ಜನರ ಧ್ವನಿ ನಮ್ಮ ಧ್ವನಿಯಾಗಬೇಕು: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇಳಿದಂತೆ ಜನರ ಧ್ವನಿ ನಮ್ಮ ಧ್ವನಿಯಾಗಬೇಕು, ಜನರ ವಿಚಾರ ನಮ್ಮ ವಿಚಾರವಾಗಬೇಕು ಆಗ ಮಾತ್ರ ಕಾಂಗ್ರೆಸ್ ಪಕ್ಷ ವಿಧಾನಸೌಧದಿಂದ ಸಂಸತ್ತಿನವರೆಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಶ್ರೀಮತಿ ಇಂದಿರಾಗಾಂಧಿ ಅವರ 103ನೇ ಜನ್ಮದಿನ ಹಾಗೂ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಾ. ಅನ್ಸುಮಾನ್ ಅವರ ಪದಗ್ರಹಣ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿಕೆ ಶಿವಕುಮಾರ್, ‘ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಇಂದಿರಾ ಗಾಂಧಿ ಅವರ ಹೇಳಿರುವ ಮಾತುಗಳನ್ನು ಪಾಲಿಸಬೇಕು’ ಎಂದು ಕಾರ್ಯಕರ್ತರು ಹಾಗೂ ನಾಯಕರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

‘ಇಂದಿರಾಗಾಂಧಿ ಅವರ ಜನ್ಮದಿನದಂದು ಚಿಕ್ಕಮಗಳೂರಿನ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಪಕ್ಷದ ಬಾವುಟ ನೀಡಿ ಜವಾಬ್ದಾರಿಯನ್ನು ನೀಡಿದ್ದೇವೆ. ನನಗೆ ಬೇರೆ ಕಾರ್ಯಕ್ರಮ ಇದ್ದರೂ ಕೂಡ ಇಂತಹ ಪವಿತ್ರವಾದ ಕಾರ್ಯಕ್ರಮಕ್ಕೆ ಬಂದು ನಿಮ್ಮ ಜತೆಗೆ ನಾನು ಇದ್ದೇನೆ ಎಂಬುದನ್ನು ತಿಳಿಸಲು ಬಯಸುತ್ತೇನೆ. ನನ್ನ ಕಷ್ಟದ ದಿನಗಳಲ್ಲಿ ಪಕ್ಷದ ದಿನಗಳಲ್ಲಿ ಪಕ್ಷದ ಜವಬ್ದಾರಿ ನಿರ್ವಹಿಸುವಾಗ ನನ್ನ ಮೇಲೆ ಆದ ಅನೇಕ ದಾಳಿಗಳಿಗೆ, ತೊಂದರೆಗಳಿಗೆ ಇಡೀ ರಾಜ್ಯದ ಜನ, ಕಾರ್ಯಕರ್ತರು, ಮುಖಂಡರು ತಮ್ಮ ಕುಟುಂಬಕ್ಕೆ ಅನ್ಯಾಯ ಆಗಿದೆ ಎನ್ನುವಂತೆ ಪ್ರಾರ್ಥನೆ, ಪೂಜೆ ಪುನಸ್ಕಾರ ಮಾಡಿದ್ದಾರೆ. ಅವರಿಗೆಲ್ಲ ನಾನು ಸಾಷ್ಠಾಂಗ ನಮಸ್ಕಾರ ಮಾಡುತ್ತೇನೆ. ನೀವು ಕೊಟ್ಟಂತಹ ಶಕ್ತಿ, ಪ್ರೀತಿ, ನಾನು ಇಂದು ಮತ್ತೆ ನಿಮ್ಮ ಮುಂದೆ ಬಂದು ನಿಂತು ಮಾತನಾಡುವಂತೆ ಮಾಡಿದೆ.

