ಕಾಂಗ್ರೆಸ್, ಜೆಡಿಎಸ್ ಹಿಡನ್ ಅಜೆಂಡಾ, ಬಿಜೆಪಿಗೆ ಬಿಟ್ಟಿ ಲಾಭ!

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಉಪ ಚುನಾವಣೆ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಪಣವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಆಪರೇಷನ್ ಕಮಲಕ್ಕೆ ಒಳಗಾಗಿ ಪಕ್ಷಕ್ಕೆ ದ್ರೋಹ ಬಗೆದು ಸರ್ಕಾರ ಬೀಳಿಸಿದವರಿಗೆ ಪಾಠ ಕಲಿಸಬೇಕು ಎಂಬ ಲೆಕ್ಕಾಚಾರದಲ್ಲಿವೆ. ಈ ಮಧ್ಯೆ ಈ ಎರಡೂ ಪಕ್ಷಗಳಲ್ಲಿನ ಆಂತರಿಕ ಲೆಕ್ಕಾಚಾರಗಳು ಬಿಜೆಪಿಗೆ ವರವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಉಪಚುನಾವಣೆ ಅಖಾಡದಲ್ಲಿ ಜೆಡಿಎಸ್ ಗೆಲ್ಲಬೇಕಿರೋದು ಮೂರು ಸ್ಥಾನ ಅಷ್ಟೆ. ಯಾಕಂದ್ರೆ ಜೆಡಿಎಸ್‌ನಿಂದ ಆಪರೇಷನ್ ಕಮಲಕ್ಕೆ ತುತ್ತಾಗಿ ಮೂವರು ರಾಜೀನಾಮೆ ನೀಡಿದ್ದರು. ಆದ್ರೆ ಯಶವಂತಪುರ ಕ್ಷೇತ್ರವನ್ನೂ ಸೇರಿಸಿಕೊಂಡು ಇನ್ನು ಒಂದೆರಡು ಕ್ಷೇತ್ರಗಳಲ್ಲಿ ಗೆಲ್ಲುವ ಬಗ್ಗೆ ನಿನ್ನೆ ರಾತ್ರಿ ನಡೆದ ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚೆಯಾಗಿದೆ. ಜೊತೆಗೆ ಜೆಡಿಎಸ್ ಬೆಂಬಲ ನೀಡುತ್ತಿರುವ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಗೆಲ್ಲುವ ಮೂಲಕ ಎಂಟಿಬಿ ನಾಗರಾಜ್‌ಗೆ ಸೋಲುಣಿಸೋದು ಸದ್ಯಕ್ಕಿರುವ ಯೋಜನೆ.

ಅದೇ ರೀತಿ ಕಾಂಗ್ರೆಸ್ ಕೂಡ ಈಗ ಚುನಾವಣೆ ನಡೆಯುತ್ತಿರುವ 13 ಕ್ಷೇತ್ರಗಳನ್ನು ಮರಳಿ ಪಡೆಯಲೇ ಬೇಕು ಅನ್ನೋ ಹಠಕ್ಕೆ ಬಿದ್ದಿದೆ. ಯಾಕಂದ್ರೆ ಆಪರೇಷನ್ ಕಮಲಕ್ಕೆ ಒಟ್ಟು ಕಾಂಗ್ರೆಸ್ ಪಕ್ಷದಿಂದ 15 ಶಾಸಕರು ತುತ್ತಾಗಿದ್ದರು. ಹಾಗಾಗಿ‌ ಆ ಎಲ್ಲಾ ಕ್ಷೇತ್ರಗಳಲ್ಲೂ ಅನರ್ಹ ಶಾಸಕರನ್ನು ಸೋಲಿಸುವ ಮೂಲಕ ಪಕ್ಷಾಂತರ ಮಾಡಿದವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಅನ್ನೋದು ಕಾಂಗ್ರೆಸ್ ನಾಯಕರ ಕಾರ್ಯಸೂಚಿ.

