ಸರ್ಕಾರ ರಚನೆಗೆ ‘ಮಹಾ’ ಸರ್ಕಸ್! ಬಿಜೆಪಿ ದಾಳಕ್ಕೆ ಶಿವ ಸೇನಾ ಪಾರಾಗುತ್ತಾ?

ಡಿಜಿಟಲ್ ಕನ್ನಡ ಟೀಮ್:

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಹೆಚ್ಚು ಕಮ್ಮಿ ಮೂರು ವಾರಗಳು ಪೂರ್ಣಗೊಳ್ಳುತ್ತಿದೆ. ಆದರೂ ಸರ್ಕಾರ ರಚನೆ ಆಗುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಬದಲಿಗೆ ರಾಜಕೀಯ ಪಕ್ಷಗಳ ನಡುವೆ ಚೌಕಾಸಿ ಆಟ ಬಲು ಜೋರಾಗಿ ನಡೆಯುತ್ತಿದೆ.

ಅದರ ಮುಂದುವರಿದ ಭಾಗವಾಗಿ ಇಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು ಶಿವ ಸೇನಾ ನಾಯಕರನ್ನು ಭೇಟಿ ಮಾಡಿದ್ದಾರೆ. ಇತ್ತ ಬಿಜೆಪಿ ಎರಡನೇ ಹಂತದ ಕಾರ್ಯಕಾರಿ ಸಮಿತಿ ಸಂಜೆ ಸಭೆ ನಡೆಸಲಿದೆ.

ಶಿವ ಸೇನಾ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಈ ಮೈತ್ರಿಗೆ ಸರಳ ಬಹುಮತ ಬಂದಿದೆ. ಆದರೆ ಕಾಂಗ್ರೆಸ್ ಹಾಗೂ ಎನ್ಸಿಪಿ ಶಿವ ಸೇನಾಗೆ ಮುಖ್ಯಮಂತ್ರಿ ಪಟ್ಟದ ಆಮೀಷ ಒಡ್ಡುವ ಮೂಲಕ ಮೈತ್ರಿ ಮಧ್ಯೆ ಹುಳಿ ಹಿಂಡಿತು. ಬಿಜೆಪಿ ನೆರಳಲ್ಲಿ ಸರ್ಕಾರ ಮಾಡುವ ಬದಲು ತಮ್ಮ ಪಕ್ಷದವರೆ ಸಿಎಂ ಆದರೆ ಹೇಗೆ ಎಂಬ ಲೆಕ್ಕಾಚಾರ ಶಿವ ಸೇನಾ ಮೈತ್ರಿ ಧರ್ಮ ಮರೆಯುವಂತೆ ಮಾಡಿತು. ಈ ಎಲ್ಲದರ ಪರಿಣಾಮವಾಗಿ ಯಾರು ಯಾರ ಜತೆ ಸೇರಿ ಸರ್ಕಾರ ನಡೆಸಬೇಕು ಎಂಬುದರ ಸ್ಪಷ್ಟತೆ ದೊರೆಯದೆ ದೊಡ್ಡ ಕಗ್ಗಂಟಾಗಿದೆ.

ಈ ಮಧ್ಯೆ ರಾಜ್ಯಪಾಲರು ಮೊದಲು ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದರು. ಆದರೆ ಅದನ್ನು ನಿರಾಕರಿಸುವ ಮೂಲಕ ಚೆಂಡನ್ನು ಶಿವ ಸೇನಾ ಅಂಗಳಕ್ಕೆ ಹಾಕಿದೆ.

ಹಿಂದುತ್ವದ ಸಿದ್ಧಾಂತ, ಎನ್ಡಿಎ ಮೈತ್ರಿಕೂಟ ಭಾಗವಾಗಿರುವ ಶಿವ ಸೇನಾ ಕೇವಲ ಸಿಎಂ ಕುರ್ಚಿಗಾಗಿ ಸಿದ್ಧಾಂತ ಪಕ್ಕಕ್ಕಿಟ್ಟು ಕಾಂಗ್ರೆಸ್ ಹಾಗೂ ಎನ್ ಸಿಪಿ ಜತೆ ಕೈ ಜೋಡಿಸುವುದೇ ಎಂಬ ಸವಾಲು ಎಸೆದಿದೆ. ಒಂದು ವೇಳೆ ಎನ್ಸಿಪಿ ಜತೆ ಸರ್ಕಾರ ಮಾಡಿದರೆ ಶಿವ ಸೇನಾ ಸಿದ್ಧಾಂತಕ್ಕೆ ವಿರುದ್ಧ ನಡೆದಂತೆ. ಇದು ಪಕ್ಷದ ಕೆಲ ನಾಯಕರಿಗೆ ಇಷ್ಟವಿಲ್ಲ. ಇದರಿಂದ ಪಕ್ಷದಲ್ಲಿ ಬಿರುಕು ಉಂಟಾದರೆ ಅದರ ಲಾಭ ಪಡೆಯಲು ಬಿಜೆಪಿ ದಾಳ ಉರುಳಿಸಿದೆ.

ಒಂದು ವೇಳೆ ಶಿವ ಸೇನಾ ಬಿಜೆಪಿ ಬಳಿ ಬಂದು ಸರ್ಕಾರ ಮಾಡಲು ಕೇಳಿದರೆ ಅತಿ ದೊಡ್ಡ ಪಕ್ಷವಾಗಿರುವ ಕಾರಣ ಹೇಳಿ 50-50 ಬದಲು 3/1 ಅಧಿಕಾರ ಹಂಚಿಕೆ ಹಾಗೂ ಸಿಎಂ ಕುರ್ಚಿ ಬೇಕು ಎಂಬ ಪಟ್ಟು ಹಿಡಿಯಲಿದೆ.

ಇವೆರಡು ಆಗದಿದ್ದರೆ, ರಾಷ್ಟ್ರಪತಿ ಆಳ್ವಿಕೆ ಹೇರುವುದು ಬಿಜೆಪಿ ಪ್ಲಾನ್!

Leave a Reply