ಕಳೆದ 30 ವರ್ಷಗಳಿಂದ ಕಾರ್ಯಕರ್ತನಾಗಿ, ಮಂತ್ರಿಯಾಗಿ ಅನೇಕ ರೀತಿ ಅಧಿಕಾರ ಅನುಭವಿಸಿದ್ದೇವೆ. ಶ್ರೀಮತಿ ಇಂದಿರಾಗಾಂಧಿ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ನಾವು ವಿದ್ಯಾರ್ಥಿ ಘಟಕದಲ್ಲಿದ್ದಾಗ ಅನೇಕ ಕಾರ್ಯಕ್ರಮ ಮಾಡಿದ್ದೇವೆ. ಅಲ್ಲಿಂದ ನಮ್ಮ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಇವತ್ತು ರಾಜ್ಯದಲ್ಲಿ ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರಬಹುದು, ಆದರೆ ನಮ್ಮ ಕಾರ್ಯಕರ್ತರು ಸ್ಫೂರ್ತಿ ಹಾಗೂ ಜನರ ಭಾವನೆಯನ್ನು ಬದಲಿಸಲು ಸಾಧ್ಯವಿಲ್ಲ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಧ್ವಜ ಹಾರಲಿದೆ. ಈ ವಿಚಾರದಲ್ಲಿ ನಾನು ಯಾವುದೇ ಗಂಟೆ, ಗಳಿಗೆ, ಮುಹೂರ್ತವನ್ನು ಫಿಕ್ಸ್ ಮಾಡುವುದಿಲ್ಲ.

ನಮ್ಮ ಪಕ್ಷಕ್ಕೆ ಇತಿಹಾಸ ಇದೆ. ತ್ಯಾಗ ಇದೆ. ಇದನ್ನು ಬೇರೆ ಯಾವುದೇ ಪಕ್ಷ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಂತಹ ಪಕ್ಷದ ಸದಸ್ಯರಾಗಿರುವುದು ನಿಮ್ಮೆಲ್ಲರ ಭಾಗ್ಯ. ಇಂದಿರಾಗಾಂಧಿ ಅವರ ಜನ್ಮದಿನದಂದು ಚಿಕ್ಕಮಗಳೂರಿನಲ್ಲಿ ನಾವೆಲ್ಲ ಸೇರಿದ್ದೇವೆ. ಇಂದಿರಾಗಾಂಧಿ ಅವರು ದೇಶದಲ್ಲಿ ಶಾಂತಿ ಸುವ್ಯವಸ್ಥೆ ತರಲು ಶ್ರಮಿಸಿ ತಮ್ಮನ್ನೇ ತಾವು ತ್ಯಾಗ ಮಾಡಿದ್ದಾರೆ. ಅದೇ ರೀತಿ ರಾಜೀವ್ ಗಾಂಧಿ ಅವರೂ ಕೂಡ ಈ ದೇಶಕ್ಕೆ ಮಾಡಿದಂತಹ ತ್ಯಾಗ ಮರೆಯಲು ಸಾಧ್ಯವಿಲ್ಲ. ಇವತ್ತು ಶ್ರೀಮತಿ ಸೋನಿಯಾ ಗಾಂಧಿ ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಸಂಸತ್ತಿನಲ್ಲಿ ಬಿಜೆಪಿ ನಾಯಕಿಯೊಬ್ಬರು ಸೋನಿಯಾ ಗಾಂಧಿ ಅವರು ಪ್ರಧಾನಿ ಆದರೆ ತಲೆ ಬೋಳಿಸಿಕೊಳ್ಳುವುದಾಗಿ ಹೇಳಿದ್ದರು. ನಂತರ ಇಡೀ ಕಾಂಗ್ರೆಸ್ ಶಾಸಕಾಂಗ ಸದಸ್ಯರು ಸೋನಿಯಾ ಅವರು ಪ್ರಧಾನಮಂತ್ರಿ ಆಗಬೇಕು ಎಂದು ಒತ್ತಾಯ ಮಾಡಿದರು. ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಕೂಡ ಪತ್ರದ ಮೂಲಕ ಸೋನಿಯಾ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾಗುವಂತೆ ಪತ್ರವನ್ನು ಕಳುಹಿಸಿದಾಗ ಆ ಹೆಣ್ಣುಮಗಳು ನನಗೆ ಪ್ರಧಾನಿ ಹುದ್ದೆ ಬೇಡ, ದೇಶದ ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತೇನೆ ಎಂದು ಘೋಷಣೆ ಮಾಡಿದ ಇತಿಹಾಸ ಕಾಂಗ್ರೆಸ್ ಪಕ್ಷದಲ್ಲಿದೆ.

