ಮೈತ್ರಿಧರ್ಮ ಮರೆತು ಕೈಯಲ್ಲಿದ್ದ ಅಧಿಕಾರ ಕಳೆದುಕೊಂಡ ಶಿವಸೇನೆ!

ಡಿಜಿಟಲ್ ಕನ್ನಡ ಟೀಮ್:

ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕು ಎಂಬ ಉದ್ದೇಶದಿಂದ ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ ಈಗ ಮೈತ್ರಿಧರ್ಮ ಮರೆತು ಕೈಯಲ್ಲಿದ್ದ ಅಲ್ಪ ಅಧಿಕಾರವನ್ನು ಕಳೆದುಕೊಂಡು ಕಂಗಾಲಾಗಿದೆ.

ಸುದೀರ್ಘ ಮೂರು ವಾರಗಳ ಕಾಲ ಸರ್ಕಾರ ರಚನೆಗೆ ಕಾದ ರಾಜ್ಯಪಾಲರು ಇಂದು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ. ಅತ್ತ ಕೇಂದ್ರ ಸಚಿವ ಸಂಪುಟ ಇದಕ್ಕೆ ಒಪ್ಪಿಗೆ ನೀಡಿದೆ. ಇದರ ಬೆನ್ನಲ್ಲೇ ಶಿವಸೇನೆ ರಾಜ್ಯಪಾಲರ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಅದರೊಂದಿಗೆ ಮಹಾ ಸರ್ಕಸ್ ಹೊಸ ತಿರುವು ಪಡೆದುಕೊಂಡಿದೆ.

ರಾಜ್ಯಪಾಲರು ಸರ್ಕಾರ ರಚಿಸಲು ಬಿಜೆಪಿಗೆ ಎರಡು ದಿನ ಕಾಲಾವಕಾಶ ನೀಡಿದ್ದರು. ಆದ್ರೆ ನಮಗೆ ಕೇವಲ ಒಂದೇ ದಿನ ಕಾಲಾವಕಾಶ ನೀಡಿ ತರಾತುರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಶಿವಸೇನೆ, ಯಾವುದೇ ಕಾರಣಕ್ಕೂ ರಾಷ್ಟ್ರಪತಿ ಆಡಳಿತ ಜಾರಿಗೆ ಮುಂದಾದಬಾರದು. ಕಾನೂನು ರೀತ್ಯ ನಮಗೆ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಿಲ್ಲ ಎಂದು ಆರೋಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸರ್ಕಾರ ರಚನೆ ಮಾಡಲು ಬಿಜೆಪಿಗೆ ಎರಡು ದಿನಗಳೋ ಅವಕಾಶ ಕೊಟ್ಟಿದ್ದ ರಾಜ್ಯಪಾಲರು, ನಮಗೆ ಕೇವಲ ಒಂದು ದಿನ ಅವಕಾಶ ಕಲ್ಪಿಸಿದ್ದರು, ನಾವು ಮತ್ತೆ ೨ ದಿನದ ಅವಕಾಶ ಕೋರಿದರೂ ನಮ್ಮ ಮನವಿಯನ್ನು ರಾಜ್ಯಪಾಲರು ಗಣನೆಗೆ ತೆಗೆದುಕೊಳ್ಳದೆ ರಾಷ್ಟ್ರಪತಿ ಆಡಳಿತ ಶಿಫಾರಸು ಮಾಡಿದ್ದಾರೆ ಎಂದು ದೂರಿದೆ.

