ಕಾಂಗ್ರೆಸ್​ ಶಾಸಕ ತನ್ವೀರ್​ ಸೇಠ್ ಕೊಲೆಗೆ ಯತ್ನ..! ಯಾಕೆ..?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್​​ ಶಾಸಕ ತನ್ವೀರ್​ ಸೇಠ್​ ಕೊಲೆಗೆ ನೆನ್ನೆ ರಾತ್ರಿ ಯತ್ನ ನಡೆಸಲಾಗಿದೆ. ಮೈಸೂರು ನಗರದ ನರಸಿಂಹ ರಾಜ ಕ್ಷೇತ್ರದ ಕಾಂಗ್ರೆಸ್​ ಶಾಸಕನಾಗಿರುವ ತನ್ವೀರ್​ ಸೇಟ್​ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ.

ಮಾಂಸ ಕತ್ತರಿಸುವ ಕತ್ತಿ ಹಿಡಿದು ಶಿಸ್ತಾಗಿ ಬರುವ ಯುವಕ ಸಂಗೀತ ಆಲಿಸುತ್ತಿದ್ದ ಶಾಸಕ ತನ್ವೀರ್​ ಸೇಠ್​ ಮೇಲೆ ಬೀಸಿದ್ದಾನೆ. ಕುತ್ತಿಗೆ ಕತ್ತರಿಸಿದ್ದು, ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಂಗ್ರೆಸ್​ ನಾಯಕ, ಮಾಜಿ ಸಚಿವ ಯು ಟಿ ಖಾದರ್​ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆ ಬಳಿ ನೂರಾರು ಕಾರ್ಯಕರ್ತರು ಜಮಾಹಿಸಿದ್ದು, ಕೊಲೆಯತ್ನ ನಡೆಸಿದವನಿಗೆ ಶಿಕ್ಷೆ ಕೊಡುವಂತೆ ಆಗ್ರಹಿಸಿದ್ದಾರೆ.

ಕೊಲೆ ಯತ್ನ ನಡೆಸಿದ ಯುವಕ 24 ವರ್ಷದ ಫರಾನ್ ಎಂಬುವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬನ್ನಿಮಂಟಪದಲ್ಲಿ ಮದುವೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಪ್ರಯುಕ್ತ ಸಂಗೀಕ ಕಾರ್ಯಕ್ರಮ ನಡೆಯುತ್ತಿತ್ತು ಎನ್ನಲಾಗಿದೆ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಫರಾನ್ ಕೊಲೆ ಯತ್ನ ನಡೆಸಲು ಕಾರಣ ಏನು ಎಂಬುವ ಬಗ್ಗೆ ತನಿಖೆ ನಡೆಸಲಾಗ್ತಿದೆ.

ಕೊಲೆಯತ್ನ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಮೈಸೂರು ನಗರ ಪೊಲೀಸ್ ಆಯುಕ್ತ K.T.ಬಾಲಕೃಷ್ಣ, ಆರೋಪಿ ಫರಾನ್ ಪಾಷ ಎಂಬಾತನನ್ನು ವಶಕ್ಕೆ ಪಡೆದಿದ್ದೇವೆ. ಫರಾನ್ ಪಾಷ ಮೈಸೂರಿನ ಕೆ.ಎಂ.ಹಳ್ಳಿ ನಿವಾಸಿಯಾಗಿದ್ದಾನೆ. ರಾತ್ರಿ 11.30 ಗಂಟೆ ವೇಳೆಗೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ತನ್ವೀರ್​ ಸೇಠ್​, ಇತ್ತೀಚಿಗೆ ಮೈಸೂರಿನಲ್ಲಿ ಟಿಪ್ಪು ಜಯಂತಿ ಮಾಡಲು ಅನುಮತಿ ಕೋರಿದ್ರು. ಆದ್ರೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಕೈಬಿಡಲಾಗಿತ್ತು. ಇನ್ನು ತನ್ವೀರ್​​ ಸೇಠ್, ದಸರಾ ಆಚರಣೆ ವೇಳೆ ಬಿಜೆಪಿ ನಾಯಕರ ಜೊತೆ ಹೆಚ್ಚು ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇದೇ ರೀತಿ ಇನ್ನೂ ಹಲವಾರು ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇನ್ನೇನಾದರೂ ಶಾಸಕರ ಮೇಲೆ ವೈಯಕ್ತಿಕವಾಗಿ ದ್ವೇಷ ಇತ್ತಾ ಎನ್ನುವ ಬಗ್ಗೆಯೂ ತನಿಖೆ ಶುರುವಾಗಿದೆ. ಇದರ ಜೊತೆಗೆ ಈಗ ಬಂಧಿತನಾಗಿರುವ ಫರಾನ್, SDPI ಕಾರ್ಯಕರ್ತ ಎನ್ನಲಾಗಿದ್ದು, ರಾಜಕೀಯ ದ್ವೇಷದಿಂದ ಕೊಲೆ ಮಾಡುವ ಯತ್ನ ನಡೀತಾ ಅನ್ನೋ ಬಗ್ಗೆಯೂ ಅನುಮಾನಗಳು ಶುರುವಾಗಿವೆ. ನರಸಿಂಹರಾಜ ಕ್ಷೇತ್ರದಲ್ಲಿ ಎಸ್​ಡಿಪಿಐ ಸಂಘಟನೆ ಪ್ರಬಲವಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ 33284 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದತ್ತು. ತನ್ವೀರ್​ ಸೇಠ್​, 62268 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರು. ಹೀಗಾಗಿ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗ್ತಿದೆ. ತನಿಖೆ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ತಿಳಿಯಬೇಕಿದೆ.

Leave a Reply