ಯಾರೂ ಕೂಡ ಪಂಚಾಯ್ತಿ ಸ್ಥಾನವನ್ನು ಕೂಡ ಬಿಟ್ಟು ಕೊಡುವುದಿಲ್ಲ. ಮಂತ್ರಿ ಸ್ಥಾನ ಹಂಚಿಕೊಳ್ಳಲು ಕೂಡ ನಾವು ಒಪ್ಪುವುದಿಲ್ಲ. ಆದರೆ ಎರಡು ಬಾರಿ ದೇಶದ ಪ್ರಧಾನಿಯಾಗಲು ಸೋನಿಯಾಗಾಂಧಿ ಅವರಿಗೆ ಇದ್ದರೂ ಅದನ್ನು ತ್ಯಾಗ ಮಾಡಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ. ಇಂತಹ ಪುಣ್ಯ ಕುಟುಂಬದ ನಾಯಕತ್ವದಲ್ಲಿ ಇಂದು ನಾವೆಲ್ಲ ಕೆಲಸ ಮಾಡುತ್ತಿದ್ದೇವೆ.

ಇಂದಿರಾ ಗಾಂಧಿ ಅವರು ಹೇಳ್ತಾರೆ, ನಾವು ಜನರ ಮಧ್ಯೆ ಗುರುತಿಸಿಕೊಳ್ಳಬೇಕು, ಅವರ ಸಮಸ್ಯೆಗಳ ನಡುವೆ ಬದುಕಬೇಕು, ಅದನ್ನು ಪರಿಹರಿಸಬೇಕು ಆಗ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಅಂತಾ. ಈ ಸಂದರ್ಭದಲ್ಲಿ ಆ ಕೆಲಸವನ್ನು ನಾವೆಲ್ಲ ನಾಯಕರು ಮಾಡಬೇಕಿದೆ. ನಿಮ್ಮ ಧ್ವನಿ ನಮ್ಮ ಧ್ವನಿ ಆಗಬೇಕು. ನಿಮ್ಮ ಆಚಾರ ವಿಚಾರ, ಕಾಂಗ್ರೆಸ್ ನಾಯಕರ ವಿಚಾರ ಆಗಬೇಕು. ಆಗ ಮಾತ್ರ ನಮ್ಮ ಪಕ್ಷಕ್ಕೆ ಶಕ್ತಿ ಬರುತ್ತದೆ. ನಾವು ಕೇವಲ ಸ್ಟೇಜ್ ಮೇಲೆ ಕೂತು ತೀರ್ಮಾನ ಮಾಡಬಾರದು. ಇದೇ ರಾಹುಲ್ ಗಾಂಧಿ ಅವರು ಕೊಟ್ಟ ಸಲಹೆಗಳಂತೆ ನಿಮ್ಮ ನೋವು ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡಿದರೆ ಮಾತ್ರ ಮತ್ತೆ ವಿಧಾನಸೌಧ ಹಾಗೂ ಸಂಸತ್ತಿನಲ್ಲಿ ಮತ್ತೆ ಕಾಂಗ್ರೆಸ್ ಬಾವುಟ ಹಾರುತ್ತದೆ ಎಂದು ಯಾವುದೇ ಕಾರ್ಯಕರ್ತರು ಮರೆಯಬಾರದು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು.

ಇಂದಿರಾಗಾಂಧಿ ಅವರು ಮತ್ತೊಂದು ಮಾತು ಹೇಳಿದ್ದಾರೆ. ನಮ್ಮ ಸವಾಲು ಬಡತನ ನಿರ್ಮೂಲನೆ ಮಾಡುವಂತಹದ್ದು, ಜಾತಿ ಅಸಮಾನತೆ ಹೊಗಲಾಡಿಸುವುದು ಪ್ರಮುಖವಾಗಬೇಕು. ಈ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಈ ದೇಶದ ಐಕ್ಯತೆ, ಸಮಗ್ರತೆಯನ್ನು ಕಾಪಾಡಬೇಕು. ಹೀಗಾಗಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು ಅಂತಾ ಇಂದಿರಾ ಗಾಂಧಿ ಅವರು ಹೇಳಿದ್ದಾರೆ.

Leave a Reply