ಶಿವಸೇನೆಯನ್ನು ಶತ್ರುವಾಗಿ ಕಂಡಿದ್ದ ಕಾಂಗ್ರೆಸ್, ಶಿವಸೇನೆಯನ್ನು ಬೆಂಬಲಿಸುವ ವಿಚಾರದಲ್ಲಿ ಹಿಂದೆ ಮುಂದೆ ನೋಡುತ್ತಿದೆ. ಎನ್‌ಸಿಪಿ ನಾಯಕರ ಜೊತೆ ಸಭೆ ಮೇಲೆ ಸಭೆ ನಡೆಸುತ್ತಿದೆ. ನಿನ್ನೆಯಿಂದಲೂ ದೆಹಲಿಯ ಸೋನಿಯಾ ನಿವಾಸದಲ್ಲಿ ಸಭೆ ಸೇರಿದ ಹಿರಿಯ ನಾಯಕರು, ಇಂದೂ ಕೂಡ ಮಹತ್ವದ ಸಭೆ ನಡೆಸಿದ್ರು. ಆ ಬಳಿಕ ಮಹಾರಾಷ್ಟ್ರ ಕಾಂಗ್ರೆಸ್‌ನ ಚುನಾವಣಾ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ರಾಜಕೀಯ ಕಾರ್‍ಯದರ್ಶಿ ಅಹ್ಮದ್ ಪಟೇಲ್ ಸೇರಿದಂತೆ ಕಾಂಗ್ರೆಸ್ ನಿಯೋಗ ಮುಂಬೈಗೆ ಬಂದಿಳಿದಿದ್ದು, ಸಂಜೆ ೫ ಗಂಟೆಗೆ ಎನ್‌ಸಿಪಿ ನಾಯಕರ ಜೊತೆಗೆ ಸಭೆ ನಿಗದಿ ಮಾಡಿದೆ. ಈ ನಡುವೆ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡಿದ್ದು, ಕೇಂದ್ರ ಸರ್ಕಾರ ಕೂಡ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿ ಕೊಟ್ಟಿದೆ ಅನ್ನೋದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಆತುರದ ನಿರ್ಧಾರ ಕೈಗೊಂಡಿದ್ದು ಯಾಕೆ ಅನ್ನೋ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ನಾಳೆ ೧೧ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲು ಬ್ರೆಜಿಲ್‌ಗೆ ತೆರಳಿದ್ದು, ಅದಕ್ಕೂ ಮೊದಲು ರಾಜ್ಯಪಾಲರ ಶಿಫಾರಸ್ಸಿಗೆ ಒಪ್ಪಿಗೆ ಕೊಡಬೇಕಿತ್ತು ಅನ್ನೋ ಕಾರಣಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿ ಒಪ್ಪಿಗೆ ಕೊಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ. ರಾಜ್ಯಪಾಲರು ಕೇಂದ್ರ ಗೃಹ ಇಲಾಖೆಗೆ ಸಂವಿಧಾನದ ಆರ್ಟಿಕಲ್ ೩೫೬ ಉದ್ದೇಶ ಪಾಲನೆ ಆಗ್ತಿಲ್ಲ ಅನ್ನೋ ಕಾರಣಕ್ಕೆ ಕೇಂದ್ರಕ್ಕೆ ವರದಿ ಕಳುಹಿಸಿದ್ದಾರೆ.ನಿ ಭಾರತದಿಂದ ವಿದೇಶ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಮುಂದಿನ ಮೂರ್‍ನಾಲ್ಕು ದಿನಗಳಿಗೆ ಮುಂದೂಡಿಕೆ ಆಗಬಾರದು ಎಂದು ತುರ್ತು ಸಭೆ ನಡೆಸಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ. ರಾಷ್ಟ್ರಪತಿಗಳು ಅಂಕಿತ ಹಾಕಿದ್ರೆ ಮಹರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಲಿದೆ.

ಚುನಾವಣಾ ಪೂರ್ವ ಮೈತ್ರಿವೇಳೆ ಸೀಟು ಹಂಚಿಕೆ ಮೂಲಕ 3:1 ಸೂತ್ರಕ್ಕೆ ಶಿವಸೇನೆ ಒಪ್ಪಿಕೊಂಡಿತ್ತು. ಆದ್ರೆ ಫಲಿತಾಂಶದಲ್ಲಿ ಮೈತ್ರಿಗೆ ಸರಳ ಬಹುಮತ ಬಂದಾಗ ಎನ್ ಸಿಪಿ ನಾಯಕ ಶರದ್ ಪವಾರ್ ಶಿವಸೇನೆ ನಮ್ಮ ಜತೆ ಬಂದರೆ ಸಿಎಂ ಸ್ಥಾನ ಕೊಡುವುದಾಗಿ ಬಿಸ್ಕೆಟ್ ಎಸೆದರು.

ಅದರ ಆಸೆಗೆ ಮೈತ್ರಿಧರ್ಮ ಮರೆತು ಬಿಜೆಪಿ ಜತೆ ಚೌಕಾಸಿಗೆ ಇಳಿದ ಶಿವಸೇನೆ ಪಟ್ಟು ಹಿಡಿಯಿತು. ಬಿಜೆಪಿ ಒಪ್ಪದ್ದಿದ್ದಾಗ ಎನ್ ಸಿಪಿ ಹಾಗೂ ಕಾಂಗ್ರೆಸ್ ಜತೆ ಮಾತುಕತೆಗೆ ಮುಂದಾಯಿತು. ಅತಿಯಾದ ಆಸೆ ಹಿಂದೆ ಬಿದ್ದ ಶಿವಸೇನೆಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ ಬಿಜೆಪಿ, ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ ತಿರಸ್ಕರಿಸಿತು.

ಅತ್ತ ಬಿಜೆಪಿ ನಂಬಿಕೆ ಉಳಿಸಿಕೊಳ್ಳದೆ, ಇತ್ತ ಸಿದ್ಧಾಂತ ಪಕ್ಕಕ್ಕಿಟ್ಟು ಕಾಂಗ್ರೆಸ್-ಎನ್ ಸಿಪಿ ಜತೆ ಕೈಜೋಡಿಸಲು ಸಾಧ್ಯವಾಗದ ಶಿವಸೇನೆಗೆ ತೀವ್ರ ನಿರಾಸೆ ಆಗಿದೆ. ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿಯಂತೆ ಅಧಿಕಾರ ಹಂಚಿಕೊಂಡಿದ್ದಾರೆ ಇಷ್ಟು ಹೊತ್ತಿಗೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರ್ಕಾರ ರಚನೆ ಆಗಿ ಸಚಿವ ಸಂಪುಟ ಪೂರ್ಣಗೊಂಡು ಆಡಳಿತ ನಡೆಸಬಹುದಿತ್ತು. ಆದರೆ ಸಿಎಂ ಕುರ್ಚಿಗೆ ಆಸೆ ಪಟ್ಟು ಸಿಗುತ್ತಿದ್ದ ಅಧಿಕಾರವನ್ನು ನೆಲಕ್ಕೆ ಹಾಕಿದೆ.

Leave a Reply