ಇಲ್ಲಿ ಕೇವಲ ಆಂಜಿನಪ್ಪ ಮಾತ್ರವಲ್ಲ, ನಾವೆಲ್ಲರೂ ಅಭ್ಯರ್ಥಿಗಳೇ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆಂಜಿನಪ್ಪ ಮಾತ್ರ ಅಭ್ಯರ್ಥಿಯಾಗಿಲ್ಲ. ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು ಕೂಡ ಅಭ್ಯರ್ಥಿಗಳೇ. ಪಕ್ಷಕ್ಕೆ ದ್ರೋಹ ಬಗೆದರೆ ತಾಯಿಗೆ ದ್ರೋಹ ಬಗೆದಂತೆ. ಅಂತಹವರಿಗೆ ನೀವು ಶಿಕ್ಷೆ ನೀಡಬೇಕು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಚಿಕ್ಕ ಬಳ್ಳಾಪುರ ಮತದಾರರಿಗೆ ಕರೆ ನೀಡಿದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಂಜಿನಪ್ಪ ಅವರು ಸೋಮವಾರ ನಾಮಪತ್ರ ಸಲ್ಲಿಸುವಾಗ ನಡೆದ ಮೆರವಣಿಗೆಯಲ್ಲಿ ಕಾರ್ಯಕರ್ತರು ಹಾಗೂ ಮತದಾರರನ್ನು ಉದ್ದೇಶಿಸಿ ಡಿಕೆ ಶಿವಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

’50 ದಿನಗಳ ಸೆರೆವಾಸದ ನಂತರ ಮೊದಲ ಬಾರಿಗೆ ಚಿಕ್ಕಬಳ್ಳಾಪುರಕ್ಕೆ ಬಂದು ಸಭೆ ನಡೆಸುತ್ತಿದ್ದೇನೆ. ನನ್ನ ಆರೋಗ್ಯ ಉತ್ತಮವಾಗಿಲ್ಲದಿದ್ದರೂ ನಿಮ್ಮ ಪ್ರೀತಿ, ಪೂಜೆ, ಪ್ರಾರ್ಥನೆ, ತ್ಯಾಗ ನನ್ನನ್ನು ಇಲ್ಲಿವರೆಗೆ ಬರುವಂತೆ ಮಾಡಿದೆ.

ನಾನು ಇಲ್ಲಿಗೆ ಬರುವಾಗ ದಾರಿಯಲ್ಲಿ ಸುಮಾರು ದೇವಸ್ಥಾನಗಳನ್ನು ನಾನು ನೋಡಿಕೊಂಡು ಬಂದೆ. ರಾಮನ ತಂದೆ ದಶರಥ ಮಹರಾಜನ ದೇವಾಲಯವನ್ನು ನಾನು ಎಲ್ಲಿಯೂ ನೋಡಿಲ್ಲ. ಆದರೆ ರಾಮನ ಭಂಟ ಆಂಜನೇಯನ ದೇವಾಲಯ ಎಲ್ಲಾ ಕಡೆ ಇವೆ. ಆಂಜನೇಯ ಯಾರಪ್ಪಾ ಅಂದ್ರೆ, ಸಮಾಜ ಸೇವೆ ಮಾಡುತ್ತಾ, ಸಮಾಜಕ್ಕಸ್ಕರ ತ್ಯಾಗ ಮಾಡುವವನು ರಕ್ಷಿಸುವವನು. ಹೀಗಾಗಿ ಜನ ಕೂಡ ಆಂಜನೇಯನನ್ನು ಪ್ರಾರ್ಥಿಸುತ್ತಾರೆ. ಅದೇ ರೀತಿ ಇವತ್ತು ಮತದಾರರು ನಮ್ಮ ಈ ಆಂಜನೇಯನಿಗೆ ಆಶೀರ್ವಾದ ಮಾಡಬೇಕು.

ಯಾರಿಗೆ ದ್ರೋಹ ಮಾಡಿದರೂ ಕ್ಷಮೆ ಇದೆ. ಆದರೆ ಹೆತ್ತ ತಾಯಿಗೆ ದ್ರೋಹ ಮಾಡಿದರೆ ಕ್ಷಮೆ ಇಲ್ಲ ಅಂತಾ ಈಗಷ್ಟೇ ನಮ್ಮ ಕೃಷ್ಣಭೈರೇಗೌಡರು ಹೇಳಿದರು. ಅಧಿಕಾರ ಇದ್ದಾಗ ಯಾರು ಏನು ಮಾಡಿದರೂ ಎಂಬುದಕ್ಕಿಂತ ಅಧಿಕಾರ ಇಲ್ಲದಿದ್ದಾಗಲೂ ಯಾರು ಜನರಿಗಾಗಿ ಶ್ರಮಿಸಿ, ತ್ಯಾಗ ಮಾಡಿ ಸಮಾಜದ ಪರವಾಗಿ ಕೆಲಸ ಮಾಡುತ್ತಾರೆ ಎಂಬುದು ಬಹಳ ಮುಖ್ಯ. ಇಲ್ಲಿ ಹುಡುಗರು ಅಕ್ಕಿ ಆಂಜಿನಪ್ಪ ಎಂದು ಇವರನ್ನು ಕರೆಯುತ್ತಾರೆ. ಬಡವರಿಗೋಸ್ಕರ ಅನ್ನವನ್ನು ಕೊಟ್ಟಂತಹ ಆಂಜಿನಪ್ಪಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಇಷ್ಟು ದಿನ ಹೇಗೆ ನಿಮ್ಮ ಪ್ರೀತಿ ಅಭಿಮಾನ ತೋರಿಸುತ್ತಿದ್ದೀರಿ ಅದೇ ರೀತಿ ಮುಂದಿನ ದಿನಗಳಲ್ಲಿ ತೋರಿಸುವ ವಿಶ್ವಾಸ ಇದೆ.

