ಡಿಜಿಟಲ್ ಕನ್ನಡ ಟೀಮ್:
ವಿಧಾನಸಭಾ ಉಪಚುನಾವಣೆಗೂ ಮುನ್ನ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಹೊರಬಿದ್ದಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 14 ಸ್ಥಾನಗಳನ್ನು ಗಳಿಸಿ ಅಧಿಕಾರ ಕಳೆದುಕೊಂಡಿದ್ರೆ, ಬಿಜೆಪಿ 44 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರದ ಗದ್ದು ಏರಿದೆ. ಜೆಡಿಎಸ್ ಖಾತೆ ತೆರೆಯಲು ವಿಫಲವಾದ್ರೆ ಪಕ್ಷೇತರ 2 ವಾರ್ಡ್ಗಳಲ್ಲಿ ಗೆಲುವಿನ ನೆಗೆ ಬೀರಿದ್ದಾರೆ.
ಇನ್ನು ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17 ಸ್ಥಾನಕ್ಕೆ ತೃಪ್ತಪಟ್ರೆ, ಕಾಂಗ್ರೆಸ್ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಗದ್ದುಗೆಯ ಸನಿಹಕ್ಕೆ ಬಂದಿದೆ. ಜೆಡಿಎಸ್ 01 ಹಾಗು ಪಕ್ಷೇತರರು 05 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಇನ್ನು ನಗರಸಭೆ ಫಲಿತಾಂಶದಲ್ಲಿ ಅತಂತ್ರ ಫಲಿತಾಂಶ ಕೇಕೆ ಹಾಕಿದೆ. ಕನಕಪುರ ನಗರಸಭೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಒಂದು ಸ್ಥಾನದಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ರೆ, ಕಾಂಗ್ರೆಸ್ 7 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ಸೇರಿ ಒಟ್ಟು 26 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರ ಹಿಡಿದಿದೆ. ಇನ್ನು ಜೆಡಿಎಸ್ 4 ಸ್ಥಾನ ಗೆಲುವು ಸಾಧಿಸಿದ್ದಾರೆ.
ಕೋಲಾರ ನಗರಸಭೆಯಲ್ಲಿ ಬಿಜೆಪಿ 3 ಸ್ಥಾನ, ಕಾಂಗ್ರೆಸ್ 12 ಹಾಗು ಜೆಡಿಎಸ್ 8 ಸ್ಥಾನದಲ್ಲಿ ಗೆಲುವು ಸಾಧಿಸಿದ್ರೆ, ಪಕ್ಷೇತರರು 12 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅತಂತ್ರ ಪರಿಸ್ಥಿತಿ ಎದುರಾಗಿದೆ. ಮುಳಬಾಗಿಲು ನಗರಸಭೆಯಲ್ಲೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಜೆಪಿ 2, ಜೆಡಿಎಸ್ 10, ಕಾಂಗ್ರೆಸ್ 7, ಪಕ್ಷೇತರರು 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಕೆಜಿಎಫ್ ನಗರಸಭೆಯಲ್ಲಿ ಬಿಜೆಪಿ 3, ಕಾಂಗ್ರೆಸ್ 7, ಜೆಡಿಎಸ್ 10 ಹಾಗು ಪಕ್ಷೇತರರು 12 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದು, ಯಾರಿಗೂ ಒಮ್ಮತದ ಅಧಿಕಾರ ಸಿಕ್ಕಿಲ್ಲ. ಗೌರಿಬಿದನೂರು ನಗರಸಭೆಯಲ್ಲೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಜೆಪಿ 3, ಕಾಂಗ್ರೆಸ್ 15, ಜೆಡಿಎಸ್ 6, ಪಕ್ಷೇತರರು 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಚಿಂತಾಮಣಿ ನಗರಸಭೆಯಲ್ಲಿ ಬಿಜೆಪಿ ಖಾತೆ ತೆರೆಯಲು ವಿಫಲವಾಗಿದ್ದು, ಕಾಂಗ್ರೆಸ್ 1, ಜೆಡಿಎಸ್ 14, ಪಕ್ಷೇತರ 16 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಮಾಗಡಿ ಪುರಸಭೆಯಲ್ಲಿ ಜೆಡಿಎಸ್ 12 ಸ್ಥಾನದಲ್ಲಿ ಗೆಲ್ಲುವ ಮೂಲಕ ಅಧಿಕಾರ ಹಿಡಿದಿದೆ. ಕಾಂಗ್ರೆಸ್ 10 ಹಾಗು ಬಿಜೆಪಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಬೀರೂರು ಪುರಸಭೆಯಲ್ಲಿ ಬಿಜೆಪಿ 10, ಕಾಂಗ್ರೆಸ್ 9, ಜೆಡಿಎಸ್ 2, ಪಕ್ಷೇತರ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆದ್ರೆ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಕಂಪ್ಲಿ ಪುರಸಭೆಯಲ್ಲಿ ಬಿಜೆಪಿ 13 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರ ಹಿಡಿದಿದ್ರೆ ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಇನ್ನು ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ 9, ಕಾಂಗ್ರೆಸ್ 1, ಜೆಡಿಎಸ್ 1 ಸ್ಥಾನ ಗೆದ್ದಿದ್ದು ಬಿಜೆಪಿ ಪಾಲಾಗಿದ್ರೆ, ಕುಂದಗೋಳ ಪಟ್ಟಣ ಪಂಚಾಯತಿ ಬಿಜೆಪಿ ಪಾಲಾಗುವ ಮೂಲಕ ಕಾಂಗ್ರೆಸ್ ಶಾಸಕಿಗೆ ಮುಖಭಂಗವಾಗಿದೆ. ಕೂಡ್ಲಿಗಿ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ 7, ಕಾಂಗ್ರೆಸ್ 6, ಜೆಡಿಎಸ್ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದಿದ್ದು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.