ತವರಿನ ಗೆಲುವಿಗಾಗಿ ಸಿಎಂ ರಾತ್ರೋ ರಾತ್ರಿ ಲೋಕಲ್ ಆಪರೇಷನ್..!

ಡಿಜಿಟಲ್ ಕನ್ನಡ ಟೀಮ್:

ತಮ್ಮ ತವರು ಮಂಡ್ಯದಲ್ಲಿ ತಮ್ಮ ನಿಯಂತ್ರಣ ಸಾಧಿಸಬೇಕು ಎಂಬ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಅನೇಕ ಕಸರತ್ತು ಮಾಡಿದ್ದಾರೆ. ಆದರೆ ಅದ್ಯಾವುದೂ ಫಲ ನೀಡಿರಲಿಲ್ಲ. ಆದರೆ ಈಗ ಆಪರೇಷನ್ ಕಮಲದ ಮೂಲಕ ಕೆ.ಆರ್ ಪೇಟೆ ನಾರಾಯಣ ಗೌಡರನ್ನು ತಮ್ಮತ್ತ ಸೆಳೆದಿರುವ ಬಿಎಸ್ ವೈ ಮತ್ತೊಂದು ತಂತ್ರ ಎಣೆದಿದ್ದಾರೆ.

ಮಂಡ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಇತಿಹಾಸ ನಿರ್ಮಾಣ ಮಾಡುವ ಅವಕಾಶ ಒದಗಿ ಬಂದಿದೆ. ನಾರಾಯಣಗೌಡರನ್ನು ಗೆಲ್ಲಿಸಿ, ಕೆ.ಆರ್​ ಪೇಟೆಯಲ್ಲಿ ಕಮಲ ಅರಳಿಸಿದ್ರೆ, ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಲು ನಾರಾಯಣಗೌಡರನ್ನೇ ಬಳಸಿಕೊಳ್ಳಬಹುದು ಅನ್ನೋ ಲೆಕ್ಕಾಚಾರವೂ ಇದೆ.

ಮಂಡ್ಯದಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಮಾಡುವುದು ಅಷ್ಟೇ ಯಡಿಯೂರಪ್ಪ ಉದ್ದೇಶವಲ್ಲ. ಮಂಡ್ಯ ಬಿ.ಎಸ್​ ಯಡಿಯೂರಪ್ಪ ಅವರ ಹುಟ್ಟೂರು ಕೂಡ ಹೌದು. ಈ ಕಾರಣಕ್ಕಾಗಿ ಮಂಡ್ಯದ ಹಿಡಿತ ಸಾಧಿಸಲು ಯಡಿಯೂರಪ್ಪ ತನ್ನ ಜೀವಿತಾವಧಿಯಲ್ಲಿ ಸಾಧ್ಯವಾಗಿಲ್ಲ. ಈ ಬಾರಿ ಮಂಡ್ಯದಲ್ಲಿ ಒಮ್ಮೆ ಗೆಲುವು ಸಾಧಿಸಿದ್ರೆ, ಜಿಲ್ಲೆಯ ಮೇಲೆ ಹಿಡಿತ ಸಾಧಿಸಬಹುದು ಅನ್ನೋ ಕಾರಣಕ್ಕೆ ರಾತ್ರೋ ರಾತ್ರಿ ಆಪರೇಷನ್​ ಕಮಲಕ್ಕೆ ಮುಂದಾಗಿದ್ದಾರೆ.

K.R.ಪೇಟೆ ಅನರ್ಹ ಶಾಸಕ ನಾರಾಯಣಗೌಡನನ್ನ ಗೆಲ್ಲಿಸಲೇ ಬೇಕು ಅನ್ನೋ ಹಠದಿಂದ ಸ್ಥಳೀಯ ಜೆಡಿಎಸ್​ ಮುಖಂಡರನ್ನು ಬಿಜೆಪಿ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ ತಡ ರಾತ್ರಿ ಹಲವು ಜೆಡಿಎಸ್​ ನಾಯಕರನ್ನು ಬಿಜೆಪಿಗೆ ಬರಮಾಡಿಕೊಂಡಿದ್ದಾರೆ. ಜೆಡಿಎಸ್​ನಲ್ಲಿ ಹಿರಿಯ ನಾಯಕ ಬಿ.ಎಲ್.ದೇವರಾಜುಗೆ ಟಿಕೆಟ್ ಕೊಟ್ಟಿದ್ದಕ್ಕೂ ಹಲವರು ಅಸಮಾಧಾಗೊಂಡಿದ್ದಾರೆ ಎನ್ನಲಾಗ್ತಿದೆ.