ನೀವು ಮತ ಹಾಕುವಾಗ ಬರುವ ಸದ್ದು ದೆಹಲಿಗೆ ಕೇಳಿಸಬೇಕು. ಪಕ್ಷದ್ರೋಹ ಮಾಡಿದವರನ್ನು ಮನೆಯಲ್ಲಿ ಕೂರುವಂತಹ ಶಿಕ್ಷೆ ನೀಡಬೇಕು. ಈ ಸರ್ಕಾರ ರಚನೆ ಆದ ಬಗ್ಗೆ ಯಡಿಯೂರಪ್ಪನವರೇ ತಮ್ಮ ನುಡಿಮುತ್ತುಗಳಲ್ಲಿ ಹೇಳಿದ್ದಾರೆ. ಈ ಹಿಂದೆ ಇಲ್ಲಿ ಟಿಕೆಟ್ ಕೊಡುವ ವಿಚಾರದಲ್ಲಿ ಪರಮೇಶ್ವರ್ ಅವರು ಏನು ಮಾತುಕೊಟ್ಟಿದ್ದರು, ದೇಶಪಾಂಡೆ ಅವರು ಏನು ಹೇಳಿದ್ದರು, ನಂತರ ಸಿದ್ದರಾಮಯ್ಯ ಹಾಗೂ ಮಹದೇವಪ್ಪನವರು ಯಾವರೀತಿ ಈ ಗಿಳಿಯನ್ನು ಸಾಕಿದ್ದರೂ ನಂತರ ಈ ಗಿಳಿ ಏನಾಯ್ತು ಅಂತಾ ಅವರು ಬಂದು ನಿಮಗೆ ವಿವರಿಸುತ್ತಾರೆ. ಅವರು ಈ ವಿಚಾರ ತಿಳಿಸದೇ ಈ ಚುನಾವಣೆ ಮುಕ್ತವಾಗೋದಿಲ್ಲ. ನಾನು ಬಂದು ಅನೇಕ ವಿಚಾರಗಳನ್ನು ಮಾತನಾಡುತ್ತೇನೆ.

ಇವತ್ತು ನಿಮ್ಮ ಸಂಕಲ್ಪ ಒಂದೇ ಆಗಿರಬೇಕು. ಈ ದೇವರ ಸನ್ನಿದಿ ಬಳಿ ನಾನು ನಿಂತು ಮಾತನಾಡುತ್ತಿದ್ದೇನೆ. ಆಂಜಿನಪ್ಪ ಅವರ ಹಸ್ತದ ಗುರುತಿಗೆ ಮತ ಹಾಕುವುದು, ಅವರನ್ನು ವಿಧಾನಸಭೆಗೆ ಕಳುಹಿಸುವುದೊಂದೇ ನಿಮ್ಮ ಗುರಿಯಾಗಿರಬೇಕು. ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ ನಿಮಗೆ ದ್ರೋಹ ಮಾಡಿದವರಿಗೆ ಹೇಗೆ ಶಿಕ್ಷೆ ನೀಡುತ್ತೀರೋ ಅದೇ ರೀತಿ, ಪಕ್ಷಕ್ಕೆ ದ್ರೋಹ ಬಗೆದವರಿಗೆ ಶಿಕ್ಷೆ ನೀಡಲು ನೀವು ಆಂಜಿನಪ್ಪ ಅವರಿಗೆ ಮತ ಹಾಕುವ ಮೂಲಕ ದ್ರೋಹಿಗಳನ್ನು ಮನೆಗೆ ಕಳುಹಿಸಬೇಕು.

ನಾನು ಎದುರಾಳಿ ಅಭ್ಯರ್ಥಿ ವಿರುದ್ಧ ಮಾತನಾಡಬೇಕು ಎಂದು ನಿರೀಕ್ಷಿಸುತ್ತಿದ್ದೀರಿ. ಆದರೆ ನಾನು ಈಗ ಇಲ್ಲಿ ಮಾತನಾಡಿ ಅವರನ್ನು ದೊಡ್ಡವರನ್ನಾಗಿ ಮಾಡಲು ನನಗೆ ಇಷ್ಟ ಇಲ್ಲ. ಈಗ ಆ ಬಗ್ಗೆ ಚರ್ಚೆ ಬೇಡ. ಈಗ ನಮ್ಮ ನಿಮ್ಮ ಗುರಿ ನಮ್ಮ ಅಭ್ಯರ್ಥಿ ಗೆಲ್ಲಿಸುವುದೊಂದೇ ಆಗಿರಬೇಕು.’

Leave a Reply