ಚುನಾವಣೆ ಮುಂದೂಡುವಂತೆ ನಿರ್ದೇಶನ ಸಾಧ್ಯವಿಲ್ಲ! ಅನರ್ಹರಿಗೆ ಸುಪ್ರೀಂನಲ್ಲಿ ಮತ್ತೆ ಹಿನ್ನಡೆ!

ಡಿಜಿಟಲ್ ಕನ್ನಡ ಟೀಮ್:

ತಮ್ಮ ವಿರುದ್ಧ ಸ್ಪೀಕರ್ ನೀಡಿರುವ ಅನರ್ಹತೆ ತೀರ್ಪಿನ ವಿರುದ್ಧದ ಅರ್ಜಿ ಪ್ರಕರಣದ ತೀರ್ಪು ಇಂದು ಕೂಡ ಪ್ರಕಟವಾದ ಕಾರಣ ಅನರ್ಹ ಶಾಸಕರು ಕಂಗಾಲಾಗಿದ್ದಾರೆ. ಹೀಗಾಗಿ ಉಪಚುನಾವಣೆ ಮುಂದೂಡಲು ಆಯೋಗಕ್ಕೆ ಸೂಚನೆ ನೀಡಿ ಎಂಬ ಅನರ್ಹರ ಅರ್ಜಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.

ವಿಚಾರಣೆ ನ್ಯಾ.ಎನ್​.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಡೆಯುತ್ತಿದೆ. ಈಗಾಗಲೇ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ನ್ಯಾ. ಎನ್.ವಿ. ರಮಣ ನೇತೃತ್ವದ ಪೀಠದ ಕಲಾಪ ಪಟ್ಟಿಯಲ್ಲಿ ಅನರ್ಹ ಶಾಸಕರ ತೀರ್ಪು ಪ್ರಕಟಿಸುವ ಮಾಹಿತಿ ಇಲ್ಲ. ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವುದರಿಂದ ಉಪಚುನಾವಣೆಯನ್ನು ಮುಂದೂಡಿಕೆ ಮಾಡುವಂತೆ ಅನರ್ಹ ಶಾಸಕರ ಪರ ವಕೀಲ ಮುಕುಲ್​ ರೋಹ್ಟಗಿ ಸುಪ್ರೀಂ ಕೋರ್ಟ್​ ಮುಂದೆ ಮನವಿ ಸಲ್ಲಿಸಿದರು.

ಈ ಮಧ್ಯೆ, ‘ಬೇಗ ತೀರ್ಪು ಕೊಡಿ, ಆದೇಶ ಬರುವವರೆಗೂ ಚುನಾವಣೆ ಮುಂದೂಡಿ ಎನ್ನುವುದು ನಮ್ಮ ಮನವಿ’ ಎಂದು ದೆಹಲಿಯಲ್ಲಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಈ ವೇಳೆ ಅನರ್ಹ ಶಾಸಕ ಮುನಿರತ್ನ ಕೂಡ ಸಾಥ್​ ನೀಡಿದ್ದಾರೆ.

ಆದರೆ, ​ ಉಪಚುನಾವಣೆ ಮುಂದೂಡುವ ಕುರಿತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅಲ್ಲದೇ ಅನರ್ಹ ಶಾಸಕರ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್​ ಬುಧವಾರ ಸಮರ್ಪಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ.

ಈಗಾಗಲೇ ಒಮ್ಮೆ ಚುನಾವಣೆ ಮುಂದೂಡಲಾಗಿದೆ. ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆ ಜತೆಗೆ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸಲು ಆಯೋಗ ನಿರ್ಧರಿಸಿತ್ತು, ಅನರ್ಹರ ಶಾಸಕರ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಚುನಾವಣೆ ಮುಂದೂಡಲು ತಿಳಿಸಿತ್ತು. ಹೀಗಾಗಿ ಆಯೋಗ ಡಿಸೆಂಬರ್​ 5ರಂದು ದಿನಾಂಕ ನಿಗದಿ ಮಾಡಲಾಗಿದೆ. ಸೋಮವಾರದಿಂದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ನೀತಿ ಸಂಹಿತೆ ಕೂಡ ಜಾರಿಯಾಗಲಿದೆ.

Leave a Reply