ಸಚಿವ ಮಾಧುಸ್ವಾಮಿಯಿಂದ ಕುರುಬ ಸ್ವಾಮೀಜಿ ನಿಂದನೆ..?

ಡಿಜಿಟಲ್ ಕನ್ನಡ ಟೀಮ್:

ಅಧಿಕಾರದ ಮದವೋ ಏನೋ ಬಿಜೆಪಿ ಸರ್ಕಾರದಲ್ಲಿ ಸಚಿವರಾದ ನಂತರ ಮಾಧುಸ್ವಾಮಿ ಅವರ ನಾಲಿಗೆ ಲಂಗು ಲಗಾಮು ಇಲ್ಲದ ಕುದುರೆಯಾಗಿದೆ. ಪರಿಣಾಮ ಸಾಲು ಸಾಲು ದರ್ಪದ ಹೇಳಿಕೆಗಳನ್ನು ಕಕ್ಕುತ್ತಲೇ ಇದ್ದಾರೆ.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವ ವಿಚಾರದಲ್ಲಿ ದುರಹಂಕಾರದ ಮಾತುಗಳನ್ನು ಆಡಿದ್ದ ಮಾಧುಸ್ವಾಮಿ ಈಗ ಕುರುಬ ಸಮುದಾಯದ ಸ್ವಾಮೀಜಿಗೆ ಹಿಯ್ಯಾಳಿಸಿ ಮಾತನಾಡಿದ್ದಾರೆ. ಸ್ವತಃ ಸಿಎಂ ಯಡಿಯೂರಪ್ಪ ಅವರೇ ಬುದ್ಧಿವಾದ ಹೇಳಿದ್ದರೂ ಅದಕ್ಕೆ ಕ್ಯಾರೆ ಎನ್ನದ ಮಾಧುಸ್ವಾಮಿ ತನ್ನ ದರ್ಪದ ಮಾತುಗಳನ್ನು ಮುಂದುವರಿಸಿದ್ದಾರೆ.

ತುಮಕೂರಿನ ಹಯಳಿಯಾರು ಪಟ್ಟಣದಲ್ಲಿ ಕನಕ ವೃತ್ತದ ಹೆಸರು ಬದಲಾವಣೆ ಬಗ್ಗೆ ಸೋಮವಾರ ಸಭೆ ನಡೆದಿತ್ತು. ಈ ವೇಳೆ ಕನಕ ಸರ್ಕಲ್ ಎಂಬುದನ್ನು ಶಿವಕುಮಾರ ಸ್ವಾಮೀಜಿ ಸರ್ಕಲ್ ಎಂದು ಮರು ನಾಮಕರಣ ಮಾಡುವ ಬಗ್ಗೆ ಸಚಿವರು ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ಕುರುಬ ಸಮುದಾಯದ ಪ್ರಭಾವಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ವಿರೋಧ ಮಾಡಿದ್ದು, ಕನಕ ವೃತ್ತವನ್ನು ಮರು ನಾಮಕರಣ ಮಾಡುವ ಮೂಲಕ ಶಿವಕುಮಾರ ಸ್ವಾಮೀಜಿ ಹೆಸರು ಇಡುವುದರಿಂದ ಕನಕರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಬೇರೊಂದು ವೃತ್ತಕ್ಕೆ ಶಿವಕುಮಾರ ಸ್ವಾಮೀಜಿ ಹೆಸರನ್ನು ನಾಮಕರಣ ಮಾಡಿ. ಈ ಕನಕ ವೃತ್ತಕ್ಕೆ ಗ್ರಾಮ ಪಂಚಾಯತ್‌ನಿಂದ ಅನುಮೋದನೆ ಪಡೆದಿದ್ದೇವೆ ಎಂದರು.

