ರಾಜಕೀಯ ಚಾಣಕ್ಯ ದೇವೇಗೌಡರಿಗೆ ದಾಳ ಉರುಳಿಸಿದ ಶಿಷ್ಯ..!

ಡಿಜಿಟಲ್ ಕನ್ನಡ ಟೀಮ್:

ರಾಜಕೀಯ ಚದುರಂಗದಾಟದಲ್ಲಿ ದೇವೇಗೌಡರು ಮಾಸ್ಟರ್! ಅವರು ಯಾವಾಗ ಯಾವ ದಾಳ ಉರುಳಿಸುತ್ತಾರೆ, ಯಾವ ತಂತ್ರ ಎಣೆಯುತ್ತಾರೆ ಎಂಬುದನ್ನು ಊಹಿಸುವುದೂ ಕಷ್ಟ. ಆದರೆ ಅವರ ಶಿಷ್ಯ ಗೋಪಾಲಯ್ಯ ಈಗ ದೇವೇಗೌಡರಿಗೆ ಚೆಕ್ ಮೇಟ್ ಕೊಟ್ಟಿದ್ದಾರೆ.

ಉಪಚುನಾವಣೆಯಲ್ಲಿ ಗೋಪಾಲಯ್ಯ ವಿರುದ್ಧ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದ ಜೆಡಿಎಸ್ ಕಾರ್ಯಾಧ್ಯಕ್ಷ ಆರ್.ವಿ.ಹರೀಶ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಆರ್.ವಿ.ಹರೀಶ್, ‘ಜೆಡಿಎಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ, ಕೆಲವರು ಪಕ್ಷವನ್ನು ಕುಟುಂಬದ ಆಸ್ತಿಯಂತೆ ಬಳಕೆ ಮಾಡಿಕೊಳ್ತಿದ್ದಾರೆ. ಕುಟುಂಬ ರಾಜಕಾರಣ ಅತಿಯಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಆಗ್ತಿದ್ದು, ಹಣವಂತರಿಗೆ ಮಣೆ ಹಾಕಲಾಗುತ್ತಿದೆ. ಹೀಗಾಗಿ ನಾನು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಆರ್.ವಿ.ಹರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ನಲ್ಲಿ ಆರ್.ವಿ ಹರೀಶ್ ಜೊತೆಗೆ ಪಾಲಿಕೆ ಸದಸ್ಯ ಭದ್ರೇಗೌಡ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹರೀಶ್‌ಗೆ ಟಿಕೆಟ್ ನೀಡದೆ ಇರಲು ಜೆಡಿಎಸ್ ನಾಯಕರು ನಿರ್ಧಾರಕ್ಕೆ ಬಂದಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿದೆ. ಒಂದು ವೇಳೆ ಆರ್.ವಿ ಹರೀಶ್‌ಗೆ ಟಿಕೆಟ್ ಕೊಟ್ಟಿದ್ದರೂ ಚುನಾವಣಾ ಪ್ರಕ್ರಿಯೆ ಅಂತ್ಯವಾದ ಬಳಿಕ ಚುನಾವಣಾ ಅಖಾಡದಿಂದ ದೂರ ಉಳಿಯುವ ಯೋಜನೆ ಸಿದ್ಧವಾಗಿತ್ತು. ಜೆಡಿಎಸ್‌ನಿಂದ ಸ್ಪರ್ಧಿಸಿದ ಬಳಿಕ ಚುನಾವಣಾ ಕಣದಿಂದ ಹಿಂದೆ ಸರಿದು ಗೋಪಾಲಯ್ಯ ಗೆಲುವಿಗೆ ಸಹಕಾರ ನೀಡಲು ಸಿದ್ಧತೆ ನಡೆಸಿದ್ರು ಅನ್ನೋ ಮಾತುಗಳಿವೆ. ಹರೀಶ್ ಹೀಗೆ ಮಾಡ್ತಾರೆ ಅನ್ನೋ ಕಾರಣದಿಂದಲೇ ಹರೀಶ್‌ಗೆ ಟಿಕೆಟ್ ನೀಡದೆ ಭದ್ರೇಗೌಡರಿಗೆ ಟಿಕೆಟ್ ನೀಡುವ ಮನಸ್ಸು ಮಾಡಿದ್ದರು ಎನ್ನಲಾಗಿದೆ.

ಡಿಕೆಶಿ ಹಾಗು ಹೆಚ್‌ಡಿ ಕುಮಾರಸ್ವಾಮಿ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಗೆಲ್ಲಿಸಲು ಮಾಡಿದ ತಂತ್ರಗಾರಿಕೆಯೇ ಮಹಾಲಕ್ಷ್ಮೀ ಲೇಔಟ್‌ನಲ್ಲಿ ರೂಪುಗೊಂಡಿತ್ತು. ಬಿಜೆಪಿ ಅಭ್ಯರ್ಥಿಯೇ ಇಲ್ಲದಂತೆ ಏಕಪಕ್ಷಿಯವಾಗಿ ಅನಿತಾ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಲಾಯ್ತು. ಇದೇ ರೀತಿ ಎದುರಾಳಿಯಾಗಿ ಹರೀಶ್ ನಿಲ್ಲುವಂತೆ ಮಾಡಿ ಕೊನೆ ಹಂತದಲ್ಲಿ ಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದ ಯೋಜನೆ ಫ್ಲಾಪ್ ಆಗ್ತಿದ್ದ ಹಾಗೆ ಗೋಪಾಲಯ್ಯ ನೇರವಾಗಿ ದಾಳ ಉರುಳಿಸಿದ್ದಾರೆ.

Leave a Reply