ಅನರ್ಹತೆ ಸರಿ! ಆದ್ರೂ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು: ಸುಪ್ರೀಂ ತೀರ್ಪು

ಡಿಜಿಟಲ್ ಕನ್ನಡ ಟೀಮ್:

17 ಅನರ್ಹ ಶಾಸಕರ ಅನರ್ಹತೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ಅನರ್ಹತೆ ನಿರ್ಧಾರ ಸರಿಯಾಗಿದೆ ಎಂದ ಸುಪ್ರೀಂ ಕೋರ್ಟ್, ಅನರ್ಹರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.

ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಸುಪ್ರೀಂ ಕೋರ್ಟ್ ಪೀಠ, ‘ಪ್ರಜಾಪ್ರಭುತ್ವದಲ್ಲಿ ಕುದುರೆ ವ್ಯಾಪಾರ ಸರಿ ಅಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಅಭಿಪ್ರಾಯ ಪಟ್ಟಿದೆ. ಈ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್ ಎರಡೂ ಕಡೆಯವರಿಗೂ ಸಮತೋಲಿತ ತೀರ್ಪು ನೀಡಿದೆ.

ಇನ್ನು ಅನರ್ಹ ಶಾಸಕರ ವಿರುದ್ಧ ನೈತಿಕತೆಯ ಪ್ರಶ್ನೆ ಹಾಕಿದ ನ್ಯಾಯಾಧೀಶರು, ನೀವು ಸ್ಪೀಕರ್ ತೀರ್ಪು ವಿರುದ್ಧ ಹೈಕೋರ್ಟ್ ಗೆ ಏಕೆ ಹೋಗಲಿಲ್ಲ ಎಂದು ಚಾಟಿ ಬೀಸಿದರು.

ಇನ್ನು ಉಪಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಅನರ್ಹರಿಗೆ ಸಿಹಿ ಸುದ್ದಿ ಕೊಟ್ಟ ಸುಪ್ರೀಂ ಕೋರ್ಟ್, ‘ಶಾಸಕರನ್ನು ಅನರ್ಹತೆ ಮಾಡಿದ್ದು ಸರಿ. ಆದರೆ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ನಿಷೇಧ ಹೇರುವುದು ಸರಿಯಲ್ಲ. ಯಾವುದೇ ಅನರ್ಹ ಶಾಸಕರು ಮಂತ್ರಿಯಾಗಿ ಉಪಚುನಾವಣೆ ಎದುರಿಸಲು ಸಾಧ್ಯವಿಲ್ಲ. ಹೀಗಾಗಿ ಅವರು ಉಪಚುನಾವಣೆಯಲ್ಲಿ ಗೆದ್ದು, ನಂತರ ಮಂತ್ರಿಯಾಗಬಹುದು’ ಎಂದು ಆದೇಶ ನೀಡಿದೆ.

ಅನರ್ಹತೆ ರದ್ದು ಮಾಡಬೇಕು, ಮತ್ತೆ ಈ ಪ್ರಕರಣ ಕರ್ನಾಟಕ ವಿಧಾನಸಭೆ ಸ್ಪೀಕರ್ ವ್ಯಾಪ್ತಿಗೆ ಹೋಗಬೇಕು ಎಂಬ ಅನರ್ಹರ ನಿರೀಕ್ಷೆ ಹುಸಿಯಾಗಿದೆ. ಈ ಆದೇಶದಿಂದ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ನಂತರ ಚುನಾವಣೆಯಲ್ಲಿ ಸ್ಪರ್ಧಿಸಬೇಕು, ಆಗ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಉಲ್ಟಾ ಆಗಿದೆ.

Leave a Reply