ಕಳೆದುಕೊಂಡಿರುವ ಕ್ಷೇತ್ರಗಳನ್ನು ಮರಳಿ ಪಡೆಯಲು ಕಾಂಗ್ರೆಸ್, ಜೆಡಿಎಸ್ ಯತ್ನ ಮಾಡ್ತಿದೆ. ಇದರಲ್ಲಿ ವಿಶೇಷ ಏನು ಎಂದು ಕೇಳಬಹುದು. ಆದ್ರೆ ವಿಶೇಷವಿದೆ. ಜೆಡಿಎಸ್ ಪಕ್ಷ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಗೆಲ್ಲುವುದು. ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಥವಾ ಪಕ್ಷೇತರ ಅಭ್ಯರ್ಥಿಗಳು ಗೆಲ್ಲುವಂತೆ ಮಾಡುವುದು ಜೆಡಿಎಸ್ ರಣತಂತ್ರ. ಈ ಮೂಲಕ ಬಿಜೆಪಿ‌ ಸರ್ಕಾರಕ್ಕೆ ಬಹುಮತವೂ ಬರಬಾರದು. ಮುಂದಿನ ಮೂರು ವರ್ಷಗಳ ಕಾಲ ಬಿಜೆಪಿ ಸರ್ಕಾರವನ್ನು ಬೆಂಬಲಿಸುತ್ತಾ ತನ್ನ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವ ಉದ್ದೇಶ ಹೊಂದಿದೆ.

ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಬೆಂಬಲಿಸಲು ಸಜ್ಜಾಗಿದೆ. ಆದ್ರೆ ಕಾಂಗ್ರೆಸ್ ಮಾತ್ರ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡಲ್ಲ ಎನ್ನಲಾಗ್ತಿದೆ. ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರದಲ್ಲಿ ಗೆಲ್ಲುವುದು, ಇನ್ನುಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಬೆಂಬಲಿಸುವುದು ಅನ್ನೋ ಲೆಕ್ಕಾಚಾರ ರೆಡಿಯಾಗಿದೆ ಎನ್ನಲಾಗ್ತಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ನೇರವಾಗಿ ಬೆಂಬಲಿಸಲು ಅಸಾಧ್ಯ. ಆದ್ರೆ ಸರ್ಕಾರಕ್ಕೆ ಬಹುಮತ ಬಾರದೇ ಹೋದರೆ ಜೆಡಿಎಸ್‌ಗೆ ಭಾರೀ ಮಹತ್ವ ಬರಲಿದೆ. ಹಾಗಾಗಿ ಅನರ್ಹ ಶಾಸಕರೇ ಗೆದ್ದುಬಿಟ್ಟರೆ, ಜೆಡಿಎಸ್ ಬಗ್ಗು ಬಡಿಯೋದು ಅನುಕೂಲ ಅನ್ನೋ ಲೆಕ್ಕಾಚಾರ ಮಾಡಿದ್ದಾರೆ ಎನ್ನಲಾಗಿದೆ.

ಇದಕ್ಕೆ ಕಾರಣ ಜೆಡಿಎಸ್ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೂಡ ಪ್ರಬಲವಾಗಿದ್ದು, ಬಿಜೆಪಿ ಬೆಂಬಲಿಸಿದ್ರೆ ಯಾವುದೇ ಸಮಸ್ಯೆ ಇಲ್ಲ. ಜೆಡಿಎಸ್ ಮಟ್ಟ ಹಾಕಬಹುದು ಅನ್ನೋ ಚಿಂತನೆ ಕಾಂಗ್ರೆಸ್‌ನಲ್ಲಿದೆ ಎನ್ನಲಾಗ್ತಿದೆ. ಅಂತಿಮವಾಗಿ ಕಾಂಗ್ರೆಸ್, ಜೆಡಿಎಸ್ ಕಿತ್ತಾಟದಲ್ಲಿ ಲಾಭ ಪಡೆಯಲು ಬಿಜೆಪಿ ಪ್ಲ್ಯಾನ್ ಮಾಡ್ತಿದೆ.

Leave a Reply