ಅದಕ್ಕೆ ಕೋಪಿಸಿಕೊಂಡ ಮಾಧುಸ್ವಾಮಿ, ಇದು ಪಟ್ಟಣ ಪಂಚಾಯಿತಿ. ಗ್ರಾಮ ಪಂಚಾಯಿತಿ ಅನುಮೋದನೆ ನಡೆಯಲ್ಲ ಎಂದು ರೇಗಾಡಿದ ಮಾಧುಸ್ವಾಮಿ, ನೀನು ತಾನು ಎಂದು ಏಕವಚನದಲ್ಲೇ ಬೈಯ್ದಿದ್ದಾರೆ ಎನ್ನಲಾಗಿದೆ.

ಸಚಿವ ಮಾಧುಸ್ವಾಮಿ ಅಡ್ಡಾದಿಡ್ಡಿ ಮಾತನಾಡಿದ ವಿಚಾರ ಮಾಧ್ಯಮಗಳಲ್ಲಿ ಪ್ರಸಾರ ಆಗ್ತಿದ್ದಂತೆ ಕರೆಸಿಕೊಂಡ ಸಿಎಂ ಯಡಿಯೂರಪ್ಪ, ಮಾಧುಸ್ವಾಮಿಗೆ ಕ್ಲಾಸ್ ತೆಗೆದುಕೊಂಡ ಸಿಎಂ ಯಡಿಯೂರಪ್ಪ, ಉಪ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ಸರಿ ಇದ್ಯಾ..? ನೀವು ಒಂದು ಸಮುದಾಯದ ಬಗ್ಗೆ ಈ ರೀತಿ ಮಾತನಾಡೋದು ಸರಿನಾ..? ಎಂದೆಲ್ಲಾ ಪ್ರಶ್ನಿಸಿದ್ದಾರೆ. ಇನ್ನು ಈ ರೀತಿ ಮಾತಾಡಿದ್ರೆ ಸಮುದಾಯ ವಿರೋಧ ಕಟ್ಟಿಕೊಂಡಂತೆ ಆಗಲ್ವಾ..? ಆಗ ನಮ್ಮ ಅಭ್ಯರ್ಥಿಗಳಿಗೆ ಹಿನ್ನಡೆ ಆಗೋದಿಲ್ವಾ..? ಎಂದೆಲ್ಲಾ ಬುದ್ಧಿವಾದ ಹೇಳಿದ್ದಾರೆ.

ಸಿಎಂ ಯಡಿಯೂರಪ್ಪ ಭೇಟಿ ನಂತರ ಬಹಳ ಬೇಸರವಾಗಿಯೇ ಬಂದ ಮಾಧುಸ್ವಾಮಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಲು ಹಿಂದೆ ಮುಂದೆ ನೋಡಿದ್ರು. ಆದ್ರೆ ಮಾತಿನಲ್ಲಿ ತನ್ನ ದರ್ಪ ಮುಂದುವರಿಸಿದ್ರು. ನಾನು ಯಾವುದೇ ಸ್ವಾಮೀಜಿ ವಿರುದ್ಧ ಮಾತಾಡಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಎಲ್ಲಾ ಸ್ವಾಮೀಜಿಯವರನ್ನು ಗೌರವದಿಂದ ನೋಡುವವನು ನಾನು. ಸ್ವಾಮೀಜಿಯವರನ್ನು ಏಕವಚನದಲ್ಲಿ ಮಾತಾಡಿಲ್ಲ. ಚರ್ಚೆ ಕೊನೆಯಲ್ಲಿ ಒರಟಾಗಿ ಮಾತಾಡಿದ್ದೇನೆ ಅಷ್ಟೆ ಎಂದರು‌. ಜೊತೆಗೆ ನನಗೆ ಯಾರು ಏನು ಮಾಡೋಕೆ ಆಗಲ್ಲ. ನನಗ್ಯಾರೀ ಏನ್ ಮಾಡ್ತಾರೆ..? ಎಂದು ಪ್ರಶ್ನಿಸುವ ಮೂಲಕ ಮತ್ತೆ ತನ್ನ ಹಳೇ ದರ್ಪದ ಮಾತು ಪ್ರದರ್ಶನ ಮಾಡಿದ್ದಾರೆ.

Leave a Reply