3ಡಿ ತಂತ್ರಜ್ಞಾನ ಕಲಿಕೆಯತ್ತ ಬಿಜಿಎಸ್ ‘ಮೆಡ್ ವೇದ’ ಹೊಸ ಅಧ್ಯಾಯ!

ಡಿಜಿಟಲ್ ಕನ್ನಡ ಟೀಮ್:

ಕಲಿಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಬಿಜಿಎಸ್ ವೈದ್ಯಕೀಯ ವಿಜ್ಞಾನ ಸಂಸ್ಥೆ (BGS-GIMS) ಇತರೆ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು, 3ಡಿ ತಂತ್ರಜ್ಞಾನದ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಮುಂದಾಗಿದೆ.

‘ಮೆಡ್ ವೇದ’ ಎಂಬ ಪರಿಕಲ್ಪನೆಯೊಂದಿಗೆ ಬಿಜಿಎಸ್ ಸಂಸ್ಥೆ 3ಡಿ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಆದಿಚುಂಚನಗಿರಿ ಮಠದ ಮಹಾಪೀಠಾಧಿಪತಿಗಳಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿ ಅವರು ಶನಿವಾರ ಈ ನೂತನ ಕಲಿಕಾ ವ್ಯವಸ್ಥೆಯನ್ನು ಅನಾವರಣ ಮಾಡಿದರು.

ಮಾನವ ದೇಹದ ಅಂಗಾಗಗಳು ಅವುಗಳ ಸಮಸ್ಯೆ ಹಾಗೂ ಅವುಗಳ ಪರಿಹಾರದ ಬಗ್ಗೆ 3ಡಿ ಚಿತ್ರಗಳ ಬಳಕೆಯೊಂದಿಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ. ಈ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಅಳವಡಿಸಿಕೊಂಡ ಮೊದಲ ವೈದ್ಯಕೀಯ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಿಜಿಎಸ್ ಪಾತ್ರವಾಗಿದೆ.

ತಂತ್ರಜ್ಞಾನ ಉದ್ಘಾಟಿಸಿ ಮಾತನಾಡಿದ ಶ್ರೀಗಳು ಹೇಳಿದ್ದಿಷ್ಟು…

‘ಹಿಂದಿನ ಕಾಲದಲ್ಲಿ ಶ್ರುತಿ ಹಾಗೂ ಸ್ಮೃತಿ ಎಂಬ ಹಂತಗಳಲ್ಲಿ ಕಲಿಕೆ ನಡೆಯುತ್ತಿತ್ತು. ಗುರುಗಳು ಹೇಳಿದ್ದನ್ನು ಕೇಳಿಸಿಕೊಂಡು ಶಿಷ್ಯರು ಕಲಿಯುತ್ತಿದ್ದರು. ಆ ಶಿಷ್ಯರು ತಮ್ಮ ಶಿಷ್ಯರಿಗೆ ಹೇಳಿದ್ದನ್ನು ಕೇಳಿ ಕಲಿಯುತ್ತಿದ್ದರು. ಇಲ್ಲಿ ಕೇಳುವುದು ಶ್ರುತಿ, ತಲೆಯಲ್ಲಿ ನೆನಪಲ್ಲಿ ಇಟ್ಟುಕೊಳ್ಳುವುದು ಸ್ಮೃತಿ. ಹೀಗೆ ಸಾವಿರಾರು ವರ್ಷಗಳ ಕಾಲ ಕಲಿಕೆ ಸಾಗುತ್ತಾ ಬಂದಿತು. ನಂತರ ಕಾಲ ಕ್ರಮೇಣ ಕಲಿತದ್ದನ್ನು ದಾಖಲಿಸಿಕೊಳ್ಳುವ ಪದ್ಧತಿ ಬಂದಿತು.

ನಂತರ ಮರಳಿನ ಮೇಲೆ ಬರೆದು ಕಲಿತರೆ, ಆನಂತರ ಬೋರ್ಡ್, ಪುಸ್ತಕ ಇತ್ಯಾದಿ ಕಲಿಕಾ ವಿಧಾನ ಕಂಡುಕೊಳ್ಳಲಾಯಿತು.

ಈಗ ಬಿಜಿಎಸ್ ಸಂಸ್ಥೆ 3ಡಿ ತಂತ್ರಜ್ಞಾನ ಅಳವಡಿಸಿಕೊಂಡಿರೋದು ಅತ್ಯುತ್ತಮ ಬೆಳವಣಿಗೆ. ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯುವುದಕ್ಕಿಂತ ಪರಿಣಾಮಯಾಗಿ ಈ ವಿಧಾನದಲ್ಲಿ ಕಲಿಯಬಹುದು.

ಇದು ಕ್ಲೌಡ್ ನಂತಹ ತಂತ್ರಜ್ಞಾನದಲ್ಲಿ ದಾಖಲಾಗುವುದರಿಂದ ವಿದ್ಯಾರ್ಥಿಗಳು ಯಾವಾಗ ಬೇಕಾದರೂ ತಮಗೆ ಆಸಕ್ತಿ ಇದ್ದಾಗ ಲಾಗ್ ಇನ್ ಆಗಿ ಕಲಿಯಬಹುದು.

ನಾವು ಇಂತಹ ಶ್ರೇಷ್ಠ ವಿಧಾನಗಳನ್ನು ಅಳವಡಿದಿಕೊಳ್ಳಬೇಕು, ಅದನ್ನು ಸ್ವೀಕರಿಸಬೇಕು. ಆಗ ನಾವು ಬೆಳವಣಿಗೆ ಕಾಣಲು ಸಾಧ್ಯ. ಬಿಜಿಎಸ್ ಶಿಕ್ಷಣ ಇಂತಹ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡಿರುವ ಮೊದಲ ಸಂಸ್ಥೆಯಾಗಿರುವುದು ವಿಶೇಷ.

ಸುಪ್ರೀಂ ಕೋರ್ಟ್ ತೀರ್ಪು ಒಪ್ಪಬೇಕು!

ಇನ್ನು ಅಯೋಧ್ಯೆ ವಿಚಾರವಾಗಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ‘ಸುದೀರ್ಘ ವರ್ಷಗಳ ವಿವಾದಕ್ಕೆ, ಅಶಾಂತಿಗೆ, ಸಂಘರ್ಷಕ್ಕೆ ಇಂದು ಸುಪ್ರೀಂ ತೀರ್ಪು ಅಂತ್ಯವಾಡಿದೆ. ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಸಮಾಜ ಶಾಂತಿ, ಸೌಹಾರ್ದತೆ, ಸಾಮರಸ್ಯ ಜೀವನಕ್ಕೆ ಹೊಂದಿಕೊಳ್ಳುತ್ತಿದೆ. ಹೀಗಾಗಿ ಇಂದು ಈ ತೀರ್ಪು ಬಂದಿದೆ. ಇದನ್ನು ಎಲ್ಲರೂ ಶಾಂತ ರೀತಿಯಲ್ಲಿ ಒಪ್ಪಿ ತಲೆಬಾಗಬೇಕು’ ಎಂದರು.

Leave a Reply