ಪೊಲೀಸ್ರು ದರ್ಪ ಮೆರೆದಿದ್ದಾರೆ, ಕೂಡಲೇ ಕಾನೂನು ರೀತಿ ಅಮಾನತು ಮಾಡಬೇಕು ಎಂದು ಆಗ್ರಹ ಮಾಡಿದ್ರು. ಗುರುಮಿಠ್ಕಲ್‌ನಲ್ಲಿ ಶರಣಗೌಡ ಕಂದಕೂರ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೂ ಧಾವಿಸಿ ಬೆಂಬಲ ಸೂಚಿಸಿದ್ರು. ಆದ್ರೂ ಸರ್ಕಾರ ಮಾತ್ರ ಕಿಂಚಿತ್ತು ಬೆಲೆ ಕೊಟ್ಟಿರಲಿಲ್ಲ. ಆದ್ರೆ ನವೆಂಬರ್ 15ರಂದು ನಿಮ್ಮ ಮನೆ ಎದುರು ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದೇನೆ ಎಂದು ಸಿಎಂಗೆ ಪತರ ಬರೆಯುತ್ತಿದ್ದ ಹಾಗೆ ಎಲ್ಲವೂ ಕೂಲ್ ಕೂಲ್. ಕೂಡಲೇ ಎಚ್ಚೆತ್ತುಕೊಂಡಿರುವ ಸಿಎಂ ಯಡಿಯೂರಪ್ಪ, ಆರೋಪಿತ ಸಬ್ ಇನ್ಸ್‌ಪೆಕ್ಟರ್ ಬಾಪುಗೌಡ ಕೂಡಲೇ ರಜೆ ಮೇಲೆ ಹೋಗಲು ತಿಳಿಸಿದ್ದಾರೆ. ಬೇರೆ ಕಡೆಗೆ ವರ್ಗಾವಣೆಗೂ ಸೂಚನೆ ಕೊಟ್ಟಿದ್ದೇನೆ ಎಂದು ಸಿಎಂ ಹೇಳಿಕೆ ಕೊಟ್ಟಿದ್ದಾರೆ.

ದೇವೇಗೌಡರು ಮಾಜಿ ಪ್ರಧಾನಿಯಾಗಿದ್ದಾರೆ. ಅವರಿಗೆ ಯಾವುದು ತಪ್ಪು..? ಯಾವುದು ಸರಿ ಅನ್ನೋದು ಗೊತ್ತಿದೆ. ಅವರ ಪತ್ರ ತಲುಪಿದ ಕೂಡಲೇ ಕ್ರಮ ತೆಗೆದುಕೊಂಡಿದ್ದೇನೆ. ಹೆಚ್. ಡಿ ದೇವೇಗೌಡರು ಕನ್ವಿನ್ಸ್ ಆಗ್ತಾರೆ ಅಂದುಕೊಂಡಿದ್ದೇನೆ. ದೇವೇಗೌಡರು ಹೇಳಿದಂತೆ ನಾನು ಕ್ರಮ ಕೈಗೊಳ್ತೇನೆ. ಇದಕ್ಕೆ ದೇವೇಗೌಡರು ಕೂಡ ಒಪ್ಪಿಕೊಳ್ಳುವ ವಿಶ್ವಾಸ ಇದೆ ಎಂದಿದ್ದಾರೆ ಸಿಎಂ ಯಡಿಯೂರಪ್ಪ. ಇತ್ತ ಜೆಪಿ ಭವನದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ನಾಡಿನ ಮುಖ್ಯಮಂತ್ರಿ ರಾಜ್ಯದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಹಿಳೆಯರು, ಮಕ್ಕಳು ಸೇರಿದಂತೆ ಪೊಲೀಸರಿಂದ ಯಾರ ಮೇಲೂ ದೌರ್ಜನ್ಯ ಆಗದಂತೆ ತಡೆಯಬೇಕು. ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದು ನಿಜ. ವಿಷಯ ತಲುಪಿದ ಕೂಡಲೇ ಸಿಎಂ ಕ್ರಮ ತೆಗೆದುಕೊಂಡಿದ್ದಾರೆ.  ಇದು ಸಂತೋಷ ಆಗಿದೆ. ಯಡಿಯೂರಪ್ಪ ಏನು ನಮಗೆ ಶತ್ರು ಅಲ್ಲ. ಯಾವ ಸಂಧರ್ಭದಲ್ಲಿ ಏನ್ ಬೇಕಾದ್ರು ಆಗಬಹುದು. ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ. ರಾಜಕೀಯದಲ್ಲಿ ಯಾವಾಗ ಏನ್ ಬೇಕಾದ್ರು ಆಗಬಹುದು. ಯಡಿಯೂರಪ್ಪ ಆಜನ್ಮ ಶತುವಲ್ಲ. ಸಿದ್ದರಾಮಯ್ಯ ಕೂಡ ನನ್ನ ಶತ್ರುವಲ್ಲ ಎಂದಿದ್ದಾರೆ.

ಒಂದು ಕಡೆಯಿಂದ ಜೆಡಿಎಸ್ ಸ್ನೇಹ ಹಸ್ತ ಚಾಚಿದ್ರೆ, ಇನ್ನೊಂದು ಕಡೆಯಿಂದ ಸಿಎಂ ಯಡಿಯೂರಪ್ಪ ಕೂಡ ಸ್ನೇಹಹಸ್ತ ಚಾಚಿದ್ದಾರೆ. ಇಷ್ಟಕ್ಕೆಲ್ಲಾ ಏನು ಕಾರಣ ಅನ್ನೋದು ರಾಜ್ಯದ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಆದ್ರೆ ಬಿಜೆಪಿ ರಾಷ್ಟ್ರೀಯ ನಾಯಕರು ಜೆಡಿಎಸ್ ನಾಯಕರನ್ನು ಸಂಪರ್ಕ ಮಾಡಿದ್ದು, ಉಪಚುನಾವಣೆ ಫಲಿತಾಂಶ ಏನೇ ಬರಲಿ. ನೀವು ನಮ್ಮ ಜೊತೆಗೆ ನಿಲ್ಲಬೇಕು. ಅಧಿಕಾರ ಮುಕ್ತಾಯ ಮಾಡೋಣ. ಸಾಧ್ಯವಾದರೆ ನೀವು ಕೂಡ ಸರ್ಕಾರದಲ್ಲಿ ಭಾಗಿಯಾಗಿ ಎನ್ನುವ ಆಹ್ವಾನ ಕೊಟ್ಟಿದ್ದಾರೆ ಎನ್ನಲಾಗಿದೆ. ಸರ್ಕಾರದಲ್ಲಿ ಭಾಗಿಯಾಗಲು ಇಷ್ಟವಿಲ್ಲದಿದ್ರೆ ಹೊರಗಿನಿಂದ ಬೆಂಬಲ ನೀಡ ಸರ್ಕಾರದಲ್ಲಿ ಏನೇನು ಕೆಲಸಗಳು ಆಗಬೇಕೋ ಅವುಗಳನ್ನು ಮಾಡಿಕೊಡಲು ನಾವು ಸಿದ್ಧರಿದ್ದೇವೆ ಎನ್ನುವ ಆಶ್ವಾಸನೆ ಕೂಡ ಸಿಕ್ಕಿದೆ ಎನ್ನಲಾಗಿದೆ. ಇದೇ ಸಂದೇಶ ರಾಜ್ಯದ ಮುಖ್ಯಮಂತ್ರಿಗೂ ರವಾನೆಯಾಗಿದ್ದು, ಅವರೂ ಕೂಡ ಜೆಡಿಎಸ್ ಪರವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

Leave a Reply