ರೈತರ ಹೆಸರಲ್ಲಿ ಪರಿಸರ ಮಾಲೀನ್ಯ ಚರ್ಚೆ ಬೇಸರದ ವಿಚಾರ: ಡಿಕೆ ಸುರೇಶ್

ಡಿಜಿಟಲ್ ಕನ್ನಡ ಟೀಮ್:

ಕಳೆದ ಹದಿನೈದು ದಿನಗಳಿಂದ ದೇಶದಲ್ಲಿ ವಾಯು ಮಾಲೀನ್ಯದ ಕುರಿತು ಚರ್ಚೆಯಾಗುತ್ತಿದೆ. ಇಲ್ಲಿ ರೈತರ ಹೆಸರಿನಲ್ಲಿ ಪರಿಸರ ಮಾಲೀನ್ಯದ ಬಗ್ಗೆ ಮಾತನಾಡುತ್ತಿರುವುದು ಬಹಳ ದುಃಖಕರ ವಿಚಾರ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಪರಿಸರ ಮಾಲಿನ್ಯ ವಿಚಾರವಾಗಿ ಗುರುವಾರ ನಡೆದ ಚರ್ಚೆ ವೇಳೆ ಕನ್ನಡದಲ್ಲೇ ಮಾತನಾಡಿದ ಸಂಸದ ಡಿಕೆ ಸುರೇಶ್, ನಿಜವಾಗಿಯು ಪರಿಸರ ಮಾಲೀನ್ಯವಾಗುತ್ತಿರುವುದು ನಗರೀಕರಣ ಹಾಗೂ ಕೈಗಾರಿಕೆಗಳಿಂದ. ಆದರೆ ರೈತರ ಕೆಲಸದಿಂದ ವಾಯು ಮಾಲಿನ್ಯವಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…

ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿನ ವಾಯು ಮಾಲಿನ್ಯ ವಿಚಾರದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ರೈತರು ಬೆಳೆದ ಬೆಳೆಯ ತ್ಯಾಜ್ಯವನ್ನು ಸುಡುವುದರಿಂದ ವಾಯು ಮಾಲೀನ್ಯವಾಗುತ್ತಿದೆ ಎಂದು ದೂಷಿಸುವುದು ಸರಿಯಲ್ಲ. ರೈತರು ಅನ್ನ ಕೊಡುವವರು, ದುಡಿಯುವ ವರ್ಗದ ಜನ. ನಾವು ನೀವು, ಸರ್ಕಾರ, ಮಾಧ್ಯಮಗಳು ಅವರಿಗೆ ಯಾವ ಮಾರ್ಗದರ್ಶನ ನೀಡುತ್ತೇವೋ ಅದನ್ನು ಅವರು ಅನುಸರಿಸುವವರು. ಹೀಗಾಗಿ ಅವರ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ ಎಂದು ಈ ಸದನದ ಮೂಲಕ ನಾನು ಹೇಳುತ್ತೇನೆ.

ನಾವು ಬಂಡವಾಳಶಾಹಿಗಳ ಬಗ್ಗೆ ಮಾತನಾಡುತ್ತಿಲ್ಲ, ಕೈಗಾರಿಕೆಗಳಿಂದ ಆಗುತ್ತಿರುವ ಮಾಲೀನ್ಯದ ಬಗ್ಗೆ ಮಾತನಾಡುತ್ತಿಲ್ಲ. ನಗರೀಕರಣ, ಅದರ ಕಾರಣದ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಕೈಗಾರಿಕೆಗಳಿಂದ ವಾಯು ಮಾಲೀನ್ಯ, ಜಲ ಮಾಲೀನ್ಯವಾಗುತ್ತಿದ್ದು ಅಂತರ್ಜಲ ಹಾಳಾಗುತ್ತಿದೆ. ಇದು ನಮ್ಮ ಮುಂದಿನ ಪೀಳಿಗೆ ಮೇಲೆ ಪರಿಣಾಮ ಬೀರಲಿದ್ದು, ಇದೊಂದು ಎಚ್ಚರಿಕೆ ಗಂಟೆಯಾಗಿದೆ. ಹೀಗಾಗಿ ಈ ಬಗ್ಗೆ ಇಂದು ಸದನದಲ್ಲಿ ನಡೆಯುತ್ತಿರುವ ಚರ್ಚೆ ಉತ್ತಮವಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ಒಲ್ಳೆಯದಾಗುತ್ತದೆ. ಇದನ್ನು ನಿಭಾಯಿಸಲು ಸರ್ಕಾರ ಉತ್ತಮ ನಿರ್ಧಾರ, ಕಠಿಣ ಕಾನೂನುಗಳನ್ನು ಜಾರಿಗೆ ತರಲಿ. ಆಗ ಮುಂದಿನ ಪೀಳಿಗೆಗೆ ಉತ್ತಮ ಜೀವನ ನಡೆಸಲು ಅವಕಾಶ ನೀಡುತ್ತದೆ.