ಮಂಡ್ಯದಲ್ಲಿ ಅಸ್ತಿತ್ವ ಸ್ಥಾಪನೆಗಾಗಿ ಯಡಿಯೂರಪ್ಪ, ಇಷ್ಟೆಲ್ಲಾ ಕಸರತ್ತು ಮಾಡ್ತಿರೋದಕ್ಕೆ ಮತ್ತೊಂದು ಮಹತ್ವದ ಕಾರಣವೂ ಇದೆ. ಅದೇನಂದ್ರೆ ಶಿವಮೊಗ್ಗದಲ್ಲಿ ಬಿಎಸ್​ ಯಡಿಯೂರಪ್ಪ ಅವರಿಗೆ ಕಾರ್ಯಕರ್ತರ ಪಡೆಯೇ ಇದೆ. ಈಗಾಗಲೇ ಶಿವಮೊಗ್ಗದಿಂದ ಬಿ.ವೈ ರಾಘವೇಂದ್ರ ಬಿಜೆಪಿ ಸಂಸದರಾಗಿದ್ದಾರೆ. ಆದ್ರೆ ಮೈಸೂರಿನ ವರುಣಾ ಕ್ಷೇತ್ರದಿಂದ ಶಾಸಕರನ್ನಾಗಿ ಮಾಡಲು ಪ್ರಯತ್ನ ನಡೆಸಿದ್ರು. ಆದ್ರೆ ಬಿಜೆಪಿ ನಾಯಕರೇ ಅವಕಾಶ ಕೊಡಲಿಲ್ಲ. ಅಂತಿಮವಾಗಿ ಇಂದಿಗೂ ಬಿ.ವೈ ವಿಜಯೇಂದ್ರ ಅವರನ್ನು ಶಾಸಕರನ್ನಾಗಿ ಮಾಡಲು ಸಾಧ್ಯವಾಗಿಲ್ಲ. ಇದೀಗ ಮಂಡ್ಯದಲ್ಲಿ ಬಿಜೆಪಿ ತುಂಬಾ ದುರ್ಬಲವಾಗಿದೆ.

ಬಿಜೆಪಿಯನ್ನು ಪ್ರಬಲ ಮಾಡುವ ಕೆಲಸಕ್ಕೆ ವಿಜಯೇಂದ್ರ ಅವರನ್ನು ನೇಮಿಸಿದ್ರೆ ಬಿಜೆಪಿ ಹೈಕಮಾಂಡ್ ಕೂಡ ವಿರೋಧ ಮಾಡಲ್ಲ. ಇದೆಲ್ಲಾ ಕಾರಣಗಳನ್ನು ತುಲನೆ ಮಾಡಿರುವ ಸಿಎಂ ಯಡಿಯೂರಪ್ಪ, ಮಂಡ್ಯದಲ್ಲಿ ಮಗನನ್ನು ಪ್ರತಿಷ್ಠಾಪನೆ ಮಾಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ತವರೂರು ಕೆ.ಆರ್ ಪೇಟೆ ಕ್ಷೇತ್ರದಿಂದಲೇ ಗೆಲುವನ್ನು ಆರಂಭಿಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಮಂಡ್ಯದಲ್ಲಿ ಪಕ್ಷವನ್ನು ಬಲಪಡಿಸಿ ಮುಂದಿನ ವಿಧಾನಸಭೆ ಅಥವಾ ಲೋಕಸಭೆಯಲ್ಲಿ ವಿಜಯೇಂದ್ರರನ್ನು ಕಣಕ್ಕಿಸುವ ತಂತ್ರಗಾರಿಕೆ ಅಡಗಿದೆ ಎನ್ನಲಾಗಿದೆ. ಇದಕ್ಕೆಲ್ಲಾ ಮಂಡ್ಯ ಮತದಾರ ಹೇಗೆ ಪ್ರೋತ್ಸಾಹ ಕೊಡ್ತಾನೆ ಅನ್ನೋದನ್ನು ಡಿಸೆಂಬರ್ 9ರಂದು ಬರುವ ಫಲಿತಾಂಶವೇ ನಿರ್ಧಾರ ಮಾಡಲಿದೆ.

Leave a Reply