ನಾನು ಕರ್ನಾಟಕದ ಬೆಂಗಳೂರು ಗ್ರಾಮಾಂತ್ರವನ್ನು ಪ್ರತಿನಿಧಿಸುತ್ತಿದ್ದೇನೆ. ಬೆಂಗಳೂರು ವಿಶ್ವದ ಗಮನ ಸೆಳೆಯುತ್ತಿರುವ ನಗರ. ಬೆಳಂದೂರು ಕೆರೆ ಮಾಲೀನ್ಯ ವಿಚಾರವಾಗಿ ಹಸಿರು ನ್ಯಾಯಾಧಿಕರಣ ಎರಡು ಮೂರು ಬಾರಿ ಪ್ರಶ್ನೆಯನ್ನು ಮಾಡಿದೆ. ಆದರೆ ಇವತ್ತಿನವರೆಗೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕಾರಣ ಏನು ಎಂದರೆ ಇಚ್ಛಾಶಕ್ತಿಯ ಕೊರತೆ. ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ, ಹಾಗೂ ಸರ್ಕಾರ ಮತ್ತು ಅಧಿಕಾರಿಗಳ ಹೊಂದಾಣಿಕೆ. ಈ ಎಲ್ಲದರ ಪರಿಣಾಮ ಬೆಳಂದೂರು ಕೆರೆ ಹಾಳಾಗಿದ್ದು, ಸುತ್ತಲಿನ ನಾಲ್ಕೈದು ಕಿ.ಮೀ ದೂರದ ಪ್ರದೇಶದಲ್ಲಿ ಜನರು ವಾಸಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಸಂದರ್ಭದಲ್ಲಿ ಹಸಿರು ನ್ಯಾಯಾಧಿಕರಣ ಆದೇಶ ನೀಡಿರುವ ಕಾರಣ ಕೇಂದ್ರ ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಹೆಚ್ಚು ಗಮನ ಹರಿಸಿ ಕಾಯಕಲ್ಪ ರೂಪಿಸಲು ನೆರವು ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ನನ್ನ ಕ್ಷೇತ್ರದಲ್ಲೂ ಕಾವೇರಿ ಹಾಗೂ ಅರ್ಕಾವತಿ ನದಿ ತಮಿಳುನಾಡಿಗೆ ಹರಿದು ಹೋಗುತ್ತದೆ. ಈ ನೀರನ್ನು ಪರಿಶುದ್ಧ ಮಾಡಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಅದಕ್ಕೆ ಹೆಚ್ಚಿನ ನೆರವನ್ನು ಕೇಂದ್ರ ಸರ್ಕಾರ ನೀಡಬೇಕು.

ಇನ್ನು ನನ್ನ ಕ್ಷೇತ್ರದಲ್ಲಿ ಬರುವ ಬಿಡದಿ ಕೈಗಾರಿಕ ಪ್ರದೇಶದಲ್ಲಿರುವ ಟೊಯೊಯಾ ವಾಹನ ತಯಾರಿಕಾ ಘಟಕದಿಂದ 500 ಎಕರೆ ಪ್ರದೇಶದ ಬೈಲಮಂಗಲ ಕೆರೆ ಕಲುಷಿತವಾಗಿದೆ. ಇದನ್ನು ಪರಿಶುದ್ಧಗೊಳಿಸಲು ಕೇಂದ್ರ ಸರ್ಕಾರ ಹೆಚ್ಚಿನ ನೆರವು ನೀಡಬೇಕು. ಕೇಂದ್ರ ಸಚಿವಾಲಯದಲ್ಲಿ ಹೆಚ್ಚಿನ ಹಣವಿದೆ, ಯೋಜನೆಗಳಿವೆ ಆದರೆ ಅದರ ಬಳಕೆ ಬಗ್ಗೆ ಮಾರ್ಗದರ್ಶನದ ಕೊರತೆ ಇದೆ.’

Leave a Reply